Ind vs Eng ಓವಲ್ ಟೆಸ್ಟ್‌ ಪಂದ್ಯದ ಸೋಲಿಗೆ ಕಾರಣ ಬಿಚ್ಚಿಟ್ಟ ಜೋ ರೂಟ್‌

By Suvarna NewsFirst Published Sep 8, 2021, 11:13 AM IST
Highlights

* ಓವಲ್ ಟೆಸ್ಟ್ ಪಂದ್ಯ ಗೆದ್ದು ಬೀಗಿದ ಟೀಂ ಇಂಡಿಯಾ

* 4ನೇ ಟೆಸ್ಟ್‌ ಪಂದ್ಯದಲ್ಲಿ ಭಾರತಕ್ಕೆ 157 ರನ್‌ಗಳ ಜಯಭೇರಿ

* ಪಂದ್ಯದ ದಿಕ್ಕನ್ನೇ ಬದಲಿಸಿದ ಜಸ್ಪ್ರೀತ್ ಬುಮ್ರಾ ಸ್ಪೆಲ್‌

ಲಂಡನ್(ಸೆ.08)‌: ಭಾರತ ವಿರುದ್ಧ 4ನೇ ಟೆಸ್ಟ್‌ನಲ್ಲಿ ತಮ್ಮ ತಂಡ ಸೋಲಲು ಜಸ್‌ಪ್ರೀತ್‌ ಬುಮ್ರಾ ಅವರ ಸ್ಪೆಲ್‌ ಪ್ರಮುಖ ಕಾರಣ ಎಂದು ಇಂಗ್ಲೆಂಡ್‌ ನಾಯಕ ಜೋ ರೂಟ್‌ ಹೇಳಿದ್ದಾರೆ. 

ಸೋಲಿನ ಬಳಿಕ ಮಾತನಾಡಿದ ರೂಟ್‌, ‘ಬುಮ್ರಾ ವಿಶ್ವ ಶ್ರೇಷ್ಠ ಬೌಲರ್‌. ಭೋಜನ ವಿರಾಮದ ಬಳಿಕ ಅವರ ಸ್ಪೆಲ್‌ ಮಾರಕವಾಗಿತ್ತು. ಅವರು ಹಾಕಿದ ಆ 6 ಓವರ್‌ ಪಂದ್ಯ ಭಾರತ ಪರ ವಾಲುವಂತೆ ಮಾಡಿತು’ ಎಂದರು. ಬುಮ್ರಾ 6 ಓವರ್‌ ಸ್ಪೆಲ್‌ನಲ್ಲಿ 3 ಮೇಡನ್‌ ಸಹಿತ ಕೇವಲ 6 ರನ್‌ಗೆ 2 ವಿಕೆಟ್‌ ಕಿತ್ತಿದ್ದರು. ಪೋಪ್‌, ಬೇರ್‌ಸ್ಟೋವ್‌ರನ್ನು ಬೌಲ್ಡ್‌ ಮಾಡಿ ಪಂದ್ಯದಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

Ind vs Eng 5ನೇ ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ..!

ಓವಲ್ ಟೆಸ್ಟ್‌ ಪಂದ್ಯದ 61ನೇ ಓವರ್‌ವರೆಗೂ ಇಂಗ್ಲೆಂಡ್ ಕೇವಲ 2 ವಿಕೆಟ್ ಕಳೆದುಕೊಂಡು 141 ರನ್ ಬಾರಿಸಿತ್ತು. ಆದರೆ ಆ ಬಳಿಕ ಮಾರಕ ದಾಳಿ ನಡೆಸಿದ ಬುಮ್ರಾ ಓಲಿ ಪೋಪ್ ಹಾಗೂ ಬೆರ್‌ಸ್ಟೋವ್‌ ವಿಕೆಟ್ ಕಬಳಿಸುವ ಮೂಲಕ ಪಂದ್ಯದಲ್ಲಿ ಟೀಂ ಇಂಡಿಯಾ ಕಮ್‌ಬ್ಯಾಕ್‌ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮೊದಲ ಇನಿಂಗ್ಸ್‌ನಲ್ಲಿ 99 ರನ್‌ಗಳ ಮುನ್ನಡೆ ಪಡೆದಿದ್ದ ಇಂಗ್ಲೆಂಡ್ ವಿರುದ್ದ ಎರಡನೇ ಇನಿಂಗ್ಸ್‌ನಲ್ಲಿ ತಿರುಗೇಟು ನೀಡುವ ಮೂಲಕ ವಿರಾಟ್ ಕೊಹ್ಲಿ ಪಡೆ ಓವಲ್ ಟೆಸ್ಟ್‌ನಲ್ಲಿ 157 ರನ್‌ಗಳ ಗೆಲುವಿನ ನಗೆ ಬೀರಿತು. ಇದರೊಂದಿಗೆ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾ 2-1ರ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್ ಪ್ರವಾಸದ ಕೊನೆಯ ಟೆಸ್ಟ್ ಪಂದ್ಯವು ಸೆಪ್ಟೆಂಬರ್ 10ರಿಂದ ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗಲಿದೆ.
 

click me!