Ind vs NZ Kanpur Test: ಕೊನೆಯ ದಿನ ದಿಟ್ಟ ಆರಂಭ ಪಡೆದ ನ್ಯೂಜಿಲೆಂಡ್..!

By Suvarna NewsFirst Published Nov 29, 2021, 11:51 AM IST
Highlights

* ಕಾನ್ಪುರ ಟೆಸ್ಟ್ ಪಂದ್ಯದಲ್ಲಿ ದಿಟ್ಟ ಆರಂಭ ಪಡೆದ ನ್ಯೂಜಿಲೆಂಡ್

* ಕೊನೆಯ ದಿನದಾಟದ ಲಂಚ್ ಬ್ರೇಕ್‌ ವೇಳೆಗೆ 79 ರನ್‌ ಗಳಿಸಿದ ಕಿವೀಸ್‌

* ಭಾರತ ನೀಡಿರುವ 284 ರನ್‌ಗಳ ಬೃಹತ್ ಮೊತ್ತ ಬೆನ್ನತ್ತಿದ ನ್ಯೂಜಿಲೆಂಡ್‌

ಕಾನ್ಪುರ(ನ.29): ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವೆ ಕಾನ್ಪುರದ ಗ್ರೀನ್‌ ಪಾರ್ಕ್ ಸ್ಟೇಡಿಯಂನಲ್ಲಿ (Green Park Stadium) ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯವು ರೋಚಕ ಹಂತ ತಲುಪಿದ್ದು, ಉಭಯ ತಂಡಗಳು ಗೆಲುವಿಗಾಗಿ ಸಾಕಷ್ಟು ಪೈಪೋಟಿ ನಡೆಸುತ್ತಿವೆ. ಐದನೇ ದಿನದಾಟದ ಲಂಚ್‌ ಬ್ರೇಕ್‌ ವೇಳೆಗೆ ನ್ಯೂಜಿಲೆಂಡ್ ತಂಡವು ಒಂದು ವಿಕೆಟ್ ಕಳೆದುಕೊಂಡು 79 ರನ್‌ ಬಾರಿಸಿದ್ದು, ಗೆಲುವಿನತ್ತ ದಿಟ್ಟ ಹೆಜ್ಜೆಯಿಡಲಾರಂಭಿಸಿದೆ. ಕೊನೆಯ ದಿನದಾಟದ ಮೊದಲ ಸೆಷನ್‌ನಲ್ಲಿ ಭಾರತ ಒಂದು ವಿಕೆಟ್‌ ಕಬಳಿಸಲು ಸಾಧ್ಯವಾಗಿಲ್ಲ.

ಹೌದು, ಭಾರತ ನೀಡಿರುವ 284 ರನ್‌ಗಳ ಬೃಹತ್ ಮೊತ್ತ ಬೆನ್ನತ್ತಿರುವ ನ್ಯೂಜಿಲೆಂಡ್ ತಂಡವು (New Zealand Cricket Team) ನಾಲ್ಕನೇ ದಿನದಾಟದಂತ್ಯದ ವೇಳೆಗೆ ಒಂದು ವಿಕೆಟ್‌ ಕಳೆದುಕೊಂಡು ನಾಲ್ಕು ರನ್‌ ಬಾರಿಸಿತ್ತು. ಇನ್ನು ಐದನೇ ಹಾಗೂ ಕೊನೆಯ ದಿನದಾಟದಲ್ಲಿ ನೈಟ್‌ ವಾಚ್‌ಮನ್‌ ವಿಲಿಯಮ್‌ ಸೋಮರ್‌ವಿಲ್ಲೆ ಜತೆ ಮೈದಾನಕ್ಕಿಳಿದ ಆರಂಭಿಕ ಬ್ಯಾಟರ್‌ ಟಾಮ್ ಲೇಥಮ್ (Tom Latham) ಟೀಂ ಇಂಡಿಯಾ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದ್ದಾರೆ. ಆರಂಭದಲ್ಲೇ ವಿಕೆಟ್‌ ಕಬಳಿಸಿ ಪ್ರವಾಸಿ ನ್ಯೂಜಿಲೆಂಡ್ ತಂಡದ ಮೇಲೆ ಒತ್ತಡ ಹೇರುವ ಭಾರತದ ಲೆಕ್ಕಾಚಾರವನ್ನು ತಲೆಕೆಳಗಾಗುವಂತೆ ಮಾಡುವಲ್ಲಿ ಕಿವೀಸ್ ಬ್ಯಾಟರ್‌ಗಳು ಯಶಸ್ವಿಯಾದರು.

That will be Lunch on Day 5 of the 1st Test.

Scorecard - https://t.co/WRsJCUhS2d pic.twitter.com/NuEyiHNEAE

— BCCI (@BCCI)

Ind vs NZ Kanpur Test: ಹರ್ಭಜನ್ ಸಿಂಗ್ ವಿಕೆಟ್‌ ದಾಖಲೆ ಸರಿಗಟ್ಟಿದ ರವಿಚಂದ್ರನ್ ಅಶ್ವಿನ್‌..!

