Ind vs NZ Kanpur Test: ಮೊದಲ ಟೆಸ್ಟ್‌ ಗೆಲ್ಲಲು ಟೀಂ ಇಂಡಿಯಾ ಗೆಲುವಿಗೆ 6 ವಿಕೆಟ್‌..!

Suvarna News   | Asianet News
Published : Nov 29, 2021, 02:24 PM ISTUpdated : Nov 29, 2021, 02:31 PM IST
Ind vs NZ Kanpur Test: ಮೊದಲ ಟೆಸ್ಟ್‌ ಗೆಲ್ಲಲು ಟೀಂ ಇಂಡಿಯಾ ಗೆಲುವಿಗೆ 6 ವಿಕೆಟ್‌..!

ಸಾರಾಂಶ

* ಸಾಕಷ್ಟು ರೋಚಕ ಘಟ್ಟ ತಲುಪಿದ ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್‌ * ಕಾನ್ಪರದ ಗ್ರೀನ್‌ ಪಾರ್ಕ್‌ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ * ಕೊನೆಯ ಸೆಷನ್‌ನಲ್ಲಿ ಭಾರತ ಗೆಲ್ಲಲು ಬೇಕಿದೆ 6 ವಿಕೆಟ್

ಕಾನ್ಪುರ(ನ.29): ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ತಂಡಗಳ ನಡುವಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಕಮ್‌ಬ್ಯಾಕ್‌ ಮಾಡುವತ್ತ ದಿಟ್ಟ ಹೆಜ್ಜೆಯಿಟ್ಟಿದೆ. ಐದನೇ ದಿನದಾಟದ ಚಹಾ ವಿರಾಮದ ವೇಳೆಗೆ ನ್ಯೂಜಿಲೆಂಡ್ ಕ್ರಿಕೆಟ್ ತಂಡವು (New Zealand Cricket Team) 4 ವಿಕೆಟ್ ಕಳೆದುಕೊಂಡು 125 ರನ್‌ ಗಳಿಸಿದೆ. ಕೊನೆಯ ಸೆಷನ್‌ನಲ್ಲಿ ಗೆಲುವು ಸಾಧಿಸಬೇಕಿದ್ದರೇ ಟೀಂ ಇಂಡಿಯಾ ಇನ್ನುಳಿದ 6 ವಿಕೆಟ್ ಕಬಳಿಸಬೇಕಿದೆ. ಇನ್ನೊಂದೆಡೆ ಕಿವೀಸ್‌ ಗೆಲುವಿನ ನಗೆ ಬೀರಬೇಕಿದ್ದರೇ ಇನ್ನುಳಿದ 30 ಓವರ್‌ಗಳಲ್ಲಿ 159 ರನ್‌ ಗಳಿಸಬೇಕಿದೆ. ಹೀಗಾಗಿ ಕೊನೆಯ ಸೆಷನ್ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.

ಇಲ್ಲಿನ ಗ್ರೀನ್‌ ಪಾರ್ಕ್ ಮೈದಾನದಲ್ಲಿ (Green Park Stadium) ಗೆಲ್ಲಲು 284 ರನ್‌ಗಳ ಸವಾಲಿನ ಗುರಿ ಪಡೆದ ನ್ಯೂಜಿಲೆಂಡ್ ತಂಡವು ದಿಟ್ಟ ಆರಂಭವನ್ನೇ ಪಡೆದಿದೆ. ಕೊನೆಯ ದಿನದಾಟದ ಮೊದಲ ಸೆಷನ್‌ನಲ್ಲಿ ನೈಟ್‌ ವಾಚ್‌ಮನ್‌ ವಿಲಿಯಮ್ ಸೋಮರ್‌ವಿಲ್ಲೆ ಜತೆಗೂಡಿ ಟಾಮ್ ಲೇಥಮ್‌ (Tom Latham) 75 ರನ್‌ಗಳ ಜತೆಯಾಟ ನಿಭಾಯಿಸುವ ಮೂಲಕ ತಂಡಕ್ಕೆ ಆಸರೆಯಾದರು. ಆದರೆ ಲಂಚ್ ಬ್ರೇಕ್‌ ಬಳಿಕ ಮೊದಲ ಎಸೆತದಲ್ಲೇ ಈ ಜೋಡಿಯನ್ನು ಬೇರ್ಪಡಿಸಲು ವೇಗಿ ಉಮೇಶ್ ಯಾದವ್ (Umesh Yadav) ಯಶಸ್ವಿಯಾದರು. ನೈಟ್‌ ವಾಚ್‌ಮನ್ ಸೋಮರ್‌ವಿಲ್ಲೆ ಬರೋಬ್ಬರಿ 110 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 36 ರನ್‌ ಬಾರಿಸಿ ಶುಭ್‌ಮನ್ ಗಿಲ್‌ಗೆ (Shubman Gill) ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

