TV ಮುಂದೆ ಕುಳಿತವರಿಗೂ ಸಿಗದ ಬ್ಲೈಂಡ್ ಸ್ಪಾಟ್; ಗೆಲ್ಲಬೇಕಿದ್ದ ಮ್ಯಾಚ್ ಭಾರತದ ಕೈತಪ್ಪಿದ್ದೇಲ್ಲಿ? ಸೋಲಿಗೆ ಇವರೇ ಕಾರಣವಂತೆ

Published : Nov 01, 2026, 05:59 PM IST
Team India

ಸಾರಾಂಶ

ನ್ಯೂಜಿಲೆಂಡ್ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ 191 ರನ್ ಗಳಿಸಿದರೂ ಟೀಮ್ ಇಂಡಿಯಾ 7 ವಿಕೆಟ್‌ಗಳಿಂದ ಸೋಲನುಭವಿಸಿದೆ. ಆಟಗಾರರು ಕೈಬಿಟ್ಟ ಪ್ರಮುಖ ಕ್ಯಾಚ್‌ಗಳು ಮತ್ತು ಕಳಪೆ ಫೀಲ್ಡಿಂಗ್ ಈ ಸೋಲಿಗೆ ಮುಖ್ಯ ಕಾರಣವಾಯಿತು. ಆದರೂ ಭಾರತ 3-2 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ.

ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್‌ನಲ್ಲಿ ನಡೆದ ಕೊನೆಯ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತವನ್ನು 7 ವಿಕೆಟ್‌ಗಳಿಂದ ಸೋಲಿಸಿದೆ. ಆದರೂ, 5 ಪಂದ್ಯಗಳ ಈ ಸರಣಿಯನ್ನು ಟೀಮ್ ಇಂಡಿಯಾ 3-2 ಅಂತರದಲ್ಲಿ ತನ್ನ ವಶಪಡಿಸಿಕೊಂಡಿದೆ. ಇಡೀ ಪಂದ್ಯವನ್ನು ಟಿವಿಯಲ್ಲಿ ನೋಡಿದವರಿಗೂ ಭಾರತ ಎಲ್ಲಿ ಎಡವಿತು ಎಂಬುದು ಮೇಲ್ನೋಟಕ್ಕೆ ತಿಳಿಯದೇ ಇರಬಹುದು. ಭಾರತದ ಕೈಯಲ್ಲಿದ್ದ ಪಂದ್ಯ ನ್ಯೂಜಿಲೆಂಡ್ ಪಾಲಾಗಲು ಕಾರಣವಾದ ಪ್ರಮುಖ ಅಂಶಗಳು ಇಲ್ಲಿವೆ:

ಮೊದಲ ಜೀವದಾನ ಮತ್ತು ಸೀಫರ್ಟ್ ರುದ್ರನರ್ತನ!

ನ್ಯೂಜಿಲೆಂಡ್ ಆರಂಭಿಕ ಆಟಗಾರ ಟಿಮ್ ಸೀಫರ್ಟ್ ಕೇವಲ 13 ರನ್ ಗಳಿಸಿದ್ದಾಗ, ಪಂದ್ಯದ 4ನೇ ಓವರ್‌ನಲ್ಲಿ (ಅರ್ಶ್‌ದೀಪ್ ಸಿಂಗ್ ಬೌಲಿಂಗ್) ನಮನ್ ಧೀರ್ ಅತ್ಯಂತ ಸುಲಭವಾದ ಕ್ಯಾಚ್ ಕೈಬಿಟ್ಟರು. ಈ ಒಂದೇ ಒಂದು ತಪ್ಪು ಭಾರತಕ್ಕೆ ಭಾರಿ ನಷ್ಟ ಉಂಟುಮಾಡಿತು. ಜೀವದಾನ ಪಡೆದ ಸೀಫರ್ಟ್ 50 ಎಸೆತಗಳಲ್ಲಿ 11 ಫೋರ್ ಹಾಗೂ 5 ಸಿಕ್ಸರ್ ನೆರವಿನಿಂದ 93 ರನ್ ಚಚ್ಚಿ ಪಂದ್ಯವನ್ನು ಭಾರತದ ಕೈಯಿಂದ ಕಸಿದುಕೊಂಡರು.

ಫಿಲಿಪ್ಸ್‌ಗೆ ಸಿಕ್ಕ ಬ್ಯಾಕ್-ಟು-ಬ್ಯಾಕ್ ಬ್ಯಾಕ್‌ಅಪ್!

ಕೇವಲ ಸೀಫರ್ಟ್ ಮಾತ್ರವಲ್ಲ, ಅಪಾಯಕಾರಿ ಬ್ಯಾಟರ್ ಗ್ಲೆನ್ ಫಿಲಿಪ್ಸ್‌ಗೂ ಭಾರತೀಯ ಫೀಲ್ಡರ್‌ಗಳು ರನ್ ಮಳೆಗರೆಯಲು ಮುಕ್ತ ಅವಕಾಶ ಮಾಡಿಕೊಟ್ಟರು. 14ನೇ ಓವರ್‌ನಲ್ಲಿ ಬೌಲರ್ ಪ್ರಿನ್ಸ್ ಯಾದವ್ ಅವರಿಗೆ 'ಕಾಟ್ ಅಂಡ್ ಬೌಲ್ಡ್' ಮಾಡುವ ಸುಲಭ ಅವಕಾಶವಿತ್ತು, ಆದರೆ ಅವರು ಅದನ್ನು ಕೈಚೆಲ್ಲಿದರು. ಬೆನ್ನುಬೆನ್ನಿಗೆ ಎಂಬಂತೆ 15ನೇ ಓವರ್‌ನಲ್ಲಿ ವರುಣ್ ಚಕ್ರವರ್ತಿ ಬೌಲಿಂಗ್‌ನಲ್ಲಿ ಗ್ಲೆನ್ ಫಿಲಿಪ್ಸ್ ನೀಡಿದ ಮತ್ತೊಂದು ಕ್ಯಾಚ್ ಅನ್ನು ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕೈಬಿಟ್ಟರು. ಈ ಸರಣಿ ತಪ್ಪುಗಳಿಂದಾಗಿ ಫಿಲಿಪ್ಸ್ 65 ರನ್ ಗಳಿಸಿ ಅಜೇಯರಾಗಿ ಉಳಿದು ಕಿವೀಸ್ ಪಡೆಯನ್ನು ಗೆಲುವಿನ ದಡ ಮುಟ್ಟಿಸಿದರು.

