* ವಿಂಡೀಸ್ ಎದುರಿನ 3ನೇ ಟಿ20 ಪಂದ್ಯದಲ್ಲಿ ಭಾರತ ಜಯಭೇರಿ
* 3ನೇ ಪಂದ್ಯದಲ್ಲಿ ಅಪರೂಪದ ದಾಖಲೆ ಬರೆದ ನಾಯಕ ರೋಹಿತ್ ಶರ್ಮಾ
* ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸಾಧನೆಗೂ ಮತ್ತೊಂದು ಗರಿ ಸೇರ್ಪಡೆ
ಬಾಸೆಟೆರೆ(ಆ.03): ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 2-1 ಅಂತರದ ಮುನ್ನಡೆ ಸಾಧಿಸಿದೆ. ಇನ್ನು ಇದೇ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅಪರೂಪದ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ನಾಯಕ ರೋಹಿತ್ ಶರ್ಮಾ, ರನ್ ಮಷೀನ್ ಎನಿಸಿಕೊಂಡಿರುವ ಮಾಜಿ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಎರಡನೇ ಟಿ20 ಪಂದ್ಯ ಮುಕ್ತಾಯವಾಗಿ 24 ಗಂಟೆ ಕಳೆಯುವಷ್ಟರಲ್ಲೇ ಮೂರನೇ ಟಿ20 ಪಂದ್ಯವನ್ನಾಡಲು ಕಣಕ್ಕಿಳಿದ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಇದೇ ವೇಳೆ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ನಾಯಕ ಎನ್ನುವ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ರೋಹಿತ್ ಶರ್ಮಾ ಯಶಸ್ವಿಯಾಗಿದ್ದಾರೆ.
ಮೂರನೇ ಟಿ20 ಪಂದ್ಯ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಲಾ 59 ಸಿಕ್ಸರ್ ಚಚ್ಚಿದ್ದರು. ಆದರೆ ವಿಂಡೀಸ್ ಎದುರಿನ ಮೂರನೇ ಟಿ20 ಪಂದ್ಯದ ಎರಡನೇ ಓವರ್‌ನಲ್ಲಿ ಅಲ್ಜೆರಿ ಜೋಸೆಫ್ ಬೌಲಿಂಗ್‌ನಲ್ಲಿ ಸಿಕ್ಸರ್ ಚಚ್ಚುವ ಮೂಲಕ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕುವಲ್ಲಿ ಹಿಟ್‌ಮ್ಯಾನ್ ಯಶಸ್ವಿಯಾಗಿದ್ದಾರೆ. ರೋಹಿತ್ ಶರ್ಮಾ 11 ರನ್ ಬಾರಿಸಿದ್ದಾಗ ಬೆನ್ನು ಸೆಳೆತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್ ಸೇರಿದರು.
ಭಾರತ ಪರ ಅಪರೂಪದ ದಾಖಲೆ ನಿರ್ಮಿಸಿದ ಹಾರ್ದಿಕ್ ಪಾಂಡ್ಯ
ವೆಸ್ಟ್ ಇಂಡೀಸ್ ಎದುರಿನ ಮೂರನೇ ಟಿ20 ಪಂದ್ಯದ ವೇಳೆ ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 500 ರನ್ ಹಾಗೂ 50 ವಿಕೆಟ್ ಕಬಳಿಸಿದ ಭಾರತದ ಮೊದಲ ಆಲ್ರೌಂಡರ್ ಎನ್ನುವ ದಾಖಲೆ ನಿರ್ಮಿಸಿದ್ದಾರೆ.
ವಿಂಡೀಸ್ ಎದುರಿನ 3ನೇ ಟಿ20 ಪಂದ್ಯದಲ್ಲಿ ಕೈಲ್ ಮೇಯರ್ಸ್ ವಿಕೆಟ್ ಕಬಳಿಸುವುದರೊಂದಿಗೆ ಪಾಂಡ್ಯ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 50 ವಿಕೆಟ್ ಕಬಳಿಸಿದ ಭಾರತದ 6ನೇ ಬೌಲರ್ ಎನ್ನುವ ಹಿರಿಮೆಗೆ ಪಾತ್ರರಾದರು. ವಿಂಡೀಸ್ ಎದುರಿನ ಎರಡನೇ ಟಿ20 ಪಂದ್ಯದ ವೇಳೆ ರವೀಂದ್ರ ಜಡೇಜಾ ಕೂಡಾ ಟಿ20 ಕ್ರಿಕೆಟ್‌ನಲ್ಲಿ 50 ವಿಕೆಟ್ ಕಬಳಿಸಿದ್ದ ಸಾಧನೆ ಮಾಡಿದದ್ದರು.
WI vs Ind: ವಿಂಡೀಸ್ ವಿರುದ್ಧದ 3ನೇ ಪಂದ್ಯ ಗೆದ್ದ ಭಾರತ, ಸರಣಿಯಲ್ಲಿ ಮುನ್ನಡೆ ಸಾಧಿಸಿದ ಟೀಂ ಇಂಡಿಯಾ
ಇನ್ನು 2016ರಲ್ಲಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಹಾರ್ದಿಕ್ ಪಾಂಡ್ಯ, ಇದೀಗ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ 50 ವಿಕೆಟ್ ಹಾಗೂ 500+ ರನ್ ಬಾರಿಸಿದ ಮೊದಲ ಪುರುಷ ಆಲ್ರೌಂಡರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮೊದಲು ಭಾರತ ಮಹಿಳಾ ತಂಡದ ದೀಪ್ತಿ ಶರ್ಮಾ 50 ವಿಕೆಟ್ ಹಾಗೂ 500+ ರನ್ ಬಾರಿಸಿದ ಸಾಧನೆ ಮಾಡಿದ್ದರು. ಸದ್ಯ ದೀಪ್ತಿ ಶರ್ಮಾ 65 ವಿಕೆಟ್ ಹಾಗೂ 521 ರನ್ ಬಾರಿಸಿದ್ದಾರೆ.