Ind vs NZ: ಇಂಡೋ-ಕಿವೀಸ್ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿ; ಪಂದ್ಯ ಟೈ..?

By Naveen KodaseFirst Published Nov 22, 2022, 3:48 PM IST
Highlights

ಭಾರತ-ನ್ಯೂಜಿಲೆಂಡ್ 3ನೇ ಟಿ20 ಪಂದ್ಯಕ್ಕೆ ಮಳೆ ಅಡ್ಡಿ

ಟಿ20 ಸರಣಿ ಗೆಲುವಿನ ಹೊಸ್ತಿಲಲ್ಲಿ ಟೀಂ ಇಂಡಿಯಾ

ನೇಪಿಯರ್(ನ.22): ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರನೇ ಹಾಗೂ ಕೊನೆಯ ಟಿ20 ಪಂದ್ಯದ ಎರಡನೇ ಇನಿಂಗ್ಸ್‌ ವೇಳೆಯಲ್ಲಿಯೂ ಪಂದ್ಯಕ್ಕೆ ಮತ್ತೊಮ್ಮೆ ಮಳೆರಾಯ ಅಡ್ಡಿಯಾಗಿದ್ದು, ಪಂದ್ಯ ತಾತ್ಕಾಲಿಕ ಸ್ಥಗಿತವಾಗಿದೆ. ನ್ಯೂಜಿಲೆಂಡ್ ನೀಡಿದ್ದ 161 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ, 9 ಓವರ್‌ ಅಂತ್ಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 75 ರನ್ ಬಾರಿಸಿದ್ದು, ಇನ್ನೂ 11 ಓವರ್‌ಗಳಲ್ಲಿ ಟೀಂ ಇಂಡಿಯಾ 86 ರನ್ ಬಾರಿಸಬೇಕಿದೆ. ಒಂದು ವೇಳೆ ಪಂದ್ಯ ಇಲ್ಲಿಗೆ ಸ್ಥಗಿತವಾದರೇ ಪಂದ್ಯ ಟೈ ಆಗಲಿದ್ದು, ಟಿ20 ಸರಣಿ ಟೀಂ ಇಂಡಿಯಾ ಪಾಲಾಗಲಿದೆ

ಹೌದು, ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರನೇ ಹಾಗೂ ಕೊನೆಯ ಟಿ20 ಸರಣಿಯಲ್ಲಿ ನ್ಯೂಜಿಲೆಂಡ್ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಭಾರತ ತಂಡವು ಕೇವಲ 21 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳ ವಿಕೆಟ್ ಕಳೆದಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಶಾನ್ ಕಿಶನ್ ಕೇವಲ 10 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ರಿಷಭ್ ಪಂತ್ ಬ್ಯಾಟಿಂಗ್ 11 ರನ್‌ಗಳಿಗೆ ಸೀಮಿತವಾಯಿತು. ಇದರ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಖಾತೆ ತೆರೆಯುವ ಮುನ್ನವೇ ಟಿಮ್‌ ಸೌಥಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

UPDATE - Play has been interrupted due to rain. 75/4, are at par score on DLS.

Scorecard - https://t.co/rUlivZ308H

— BCCI (@BCCI)

ಈ ವೇಳೆ 4ನೇ ವಿಕೆಟ್‌ಗೆ ಜತೆಯಾದ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ 39 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ನಾಯಕ ಹಾರ್ದಿಕ್ ಪಾಂಡ್ಯ ಕೇವಲ 18 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಆಕರ್ಷಕ ಸಿಕ್ಸರ್ ಸಹಿತ ಅಜೇಯ 30 ರನ್ ಬಾರಿಸಿ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಇನ್ನು ಕಳೆದ ಪಂದ್ಯದಲ್ಲಿ ವಿಸ್ಪೋಟಕ ಶತಕ ಸಿಡಿಸಿದ್ದ ಸೂರ್ಯಕುಮಾರ್ ಯಾದವ್ ಕೇವಲ 13 ರನ್ ಬಾರಿಸಿ ಇಶ್ ಸೋಧಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

ಪಂದ್ಯ ಟೈನಲ್ಲಿ ಅಂತ್ಯ..?: ಹೌದು, ಕಿವೀಸ್‌ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ 9 ಓವರ್ ಅಂತ್ಯದ ವೇಳೆಗೆ 75 ರನ್ ಬಾರಿಸಿದ್ದು, ನಾಯಕ ಹಾರ್ದಿಕ್ ಪಾಂಡ್ಯ 30* ಹಾಗೂ ದೀಪಕ್ ಹೂಡಾ 9 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯ ಇಲ್ಲಿಗೆ ಸ್ಥಗಿತಗೊಂಡರೆ, ಡೆಕ್ವರ್ಥ್ ಲೂಯಿಸ್ ನಿಯಮದನ್ವಯ ಫಲಿತಾಂಶ ಘೋಷಿಸಲಾಗುತ್ತಿದೆ. ಸದ್ಯ ಡೆಕ್ವರ್ಥ್ ಲೂಯಿಸ್ ನಿಯಮದನ್ವಯ 9 ಓವರ್ ಅಂತ್ಯದ ವೇಳೆಗೆ ಭಾರತ ಗೆಲುವು ಸಾಧಿಸಬೇಕಿದ್ದರೇ 76 ರನ್ ಗಳಿಸಬೇಕಿತ್ತು. ಆದರೆ ಇದೀಗ 75 ರನ್ ಗಳಿಸಿರುವುದರಿಂದ ಪಂದ್ಯವನ್ನು ಟೈ ಎಂದು ಘೋಷಿಸಲಾಗುತ್ತದೆ. ಹೀಗಾದಲ್ಲಿ ಟಿ20 ಸರಣಿ 1-0 ಅಂತರದಲ್ಲಿ ಭಾರತದ ಪಾಲಾಗಲಿದೆ.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ತಂಡವು ಡೆವೊನ್ ಕಾನ್‌ವೇ ಹಾಗೂ ಗ್ಲೆನ್ ಫಿಲಿಫ್ಸ್ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ 19.4 ಓವರ್‌ಗಳಲ್ಲಿ 160 ರನ್ ಬಾರಿಸಿ ಸರ್ವಪತನ ಕಂಡಿತ್ತು. ಟೀಂ ಇಂಡಿಯಾ ವೇಗಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ಆರ್ಶದೀಪ್ ಸಿಂಗ್ ತಲಾ 4 ವಿಕೆಟ್ ಪಡೆದರೆ, ಹರ್ಷಲ್ ಪಟೇಲ್ ಒಂದು ವಿಕೆಟ್ ತಮ್ಮದಾಗಿಸಿಕೊಂಡರು.

click me!