ಬೌಲರ್‌ಗಳ ಆರಂಭಿಕ ಯತ್ನ ವ್ಯರ್ಥ!

ಇನ್ನಿಂಗ್ಸ್‌ನ 2ನೇ ಓವರ್‌ನಲ್ಲೇ ಫಿನ್ ಅಲೆನ್ (2) ಅವರನ್ನು ಔಟ್ ಮಾಡುವ ಮೂಲಕ ಅರ್ಶ್‌ದೀಪ್ ಸಿಂಗ್ ಭಾರತಕ್ಕೆ ಉತ್ತಮ ಆರಂಭ ನೀಡಿದ್ದರು. ಆ ಬಳಿಕ ವರುಣ್ ಚಕ್ರವರ್ತಿ ಕೂಡ ಡೆರ್ರಿ ಮಿಚೆಲ್ (29) ವಿಕೆಟ್ ಪಡೆದು ಬ್ರೇಕ್ ಥ್ರೂ ನೀಡಿದ್ದರು. ಆದರೆ, ಕ್ಯಾಚ್‌ಗಳನ್ನು ಕೈಬಿಟ್ಟಿದ್ದರಿಂದ ಈ ಯಾವುದೇ ವಿಕೆಟ್‌ಗಳು ಪಂದ್ಯದ ಫಲಿತಾಂಶ ಬದಲಿಸಲು ಸಾಧ್ಯವಾಗಲಿಲ್ಲ.

ಬ್ಯಾಟಿಂಗ್ ಬಲ ತಂದಿತ್ತ 191 ರನ್!

ಮೊದಲು ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ ಪರ ಇಶಾನ್ ಕಿಶನ್ (61), ಶ್ರೇಯಸ್ ಅಯ್ಯರ್ (50) ಮತ್ತು ನಮನ್ ಧೀರ್ (33) ಅವರ ಜವಾಬ್ದಾರಿಯುತ ಆಟದಿಂದಾಗಿ ತಂಡ 8 ವಿಕೆಟ್ ನಷ್ಟಕ್ಕೆ 191 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ನ್ಯೂಜಿಲೆಂಡ್ ಪರ ಆಡಮ್ ಮಿಲನ್ 4 ವಿಕೆಟ್ ಪಡೆದರೆ, ನಾಥನ್ ಸ್ಮಿತ್ ಮತ್ತು ಬ್ಲೇರ್ ಟಿಕ್ನರ್ ತಲಾ 2 ವಿಕೆಟ್ ಕಸಿದಿದ್ದರು. ಟೀಮ್ ಇಂಡಿಯಾ ಬ್ಯಾಟಿಂಗ್‌ನಲ್ಲಿ 191 ರನ್ ಗಳಿಸಿ ಬಲಿಷ್ಠವಾಗಿಯೇ ಇತ್ತು. ಆದರೆ, ನಮನ್ ಧೀರ್ ಬಿಟ್ಟ ಆ ಒಂದು ಕ್ಯಾಚ್ ಮತ್ತು ಗ್ಲೆನ್ ಫಿಲಿಪ್ಸ್‌ಗೆ ಸಿಕ್ಕ ಬ್ಯಾಕ್-ಟು-ಬ್ಯಾಕ್ ಜೀವದಾನಗಳು ಪಂದ್ಯದ ಚಿತ್ರಣವನ್ನೇ ಬದಲಿಸಿದವು. ಹೀಗಾಗಿ, ಸರಣಿ ಗೆದ್ದರೂ ಕೊನೆಯ ಪಂದ್ಯದಲ್ಲಿ ಭಾರತ ಕಳಪೆ ಫೀಲ್ಡಿಂಗ್‌ನಿಂದಾಗಿ ಸೋಲೊಪ್ಪಿಕೊಳ್ಳಬೇಕಾಯಿತು. ಈ ಹಿನ್ನೆಲೆಯಲ್ಲಿ ಕ್ಯಾಚ್‌ ಬಿಟ್ಟವರೂ ಈ ಸೋಲಿಗೆ ಕಾರಣ ಎನ್ನಲಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IND vs NZ: ಸರಣಿ ಬೆನ್ನಲ್ಲೇ ಟೀಮ್ ಇಂಡಿಯಾದಿಂದ 8 ಆಟಗಾರರು ಔಟ್, 10 ಮಂದಿಗೆ ಎಂಟ್ರಿ; ಯಾರಿಗೆಲ್ಲ ಸಿಕ್ತು ಚಾನ್ಸ್?
ODI ಪಂದ್ಯಕ್ಕೂ ಮೊದಲು ಕೊಹ್ಲಿ ಕುರಿತ ರಹಸ್ಯವನ್ನ ಬಹಿರಂಗಪಡಿಸಿದ RCB ಸ್ಟಾರ್ ಡಫಿ