ACC U19 Asia Cup 2021 : ಬಾಂಗ್ಲಾದೇಶವನ್ನು ಮಣಿಸಿ ಫೈನಲ್‌ ಗೇರಿದ ಭಾರತ

By Suvarna NewsFirst Published Dec 30, 2021, 9:28 PM IST
Highlights

ಬಾಂಗ್ಲಾದೇಶ ವಿರುದ್ಧ 103 ರನ್ ಗಳ ಭರ್ಜರಿ ಗೆಲುವು
ಫೈನಲ್ ನಲ್ಲಿ ಶ್ರೀಲಂಕಾ ಎದುರಾಳಿ
ಇಂದು ನಡೆಯಲಿದೆ ಪ್ರಶಸ್ತಿ ಹೋರಾಟ

ಶಾರ್ಜಾ (ಡಿ. 30): ಶೇಖ್ ರಶೀದ್ (Shaik Rasheed) ಬಾರಿಸಿದ ಅಜೇಯ 90 ರನ್ ಗಳ ನೆರವಿನಿಂದ ಭಾರತ (India ) ತಂಡ ಅಂಡರ್ 19 ಏಷ್ಯಾಕಪ್ (ACC U19 Asia Cup 2021 ) ಟೂರ್ನಿಯ ಸೆಮಿಫೈನಲ್ ನಲ್ಲಿ ( Semi Final) ಬಾಂಗ್ಲಾದೇಶ  (Bangladesh) ತಂಡವನ್ನು ಸೋಲಿಸಿ ಫೈನಲ್‌ ಗೇರಲು ಯಶಸ್ವಿಯಾಗಿದೆ. ಗುರುವಾರ ನಡೆದ ಸೂಪರ್ ಫೈಟ್ ನಲ್ಲಿ ಭಾರತ ತಂಡ ಬರೋಬ್ಬರಿ 103 ರನ್ ಗಳಿಂದ ಬಾಂಗ್ಲಾದೇಶ ತಂಡವನ್ನು ಸೋಲಿಸಿತು. ಆ ಮೂಲಕ ಶುಕ್ರವಾರ ನಡೆಯಲಿರುವ ಪ್ರಶಸ್ತಿ ಕದನದಲ್ಲಿ ನೆರೆಯ ರಾಷ್ಟ್ರ ಶ್ರೀಲಂಕಾವನ್ನು (Srilanka)ಎದುರಿಸಲಿದೆ. 

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಶೇಖ್ ರಶೀದ್ ಭರ್ಜರಿ ಬ್ಯಾಟಿಂಗ್ ಮೂಲಕ ದೊಡ್ಡ ಮೊತ್ತಕ್ಕೆ ಕಾರಣರಾದರು. 108 ಎಸೆತಗಳ ಇನ್ನಿಂಗ್ಸ್ ನಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದ ಶೇಖ್ ರಶೀದ್ ಭಾರತ ತಂಡ 8 ವಿಕೆಟ್ ಗೆ 243 ರನ್ ಗಳಿಸಲು ನೆರವಾದರು. ಇದಕ್ಕೆ ಪ್ರತಿಯಾಗಿ ಬಾಂಗ್ಲಾದೇಶ, ಭಾರತ ತಂಡದ ಶಿಸ್ತಿನ ಬೌಲಿಂಗ್ ಗೆ ಮಂಡಿಯೂರಿದ್ದರಿಂದ 38.2 ಓವರ್ ಗಳಲ್ಲಿ ಕೇವಲ 140 ರನ್ ಗೆ ಆಲೌಟ್ ಆಯಿತು. 

