Ind vs SA: ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ ಟೆಸ್ಟ್‌ ವೃತ್ತಿ ಬದುಕು ಮುಕ್ತಾಯ?

Suvarna News   | Asianet News
Published : Jan 15, 2022, 01:24 PM IST
Ind vs SA: ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ ಟೆಸ್ಟ್‌ ವೃತ್ತಿ ಬದುಕು ಮುಕ್ತಾಯ?

ಸಾರಾಂಶ

* ಭಾರತ ಹಾಗೂ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಪೂಜಾರ-ರಹಾನೆ ಫೇಲ್‌ * ಈ ಇಬ್ಬರು ಆಟಗಾರರ ಮೇಲೆ ವ್ಯಕ್ತವಾಯ್ತು ವ್ಯಾಪಕ ಟೀಕೆ * ಟೆಸ್ಟ್ ಸರಣಿ ಸೋಲಿಗೆ ಬ್ಯಾಟಿಂಗ್ ವೈಫಲ್ಯ ಕಾರಣವೆಂದ ಕೊಹ್ಲಿ

ಬೆಂಗಳೂರು(ಜ.15): ದಕ್ಷಿಣ ಆಫ್ರಿಕಾ ನೆಲದಲ್ಲಿ ಚೊಚ್ಚಲ ಟೆಸ್ಟ್‌ ಸರಣಿ ಗೆಲ್ಲುವ ಟೀಂ ಇಂಡಿಯಾ (Team India) ಕನಸು ಭಗ್ನವಾಗಿದೆ. ಸೆಂಚೂರಿಯನ್ ಟೆಸ್ಟ್ ಪಂದ್ಯವನ್ನು ಗೆದ್ದು, ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶುಭಾರಂಭ ಮಾಡಿದ್ದ ಭಾರತ ತಂಡವು ಇದಾದ ಬಳಿಕ ನಡೆದ ಜೋಹಾನ್ಸ್‌ಬರ್ಗ್ ಹಾಗೂ ಸೆಂಚೂರಿಯನ್ ಟೆಸ್ಟ್ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಸೋಲನನ್ನುಭವಿಸಿ ಸರಣಿಯನ್ನು ಕೈಚೆಲ್ಲಿದೆ. ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ವೈಫಲ್ಯತೆ ಟೆಸ್ಟ್ ಸರಣಿ ಸೋಲಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. 

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಹಿರಿಯ ಬ್ಯಾಟರ್‌ಗಳಾದ ಚೇತೇಶ್ವರ್‌ ಪೂಜಾರ (Cheteshwar Pujara) ಹಾಗೂ ಅಜಿಂಕ್ಯ ರಹಾನೆಗೆ (Ajinkya Rahane) ಕೊನೆಯ ಅವಕಾಶವಾಗಿತ್ತು. ಆದರೆ ಈ ಇಬ್ಬರು ಮತ್ತೊಮ್ಮೆ ದಯನೀಯ ವೈಫಲ್ಯ ಕಂಡಿದ್ದಾರೆ. 2ನೇ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ತಲಾ ಅರ್ಧಶತಕಗಳನ್ನು ಬಾರಿಸಿದ್ದನ್ನು ಬಿಟ್ಟರೆ ಇಬ್ಬರ ಕೊಡುಗೆ ಏನೇನೂ ಇಲ್ಲ. ಚೇತೇಶ್ವರ್ ಪೂಜಾರ ಕೆಲ ಕ್ಯಾಚ್‌ಗಳನ್ನು ಕೈಚೆಲ್ಲಿ ತಂಡಕ್ಕೆ ಹಿನ್ನಡೆ ಉಂಟು ಮಾಡಿದರು. ಬಹುತೇಕ ಇಬ್ಬರ ಟೆಸ್ಟ್‌ ವೃತ್ತಿಬದುಕು ಮುಗಿಯಿತು ಎಂದೇ ಹಲವರು ಅಭಿಪ್ರಾಯಿಸುತ್ತಿದ್ದಾರೆ. ಮುಂಬರುವ ಶ್ರೀಲಂಕಾ ವಿರುದ್ಧದ ಸರಣಿಗೆ ಶ್ರೇಯಸ್‌ ಅಯ್ಯರ್‌(Shreyas Iyer), ಶುಭ್‌ಮನ್‌ ಗಿಲ್‌ಗೆ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

‘ಪುರಾನೆ’ಗಳ ಬಗ್ಗೆ ಭಾರೀ ಟ್ರೋಲ್‌!

ಸತತ ವೈಫಲ್ಯ ಅನುಭವಿಸುತ್ತಿರುವ ಪೂಜಾರ ಹಾಗೂ ರಹಾನೆಯನ್ನು ‘ಪುರಾನೆ’(ಹಳೆಯದು) ಎಂದು ಟೀಕಿಸುತ್ತಿರುವ ಕ್ರಿಕೆಟ್‌ ಅಭಿಮಾನಿಗಳು, ಸಾಮಾಜಿಕ ತಾಣಗಳಲ್ಲಿ ಭಾರೀ ಟ್ರೋಲ್‌ ಮಾಡುತ್ತಿದ್ದಾರೆ. ಪೂಜಾರ ಔಟಾಗಿ ಹೊರಟರೆ ಹಿಂದೆ ರಹಾನೆಯೂ ಹೋಗುತ್ತಾರೆ ಎಂದು ಅಭಿಮಾನಿಯೊಬ್ಬ ಟ್ವೀಟ್‌ ಮಾಡಿದರೆ, ಇಬ್ಬರೂ ಈಗಾಗಲೇ ನಿವೃತ್ತಿ ಬಳಿಕ ಏನು ಮಾಡಬೇಕು ಎನ್ನುವುದನ್ನು ಚರ್ಚಿಸುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.

