IND vs SA T20 ಟೀಂ ಇಂಡಿಯಾ ದಾಳಿಗೆ ಸೌತ್ ಆಫ್ರಿಕಾ ಉಡೀಸ್, 107 ರನ್ ಟಾರ್ಗೆಟ್!

By Suvarna NewsFirst Published Sep 28, 2022, 8:41 PM IST
Highlights

ಟೀಂ ಇಂಡಿಯಾ ಬೌಲರ್ಸ್ ದಾಳಿಗೆ ಸೌತ್ ಆಫ್ರಿಕಾ ತತ್ತರಿಸಿದೆ. ಒಂದೊಂದು ರನ್ ಸಿಡಿಸಲು ಪರದಾಡಿತು. ಅಂತಿಮ ಹಂತದಲ್ಲಿ ವಿಕೆಟ್ ಉಳಿಸಿಕೊಳ್ಳಲು ಸೌತ್ ಆಫ್ರಿಕಾ ಹರಸಾಹಸ ಪಟ್ಟಿತು. ಇದರೊಂದಿಗೆ ಸೌತ್ ಆಫ್ರಿಕಾ 107ರನ್ ಟಾರ್ಗೆಟ್ ನೀಡಿದೆ.

ತಿರುವನಂತಪುರಂ(ಸೆ.28): ಟೀಂ ಇಂಡಿಯಾದ ಅರ್ಶದೀಪ್, ದೀಪಕ್ ಚಹಾರ್ ಹಾಗೂ ಹರ್ಷಲ್ ಪಟೇಲ್ ದಾಳಿಗೆ ಸೌತ್ ಆಫ್ರಿಕಾ ಬಳಿ ಉತ್ತರವೇ ಇರಲಿಲ್ಲ.  ಸೌತ್ ಆಫ್ರಿಕಾದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳು ಒಂದಂಕಿಗೆ ಪೆವಿಲಿಯನ್ ಸೇರಿದರು. ಇದರ ಪರಿಣಾಮ ಭಾರತ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 106 ರನ್ ಸಿಡಿಸಿದೆ. 

ಟಾಸ್ ಸೋತು ಬ್ಯಾಟಿಂಗ್ ಇಳಿದ ಸೌತ್ ಆಫ್ರಿಕಾ ಮೊದಲ ಓವರ್‌ನಲ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಯಕ ತೆಂಬಾ ಬುವುಮಾ ಖಾತೆ ತೆರೆಯುವ ಮುನ್ನವೇ ಔಟಾದರು. ಎರಡನೇ ಓವರ್‌ನಲ್ಲಿ ಕ್ವಿಂಟನ್ ಡಿಕಾಕ್ ವಿಕೆಟ್ ಪತನಗೊಂಡಿತು. 1 ರನ್‌ಗಳಿಸುವಷ್ಟರಲ್ಲೇ ಸೌತ್ ಆಫ್ರಿಕಾ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಡಿಕಾಕ್ ಬೆನ್ನಲ್ಲೇ ರೀಲೆ ರೋಸೋ ಡಕೌಟ್ ಆದರು. 

ಸಂಜು ಸ್ಯಾಮ್ಸನ್ ಟೀಂ ಇಂಡಿಯಾ ಸೇರ್ಪಡೆ ಬಗ್ಗೆ ತುಟಿಬಿಚ್ಚಿದ ಸೌರವ್ ಗಂಗೂಲಿ

ಆ್ಯಡಿನ್ ಮಕ್ರಮ್ ಹೋರಾಟದ ಸೂಚನೆ ನೀಡಿದರು. ಆದರೆ ಇತರ ಬ್ಯಾಟ್ಸ್‌ಮನ್‌ಗಳು ಸಾಥ್ ನೀಡಲಿಲ್ಲ. ಡೇವಿಡ್ ಮಿಲ್ಲರ್ ಹಾಗೂ ಟ್ರಿಸ್ಟನ್ ಸ್ಟಬ್ಸ್ ಡಕೌಟ್ ಆದರು. ಹೋರಾಟ ನೀಡಿದ ಆ್ಯಡಿನ್ ಮಕ್ರಮ್ 25 ರನ್ ಸಿಡಿಸಿ ಔಟಾದರು. 42 ರನ್ ಸಿಡಿಸುವಷ್ಟರಲ್ಲೇ ಸೌತ್ ಆಫ್ರಿಕಾ ಪ್ರಮುಖ 6 ವಿಕೆಟ್ ಕಳೆದುಕೊಂಡಿತು. ವೇಯ್ನ್ ಪಾರ್ನೆಲ್ ಹಾಗೂ ಕೇಶವ್ ಮಹಾರಾಜ್ ಜೊತೆಯಾಟ ಸೌತ್ ಆಫ್ರಿಕಾ ತಂಡಕ್ಕೆ ಕೊಂಚ ಸಮಾಧಾನ ತಂದಿತು. 