ಚೇಸಿಂಗ್ ಮಾಡಿದ ಬಾಂಗ್ಲಾದೇಶ ತಂಡದ ಬ್ಯಾಟಿಂಗ್ ಆರಂಭದಿಂದಲೂ ಭಾರತದ ಬೌಲಿಂಗ್ ಮುಂದೆ ಪರದಾಟ ನಡೆಸಿತು. ಅರೀಫುಲ್ ಇಸ್ಲಾಂ (Ariful Islam) ತಂಡದ ಪರವಾಗಿ ಗರಿಷ್ಠ 77 ಎಸೆತಗಳಲ್ಲಿ42 ರನ್ ಪೇರಿಸಿದರೆ, ಆರಂಭಿಕ ಆಟಗಾರ ಮಹಿಫಿಜುಲ್ ಇಸ್ಲಾಂ (Mahfijul Islam) 26 ರನ್ ಬಾರಿಸಿದರು. ನಿರಂತರ ಅಂತರದಲ್ಲಿ ಬಾಂಗ್ಲಾದೇಶದ ವಿಕೆಟ್ ಗಳನ್ನು ಉರುಳಿಸಲು ಭಾರತ ಯಶಸ್ವಿಯಾಗಿದ್ದರಿಂದ ಸುಲಭವಾಗಿ ಗೆಲುವು ಕಂಡಿತು. ಬಾಂಗ್ಲಾ ಪರವಾಗಿ ಆರಿಫುಲ್ ಮಾತ್ರವೇ ಭಾರತಕ್ಕೆ ಕೆಲ ಹೊತ್ತು ತಡೆಗೋಡೆಯಾಗಿ ನಿಂತಿದ್ದರು. ಭಾರತದ ಪರವಾಗಿ ರವಿ ಕುಮಾರ್ (22ಕ್ಕೆ 2), ವಿಕ್ಕಿ ಓತ್ಸ್ವಾಲ್ (25ಕ್ಕೆ 2), ರಾಜ್ ಬಾವಾ (26ಕ್ಕೆ 2) ಹಾಗೂ ರಾಜ್ಯವರ್ಧನ್ (36ಕ್ಕೆ 2) ತಮ್ಮ ನಡುವೆ 8 ವಿಕೆಟ್ ಗಳನ್ನು ಹಂಚಿಕೊಂಡರೆ, ಕೌಶಾಲ್ ತಂಬೆ ಹಾಗೂ ನಿಶಾಂತ್ ಸಿಂಧು ಉಳಿದ ಎರಡು ವಿಕೆಟ್ ಗಳನ್ನು ಪಡೆದರು.

A spirited bowling performance from India help them reach the finals of the tournament.

🇮🇳 - 243/8 in 50 overs
🇧🇩 - 140/10 in 38.2 overs pic.twitter.com/O5zJnvdxrw

— AsianCricketCouncil (@ACCMedia1)