ಸೋಮರ್‌ವಿಲ್ಲೆ-ಲೇಥಮ್‌ ಜುಗಲ್ಬಂದಿ: ಕೇವಲ 4 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡಿದ್ದ ನ್ಯೂಜಿಲೆಂಡ್ ತಂಡಕ್ಕೆ ನೈಟ್‌ ವಾಚ್‌ಮನ್‌ ಸೋಮರ್‌ವಿಲ್ಲೆ ಹಾಗೂ ಲೇಥಮ್ ಆಸರೆಯಾಗಿದ್ದಾರೆ. ಎರಡನೇ ವಿಕೆಟ್‌ಗೆ ಈ ಜೋಡಿ ಮುರಿಯದ 75 ರನ್‌ಗಳ ಜತೆಯಾಟವಾಡುವ ಮೂಲಕ ದಿಟ್ಟ ಆರಂಭ ಒದಗಿಸಿಕೊಟ್ಟಿದ್ದಾರೆ. ಟಾಮ್‌ ಲೇಥಮ್‌ ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ 95 ರನ್‌ ಬಾರಿಸಿ ಕೇವಲ 5 ರನ್‌ಗಳಿಂದ ಶತಕವಂಚಿತರಾಗಿದ್ದರು. ಇದೀಗ ಎರಡನೇ ಇನಿಂಗ್ಸ್‌ನಲ್ಲೂ ಉತ್ತಮ ಆರಂಭ ಪಡೆದಿದ್ದಾರೆ. ಟಾಮ್ ಲೇಥಮ್‌ 96 ಎಸೆತಗಳನ್ನು ಎದುರಿಸಿ 35 ಬಾರಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ವಿಲಿಯಮ್‌ ಸೋಮರ್‌ವಿಲ್ಲೆ 109 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 36 ರನ್‌ ಬಾರಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಇನ್ನು 59 ಓವರ್‌ಗಳಲ್ಲಿ ಕಿವೀಸ್‌ಗೆ ಬೇಕಿದೆ 205 ರನ್‌: ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಶುಭಾರಂಭ ಮಾಡಲು ಎರಡೂ ತಂಡಗಳು ಸಾಕಷ್ಟು ಪೈಪೋಟಿ ನಡೆಸುತ್ತಿವೆ. ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾ ಪ್ರಾಬಲ್ಯ ಮೆರೆದಿತ್ತು. ಆದರೆ ಇದೀಗ ಐದನೇ ದಿನದಾಟದ ಮೊದಲ ಸೆಷನ್‌ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ 75 ರನ್‌ ಕಲೆಹಾಕುವ ಮೂಲಕ ಕಿವೀಸ್ ಉತ್ತಮ ಆರಂಭ ಪಡೆದಿದ್ದು, ಗೆಲುವಿನ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇನ್ನುಳಿದ 59 ಓವರ್‌ಗಳಲ್ಲಿ ಕಿವೀಸ್ ಕೇವಲ 205 ರನ್‌ ಗಳಿಸಿದರೇ ಟೆಸ್ಟ್ ಪಂದ್ಯ ಕೈವಶ ಮಾಡಿಕೊಳ್ಳಬಹುದಾಗಿದೆ. ಇನ್ನೊಂದೆಡೆ ಟೀಂ ಇಂಡಿಯಾ ಇನ್ನುಳಿದ 9 ವಿಕೆಟ್ ಕಬಳಿಸಿದರೇ ತವರಿನಲ್ಲಿ ಗೆಲುವಿನ ಕೇಕೆ ಹಾಕಬಹುದು. ಹೀಗಾಗಿ ಇನ್ನುಳಿದ ಎರಡು ಸೆಷನ್‌ನಲ್ಲಿ ಪಂದ್ಯ ಯಾರ ಪಾಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ

ಸಂಕ್ಷಿಪ್ತ ಸ್ಕೋರ್

ಭಾರತ: 345/10
ಶ್ರೇಯಸ್ ಅಯ್ಯರ್: 105
ಟಿಮ್ ಸೌಥಿ: 69/5

ನ್ಯೂಜಿಲೆಂಡ್: 296/10
ಟಾಮ್ ಲೇಥಮ್: 95
ಅಕ್ಷರ್ ಪಟೇಲ್: 62/5

ಭಾರತ: 234/7 (ಎರಡನೇ ಇನಿಂಗ್ಸ್‌ ಡಿಕ್ಲೇರ್)
ಶ್ರೇಯಸ್ ಅಯ್ಯರ್: 65
ಕೈಲ್ ಜೇಮಿಸನ್: 40/3

ನ್ಯೂಜಿಲೆಂಡ್: 4/1

ಸೋಮರ್‌ವಿಲ್ಲೆ: 36*

ಅಶ್ವಿನ್: 19/1

(* ಐದನೇ ದಿನದಾಟದ ಲಂಚ್ ಬ್ರೇಕ್ ವೇಳೆಗೆ)

click me!