ಲೇಥಮ್‌-ವಿಲಿಯಮ್ಸನ್‌ ಎಚ್ಚರಿಕೆಯ ಆಟ: ಸೋಮರ್‌ವಿಲ್ಲೆ ವಿಕೆಟ್ ಪತನದ ಬಳಿಕ ನಾಯಕ ಕೇನ್‌ ವಿಲಿಯಮ್ಸನ್‌ (Kane Williamson) ಜತೆಗೂಡಿದ ಟಾಮ್ ಲೇಥಮ್ ಎಚ್ಚರಿಕೆಯ ಜತೆಯಾಟ ನಿಭಾಯಿಸಿದರು. ಮೂರನೇ ವಿಕೆಟ್‌ಗೆ ಈ ಜೋಡಿ ಬರೋಬ್ಬರಿ 116 ಎಸೆತಗಳನ್ನು ಎದುರಿಸಿ 39 ರನ್‌ ಕಲೆಹಾಕಿತು. ಭಾರತ ಎದುರು ಮೊದಲ ಇನಿಂಗ್ಸ್‌ನಲ್ಲಿ ಅಮೋಘ 95 ರನ್‌ ಬಾರಿಸಿದ್ದ ಟಾಮ್ ಲೇಥಮ್‌, ಎರಡನೇ ಇನಿಂಗ್ಸ್‌ನಲ್ಲಿ 52 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಒಟ್ಟು 146 ಎಸೆತಗಳನ್ನು ಎದುರಿಸಿದ ಎಡಗೈ ಬ್ಯಾಟರ್ ಲೇಥಮ್ ಮೂರು ಬೌಂಡರಿ ಸಹಿತ 52 ರನ್ ಬಾರಿಸಿ ರವಿಚಂದ್ರನ್ ಅಶ್ವಿನ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್‌ ಸೇರಿದ್ದಾರೆ. ಲೇಥಮ್‌ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ಅನುಭವಿ ಬ್ಯಾಟರ್ ರಾಸ್ ಟೇಲರ್ (Ross Taylor) ಕೇವಲ 2 ರನ್ ಗಳಿಸಿ ರವೀಂದ್ರ ಜಡೇಜಾ (Ravindra Jadeja) ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಮತ್ತೊಂದು ತುದಿಯಲ್ಲಿ ನಾಯಕ ಕೇನ್ ವಿಲಿಯಮ್ಸನ್‌ 97 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 24 ರನ್‌ ಬಾರಿಸಿ ತಂಡವನ್ನು ಸೋಲಿನಿಂದ ಪಾರು ಮಾಡಲು ಹೋರಾಡುತ್ತಿದ್ದಾರೆ.

Ind vs NZ Kanpur Test: ಕೊನೆಯ ದಿನ ದಿಟ್ಟ ಆರಂಭ ಪಡೆದ ನ್ಯೂಜಿಲೆಂಡ್..!

ಹರ್ಭಜನ್ ಸಿಂಗ್ ದಾಖಲೆ ಮುರಿದ ರವಿಚಂದ್ರನ್ ಅಶ್ವಿನ್: ಕಿವೀಸ್‌ ಎರಡನೇ ಇನಿಂಗ್ಸ್‌ನಲ್ಲಿ ಆರಂಭಿಕ ಬ್ಯಾಟರ್ ವಿಲ್‌ ಯಂಗ್ ವಿಕೆಟ್ ಕಬಳಿಸುವ ಮೂಲಕ ಅನುಭವಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ (Harbhajan Singh) ಅವರ ಹೆಸರಿನಲ್ಲಿದ್ದ(417) ದಾಖಲೆಯನ್ನು ಸರಿಗಟ್ಟಿದ್ದರು. ಇದೀಗ ಕಿವೀಸ್ ಮತ್ತೋರ್ವ ಆರಂಭಿಕ ಬ್ಯಾಟರ್ ಟಾಮ್ ಲೇಥಮ್ ವಿಕೆಟ್‌ ಕಬಳಿಸುವ ಮೂಲಕ ಭಜ್ಜಿ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್‌ ಕಬಳಿಸಿದ ಭಾರತದ ಬೌಲರ್‌ಗಳ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್‌ (Ravichandran Ashwin) ಮೂರನೇ ಸ್ಥಾನಕ್ಕೇರಿದ್ದಾರೆ. ಇನ್ನು ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ದಾಖಲೆ ಕನ್ನಡಿಗ ಅನಿಲ್ ಕುಂಬ್ಳೆ ಹೆಸರಿನಲ್ಲಿದೆ. ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ 132 ಪಂದ್ಯಗಳಿಂದ 619 ವಿಕೆಟ್ ಉರುಳಿಸಿದ್ದಾರೆ. ಇನ್ನು ಮಾಜಿ ನಾಯಕ ಕಪಿಲ್ ದೇವ್‌ 131 ಪಂದ್ಯಗಳನ್ನಾಡಿ 434 ವಿಕೆಟ್ ಕಬಳಿಸುವ ಮೂಲಕ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಭಾರತ: 345/10
ಶ್ರೇಯಸ್ ಅಯ್ಯರ್: 105
ಟಿಮ್ ಸೌಥಿ: 69/5

ನ್ಯೂಜಿಲೆಂಡ್: 296/10
ಟಾಮ್ ಲೇಥಮ್: 95
ಅಕ್ಷರ್ ಪಟೇಲ್: 62/5

ಭಾರತ: 234/7 (ಎರಡನೇ ಇನಿಂಗ್ಸ್‌ ಡಿಕ್ಲೇರ್)
ಶ್ರೇಯಸ್ ಅಯ್ಯರ್: 65
ಕೈಲ್ ಜೇಮಿಸನ್: 40/3

ನ್ಯೂಜಿಲೆಂಡ್: 125/4

ಟಾಮ ಲೇಥಮ್: 52

ಅಶ್ವಿನ್: 28/2

(* 5ನೇ ದಿನದಾಟದ ಚಹಾ ವಿರಾಮದ ವೇಳೆಗೆ)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