
ಗಾಲೆ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬಲಿಷ್ಠ ಸ್ಥಿತಿಯಲ್ಲಿದ್ದರೂ ವರುಣನ ಅಬ್ಬರ ಭಾರತದ ಗೆಲುವಿನ ಆಸೆಗೆ ತಣ್ಣೀರು ಎರಚುವ ಮುನ್ಸೂಚನೆ ನೀಡಿದೆ. ಗಾಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯಕ್ಕೆ ಮಳೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದ್ದು, ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ತಲುಪುವ ಭಾರತದ ಕನಸಿಗೆ ಪೆಟ್ಟು ನೀಡುವ ಸಾಧ್ಯತೆಯಿದೆ.
ಪಂದ್ಯದ ಮೊದಲ ದಿನದಿಂದಲೇ ಮಳೆ ತನ್ನ ಆಟ ಶುರು ಮಾಡಿದೆ. ಮೊದಲ ದಿನ ಪೂರ್ಣ ಆಟ ನಡೆಯಲು ಬಿಡದ ವರುಣ, ಎರಡನೇ ದಿನವೂ ವಿಳಂಬಕ್ಕೆ ಕಾರಣನಾದ. ಹವಾಮಾನ ವರದಿಯ ಪ್ರಕಾರ ಮುಂದಿನ ಮೂರು ದಿನಗಳ ಕಾಲ ಗಾಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಅದರಲ್ಲೂ ಮೂರನೇ ದಿನದಾಟಕ್ಕೆ ಶೇ. 81 ರಷ್ಟು ಮಳೆ ಅಡ್ಡಿಪಡಿಸುವ ಸೂಚನೆಯಿದ್ದು, ಪಂದ್ಯವು ಡ್ರಾದಲ್ಲಿ ಅಂತ್ಯಗೊಳ್ಳುವ ಅಥವಾ ರದ್ದಾಗುವ ಸಾಧ್ಯತೆಗಳು ದಟ್ಟವಾಗಿವೆ.
ಶುಭ್‌ಮನ್ ಗಿಲ್ ನಾಯಕತ್ವದ ಭಾರತ ತಂಡಕ್ಕೆ ಈ ಪಂದ್ಯದ ಫಲಿತಾಂಶ ಅತ್ಯಂತ ನಿರ್ಣಾಯಕ. ಪಂದ್ಯ ಗೆದ್ದರೆ ಸಿಗುವ 12 ಪಾಯಿಂಟ್‌ಗಳ ಬದಲಿಗೆ, ಪಂದ್ಯ ಡ್ರಾವಾದರೆ ಭಾರತಕ್ಕೆ ಕೇವಲ 4 ಪಾಯಿಂಟ್‌ಗಳು ಮಾತ್ರ ಸಿಗಲಿವೆ. ಸದ್ಯ 48.15 ರಷ್ಟು ಪಾಯಿಂಟ್‌ಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಭಾರತ, ಪಂದ್ಯ ಡ್ರಾವಾದರೆ 46.67ಕ್ಕೆ ಕುಸಿಯಲಿದೆ. ಇದು ಫೈನಲ್ ರೇಸ್‌ನಲ್ಲಿರುವ ಭಾರತಕ್ಕೆ ದೊಡ್ಡ ಹಿನ್ನಡೆಯಾಗಲಿದೆ.
ಮತ್ತೊಂದೆಡೆ ಡಾರ್ವಿನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶ ಐತಿಹಾಸಿಕ ಜಯ ಸಾಧಿಸಿರುವುದು ಭಾರತದ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಗೆಲುವಿನೊಂದಿಗೆ ಬಾಂಗ್ಲಾದೇಶ ತನ್ನ ಪಾಯಿಂಟ್ಸ್ ಶೇಕಡಾವಾರನ್ನು 66.67ಕ್ಕೆ ಏರಿಸಿಕೊಂಡು 4ನೇ ಸ್ಥಾನಕ್ಕೇರಿದೆ. ಸದ್ಯ ಆಸ್ಟ್ರೇಲಿಯಾ (77.78%) ಮತ್ತು ದಕ್ಷಿಣ ಆಫ್ರಿಕಾ (75%) ಮೊದಲೆರಡು ಸ್ಥಾನಗಳಲ್ಲಿದ್ದು, ಭಾರತ 5ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಒಂದು ವೇಳೆ ಗಾಲೆ ಟೆಸ್ಟ್ ಮಳೆಯಿಂದಾಗಿ ಫಲಿತಾಂಶವಿಲ್ಲದೆ ಅಂತ್ಯಗೊಂಡರೆ, ಭಾರತವು WTC ಫೈನಲ್ ತಲುಪಲು ಮುಂದಿನ ಎಂಟು ಟೆಸ್ಟ್ ಪಂದ್ಯಗಳಲ್ಲಿ ಕನಿಷ್ಠ ಏಳರಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಲಿದೆ. ಇನ್ಮುಂದೆ ಸಣ್ಣ ತಪ್ಪುಗಳಿಗೂ ಇಲ್ಲಿ ಅವಕಾಶವಿಲ್ಲ.
ಬಾಂಗ್ಲಾದೇಶದ ಅನಿರೀಕ್ಷಿತ ಫಾರ್ಮ್ ಮತ್ತು ಗಾಲೆಯಲ್ಲಿ ವರುಣನ ಕಾಟದಿಂದಾಗಿ ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಯಾಣ ಈಗ ಕತ್ತಿ ಸೋದಂತಾಗಿದೆ. ಮಳೆ ನಿಂತು ಭಾರತಕ್ಕೆ ಗೆಲ್ಲುವ ಅವಕಾಶ ಸಿಗಲಿದೆಯೇ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.