ವೇಯ್ನ್ ಪಾರ್ನೆಲ್ 24 ರನ್ ಸಿಡಿಸಿ ಔಟಾದರು. ಈ ಮೂಲಕ ಪಾರ್ನೆಲ್ ಹಾಗೂ ಕೇಶವ್ ಮಹಾರಾಜ್ ನಡುವಿನ ಜೊತೆಯಾಟಕ್ಕೆ ಬ್ರೇಕ್ ಬಿದ್ದಿತು. ಪಾರ್ನೆಲ್ ವಿಕೆಟ್ ಪತನದ ಬಳಿಕ ಕೇಶವ್ ಮಹಾರಾಜ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಮೂಲಕ ಸೌತ್ ಆಫ್ರಿಕಾ ತಂಡದ ಸ್ಕೋರ್ 100 ರನ್ ಗಡಿ ದಾಟಿಸಿದರು.  ಕೇಶವ್ ಮಹಾರಾಜ್ 35 ಎಸೆತದಲ್ಲಿ 41 ರನ್ ಸಿಡಿಸಿ ಔಟಾದರು.  ಕಾಗಿಸೋ ರಬಡಾ ಅಜೇಯ 7 ರನ್ ಸಿಡಿಸಿದರೆ, ಅನ್ರಿಚ್ ನೊರ್ಜೆ ಅಜೇಯ 2 ರನ್ ಸಿಡಿಸಿದರು. 

ತಿರುವನಂತಪುರಂ ಸ್ಟೇಡಿಯಂ ಬಳಿ ರೋಹಿತ್-ಕೊಹ್ಲಿ ದೊಡ್ಡ ಕಟೌಟ್

ಕೇಶವ್ ಮಹಾರಾಜ್ ಹೋರಾಟದಿಂದ ಸೌತ್ ಆಫ್ರಿಕಾ ಆಲೌಟ್ ಹಿನ್ನಡೆಯಿಂದ ಪಾರಾಯಿತು. ಇಷ್ಟೇ ಮೂರಂಕಿ ದಾಟುವುದೇ ಅನುಮಾನ ಅನ್ನೋ ಆತಂಕವೂ ದೂರವಾಯಿತು. ಇದರೊಂದಿಗೆ ಸೌತ್ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 106 ರನ್ ಸಿಡಿಸಿತು. 

ಟೀಂ ಇಂಡಿಯಾ ಪ್ಲೇಯಿಂಗ್ 11
ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ದೀಪಕ್ ಚಹಾರ್, ಅರ್ಶದೀಪ್ ಸಿಂಗ್

ಸೌತ್ ಆಫ್ರಿಕಾ ಪ್ಲೇಯಿಂಗ್ 11
ಕ್ವಿಂಟನ್ ಡಿಕಾಕ್, ತೆಂಬಾ ಬುವಮಾ(ನಾಯಕ), ರಿಲೆ ರೋಸೋ, ಆ್ಯಡಿನ್ ಮಕ್ರಮ್, ಡೇವಿಡ್ ಮಿಲ್ಲರ್, ಟ್ರಿಸ್ಟನ್ ಸ್ಟಬ್ಸ್, ವೈಯ್ನ್ ಪಾರ್ನೆಲ್, ಕಾಗಿಸೋ ರಬಡಾ, ಕೇಶವ್ ಮಹಾರಾಜ, ಅನ್ರಿಚ್ ನೋರ್ಜೆ, ತಬ್ರೈಜ್ ಶಮ್ಸಿ

click me!