ಭಾರತ ತಂಡ ತನ್ನ ಇಬ್ಬರು ಆರಂಭಿಕರನ್ನು 50 ರನ್ ಗಳ ಒಳಗಾಗಿ ಕಳೆದುಕೊಂಡಿತು. ಆಂಗ್ ಕ್ರಿಶ್ ರಘುವಂಶಿ (16) ಹಾಗೂ ಹರ್ನೂರ್ ಸಿಂಗ್ (15) ವಿಕೆಟ್ ಕಳೆದುಕೊಂಡ ಬಳಿಕ ಮೈದಾನಕ್ಕೆ ಇಳಿದ ಶೇಖ್ ರಶೀದ್ ಕೊನೆಯ ಎಸೆತದವರೆಗೂ ಕ್ರೀಸ್ ನಲ್ಲಿದ್ದು ತಂಡದ ಮೊತ್ತವನ್ನು ಏರಿಸಿದರು. ನಿಶಾಂತ್ ಸಿಧು (5) ಕೂಡ ಬೇಗನೆ ನಿರ್ಗಮನ ಕಂಡಾಗ ನಾಯಕ ಯಶ್ ಧುಲ್ ಜೊತೆ ನಾಲ್ಕನೇ ವಿಕೆಟ್ ಗೆ 41 ರನ್ ಜೊತೆಯಾಟವಾಡುವ ಮೂಲಕ ಶೇಖ್ ರಶೀದ್ ಚೇತರಿಕೆ ನೀಡಿದ್ದರು. ಕೆಳ ಕ್ರಮಾಂಕದ ಬ್ಯಾಟಿಂಗ್ ನಲ್ಲಿ ರಾಜ್ ಬಾವಾ (23), ವಿಕ್ಕಿ ಓತ್ಸ್ವಾಲ್ (28) ಹಾಗೂ ರಾಜ್ಯವರ್ಧನ್ (16) ಉಪಯುಕ್ತ ರನ್ ಗಳನ್ನು ಪೇರಿಸಿದ್ದರಿಂದ ಭಾರತ ತಂಡ ಉತ್ತಮ ಮೊತ್ತ ಪೇರಿಸಲು ಯಶ ಕಂಡಿತು. ರಶೀದ್ ಸ್ಫೋಟಕ ಬ್ಯಾಟಿಂಗ್ ಮಾಡದೇ ಇದ್ದರೂ, ಎಚ್ಚರಿಕೆಯ ಬ್ಯಾಟಿಂಗ್ ಆಡುವ ಮೂಲಕ ಟೀಂ ಇಂಡಿಯಾದ ಬೌಲರ್ ಗಳನ್ನು ರಕ್ಷಣೆ ಮಾಡಿಕೊಳ್ಳಬಹುದಾದ ಗುರಿಯನ್ನು ನೀಡಲು ಯಶಸ್ವಿಯಾಗಿದ್ದರು. ಬಾಂಗ್ಲಾದೇಶ ಪರವಾಗಿ ಎಡಗೈ ಸ್ಪಿನ್ನರ್ ರಕೀಬುಲ್ ಹಸನ್ 41 ರನ್ ಗೆ 3 ವಿಕೆಟ್ ಉರುಳಿಸುವ ಮೂಲಕ ಯಶಸ್ವಿ ಬೌಲರ್ ಎನಿಸಿದರು.

Ashes 2021-22: ಸಿಡ್ನಿ ಟೆಸ್ಟ್‌ನಲ್ಲಿ ಕೋಚ್ ಇಲ್ಲದೇ ಕಣಕ್ಕಿಳಿಯಲಿದೆ ಇಂಗ್ಲೆಂಡ್ ಕ್ರಿಕೆಟ್ ತಂಡ..!
ದಿನದ ಇನ್ನೊಂದು ಸೆಮಿಫೈನಲ್ ನಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಕಾದಾಟ ನಡೆಸಿದ್ದರೆ, ಅಲ್ಪ ಮೊತ್ತದ ಮುಖಾಮುಖಿಯಲ್ಲಿ ದ್ವೀಪರಾಷ್ಟ್ರ ಶ್ರೀಲಂಕಾ 22 ರನ್ ಗಳಿಂದ  ಪಾಕಿಸ್ತಾನ ತಂಡವನ್ನು ಸೋಲಿಸಿತು. ಶ್ರೀಲಂಕಾ ತಂಡ ಕೇವಲ 147 ರನ್ ಗೆ ಆಲೌಟ್ ಆದರೆ, ಈ ಮೊತ್ತವನ್ನು ಬೆನ್ನಟ್ಟುವಲ್ಲಿ ಪರದಾಡಿದ ಪಾಕಿಸ್ತಾನ 125 ರನ್ ಗೆ ಆಲೌಟ್ ಆಗಿ 22 ರನ್ ಸೋಲು ಕಂಡಿತು.

ಭಾರತ: 8 ವಿಕೆಟ್ ಗೆ 243 (ಶೇಖ್ ರಶೀದ್ 90*, ರಕೀಬುಲ್ ಹಸನ್ 41ಕ್ಕೆ 3), ಬಾಂಗ್ಲಾದೇಶ: 38.2 ಓವರ್ ಗಳಲ್ಲಿ 140 (ಆರಿಫುಲ್ ಇಸ್ಲಾಂ 42, ರವಿಕುಮಾರ್ 22ಕ್ಕೆ 2, ವಿಕ್ಕಿ ಓತ್ಸ್ವಾಲ್ 25ಕ್ಕೆ 2, ರಾಜ್ ಬಾವಾ 26ಕ್ಕೆ 2, ರಾಜ್ಯವರ್ಧನ್ 36ಕ್ಕೆ 2).

click me!