ಬ್ಯಾಟಿಂಗ್‌ ವೈಫಲ್ಯವೇ ಸೋಲಿಗೆ ಕಾರಣ: ಕೊಹ್ಲಿ

ಭಾರತ ಸರಣಿ ಸೋಲು ಕಾಣಲು ಬ್ಯಾಟಿಂಗ್‌ ವೈಫಲ್ಯವೇ ಕಾರಣ ಎಂದು ನಾಯಕ ವಿರಾಟ್‌ ಕೊಹ್ಲಿ (Virat Kohli) ಹೇಳಿದ್ದಾರೆ. 3ನೇ ಟೆಸ್ಟ್‌ ಮುಕ್ತಾಯಗೊಂಡ ಬಳಿಕ ಮಾತನಾಡಿದ ಕೊಹ್ಲಿ, ‘ನಮ್ಮ ಸೋಲಿಗೆ ಬ್ಯಾಟಿಂಗ್‌ ವೈಫಲ್ಯವಲ್ಲದೇ ಬೇರೆ ಇನ್ನೇನೂ ಕಾರಣ ಕಾಣಿಸುತ್ತಿಲ್ಲ. ಬ್ಯಾಟಿಂಗ್‌ ವಿಭಾಗದಲ್ಲಿ ಕೆಲ ಬದಲಾವಣೆ ಖಂಡಿತ ಅಗತ್ಯವಿದೆ. ಅದರಲ್ಲಿ ಅನುಮಾನವೇ ಇಲ್ಲ. ಪದೇಪದೇ ಕುಸಿತಗಳನ್ನು ಕಾಣುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದರು.

ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಭಾರತ 3ನೇ ಸ್ಥಾನಕ್ಕೆ?

ವಿಶ್ವ ನಂ.1 ತಂಡವಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದ ಭಾರತ 1-2ರಲ್ಲಿ ಸರಣಿ ಸೋತ ಬಳಿಕ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ (ICC Test Rankings) ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿಯುವ ನಿರೀಕ್ಷೆ ಇದೆ. ಪರಿಷ್ಕೃತ ಪಟ್ಟಿ ಶೀಘ್ರ ಪ್ರಕಟಗೊಳ್ಳಲಿದ್ದು, ನ್ಯೂಜಿಲೆಂಡ್‌ ಮೊದಲ ಸ್ಥಾನಕ್ಕೇರಲಿದ್ದು, ಆಸ್ಪ್ರೇಲಿಯಾ 2ನೇ ಸ್ಥಾನ ಪಡೆಯುವ ಸಾಧ್ಯತೆ ಇದೆ.

Ind vs SA: ಕೇಪ್‌ಟೌನ್ ಟೆಸ್ಟ್‌ನಲ್ಲಿ ಮುಗ್ಗರಿಸಿದ ಭಾರತ, ಟೆಸ್ಟ್ ಸರಣಿ ದಕ್ಷಿಣ ಆಫ್ರಿಕಾ ಪಾಲು..!

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌: 5ನೇ ಸ್ಥಾನಕ್ಕೆ ಕುಸಿದ ಭಾರತ

2021-23ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (ICC World Test Championship) ಅಂಕಪಟ್ಟಿಯಲ್ಲಿ ಭಾರತ 5ನೇ ಸ್ಥಾನಕ್ಕೆ ಕುಸಿದಿದೆ. ತಂಡ ಆಡಿರುವ 9 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 3ರಲ್ಲಿ ಸೋತು, 1 ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಒಟ್ಟು 108 ಅಂಕಗಳಿಗೆ ಸ್ಪರ್ಧಿಸಿದ್ದ ಭಾರತ 53 ಅಂಕ ಗಳಿಸಿದ್ದು ತಂಡ ಶೇ.49.07 ಅಂಕ ಪ್ರತಿಶತ ಹೊಂದಿದೆ.

ಜನವರಿ 19ರಿಂದ ಏಕದಿನ ಸರಣಿ

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ 3 ಪಂದ್ಯಗಳ ಏಕದಿನ ಸರಣಿ ಜನವರಿ 19ರಂದು ಆರಂಭಗೊಳ್ಳಲಿದೆ. ಜನವರಿ 21ಕ್ಕೆ 2ನೇ ಪಂದ್ಯ ನಡೆಯಲಿದೆ. ಮೊದಲೆರಡು ಪಂದ್ಯಗಳಿಗೆ ಪಾರ್ಲ್‌ ಆತಿಥ್ಯ ವಹಿಸಲಿದ್ದು, 3ನೇ ಪಂದ್ಯ ಜನವರಿ 23ರಂದು ಕೇಪ್‌ಟೌನ್‌ನಲ್ಲಿ ನಡೆಯಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!