Ind vs NZ: ಎರಡನೇ ಪಂದ್ಯದಿಂದ ಸಂಜು ಸ್ಯಾಮ್ಸನ್‌ ಕೈಬಿಟ್ಟಿದ್ದೇಕೆ? ಕ್ಯಾಪ್ಟನ್ ಶಿಖರ್ ಧವನ್ ಹೇಳಿದ್ದೇನು?

By Naveen KodaseFirst Published Nov 27, 2022, 3:56 PM IST
Highlights

ಭಾರತ-ನ್ಯೂಜಿಲೆಂಡ್ ಎರಡನೇ ಪಂದ್ಯ ಮಳೆಯಿಂದ ರದ್ದು
ಎರಡನೇ ಏಕದಿನ ಪಂದ್ಯದಿಂದ ಹೊರಬಿದ್ದ ಸಂಜು ಸ್ಯಾಮ್ಸನ್
ಸಂಜು ಸ್ಯಾಮ್ಸನ್‌ ಅವರನ್ನು ಹೊರಗಿಟ್ಟಿದ್ದೇಕೆಂದು ವಿವರಿಸಿದ ನಾಯಕ ಶಿಖರ್ ಧವನ್

ವೆಲ್ಲಿಂಗ್ಟನ್(ನ.27): ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಇಲ್ಲಿನ ಸೆಡನ್‌ ಪಾರ್ಕ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೇವಲ 12.5 ಓವರ್‌ಗಳಷ್ಟೇ ನಡೆಯಲು ಸಾಧ್ಯವಾಯಿತು. ಆ ಬಳಿಕ ನಿರಂತರವಾಗಿ ಸುರಿದ ಮಳೆಯಿಂದಾಗಿ ಪಂದ್ಯ ರದ್ದು ಮಾಡಲಾಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ, 12.5 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 89 ರನ್ ಗಳಿಸಷ್ಟೇ ಶಕ್ತವಾಯಿತು. ಆ ಬಳಿಕ ಮಳೆಯಿಂದಾಗಿ ಪಂದ್ಯ ರದ್ದು ಮಾಡಲಾಯಿತು. ಆದರೆ ಈ ಪಂದ್ಯದಿಂದ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿದ್ದೇಕೆ ಎನ್ನುವ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಕೇಳಿ ಬಂದಿತ್ತು. ಈ ಕುರಿತಂತೆ ಟೀಂ ಇಂಡಿಯಾ ನಾಯಕ ಶಿಖರ್ ಧವನ್ ಪ್ರತಿಕ್ರಿಯೆ ನೀಡಿದ್ದಾರೆ 

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಪಂದ್ಯದ ಐದನೇ ಓವರ್‌ನಲ್ಲೇ ಮಳೆಯ ಆಗಮನವಾಯಿತು. ಇದಾದ ಬಳಿಕ ಪಂದ್ಯವನ್ನು 29 ಓವರ್‌ಗಳಿಗೆ ನಿಗದಿ ಪಡಿಸಲಾಯಿತು. ಆದರೆ 13ನೇ ಓವರ್‌ಗೆ ಮತ್ತೆ ಮಳೆ ಅಡ್ಡಿ ಪಡಿಸಿದ್ದರಿಂದಾಗಿ ಪಂದ್ಯವನ್ನು ರದ್ದು ಮಾಡುವ ತೀರ್ಮಾನ ತೆಗೆದುಕೊಳ್ಳಲಾಯಿತು. ನ್ಯೂಜಿಲೆಂಡ್ ಎದುರಿನ ಎರಡನೇ ಪಂದ್ಯಕ್ಕೆ ಟೀಂ ಇಂಡಿಯಾ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿದಿತ್ತು. ಸಂಜು ಸ್ಯಾಮ್ಸನ್ ಹಾಗೂ ಶಾರ್ದೂಲ್ ಠಾಕೂರ್‌ಗೆ ವಿಶ್ರಾಂತಿ ನೀಡಿ ದೀಪಕ್ ಹೂಡಾ ಹಾಗೂ ದೀಪಕ್ ಚಹರ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಕಲ್ಪಿಸಲಾಗಿತ್ತು. 

Ind vs NZ ಪಂತ್‌ಗೆ ಚಾನ್ಸ್‌, ಸಂಜುಗೆ ಗೇಟ್‌ ಪಾಸ್‌, ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಮೇಲೆ ನೆಟ್ಟಿಗರು ಕಿಡಿ..!

ಎರಡನೇ ಏಕದಿನ ಪಂದ್ಯ ಮಳೆಯಿಂದ ರದ್ದಾದ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ಶಿಖರ್ ಧವನ್‌, ತಾವೇಕೆ ಎರಡು ಬದಲಾವಣೆ ಮಾಡಿಕೊಂಡಿದ್ದು ಎನ್ನುವ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. "ತಂಡದಲ್ಲಿ ಆರನೇ ಬೌಲರ್‌ ಅವಶ್ಯಕತೆಯಿತ್ತು. ಹೀಗಾಗಿ ಸಂಜು ಸ್ಯಾಮ್ಸನ್‌ ಅವರು ಪಂದ್ಯದಿಂದ ಹೊರಗಿಟ್ಟು, ದೀಪಕ್ ಹೂಡಾಗೆ ಅವಕಾಶ ನೀಡಲಾಯಿತು. ಇನ್ನು ದೀಪಕ್ ಚಹರ್ ತುಂಬಾ ಚೆನ್ನಾಗಿ ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡುವ ಕ್ಷಮತೆ ಹೊಂದಿದ್ದಾರೆ, ಹೀಗಾಗಿ ಅವರಿಗೆ ತಂಡದೊಳಗೆ ಸ್ಥಾನ ನೀಡಲಾಯಿತು" ಎಂದು ದೀಪಕ್ ಚಹರ್ ಹೇಳಿದ್ದಾರೆ.

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡವು 7 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿದೆ. ಇದೀಗ ಎರಡನೇ ಪಂದ್ಯವು ಮಳೆಯಿಂದ ರದ್ದಾಗಿದೆ. ಹೀಗಾಗಿ ಸದ್ಯ ನ್ಯೂಜಿಲೆಂಡ್ ತಂಡವು ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಇದೀಗ ನವೆಂಬರ್ 30ರಂದು ನಡೆಯಲಿರುವ ಸರಣಿಯ ಕೊನೆಯ ಪಂದ್ಯವು ಟೀಂ ಇಂಡಿಯಾ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದ್ದು, ಗೆದ್ದರಷ್ಟೇ ಸರಣಿ ಸಮಬಲದೊಂದಿಗೆ ಅಂತ್ಯವಾಗಲಿದೆ. ಇಲ್ಲದಿದ್ದರೇ ಏಕದಿನ ಸರಣಿ ನ್ಯೂಜಿಲೆಂಡ್ ಪಾಲಾಗಲಿದೆ.

click me!