
ಲಂಡನ್(ಆ.17): ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಲಾರ್ಡ್ಸ್ ಟೆಸ್ಟ್ ಪಂದ್ಯದ ಕೊನೆಯ ದಿನ ಸಂಪೂರ್ಣ ಪ್ರಾಬಲ್ಯ ಮೆರೆದ ಟೀಂ ಇಂಡಿಯಾ ಆತಿಥೇಯ ಇಂಗ್ಲೆಂಡ್ ಎದುರು 151 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ 5 ಪಂದ್ಯಗಳ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ವಿರಾಟ್ ಕೊಹ್ಲಿ ಪಡೆ 1-0 ಮುನ್ನಡೆ ಸಾಧಿಸಿದೆ.
ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನ ಮಳೆಗೆ ಆಹುತಿಯಾಗಿದ್ದರಿಂದ ಪಂದ್ಯ ಡ್ರಾ ಆಗಿತ್ತು. ಆದರೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಲ್ರೌಂಡ್ ಪ್ರದರ್ಶನ ತೋರುವ ಮೂಲಕ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಭಾರತ ಸ್ಮರಣೀಯ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಯಿತು. ಅಂದಹಾಗೆ ಕಪಿಲ್ ದೇವ್. ಮಹೇಂದ್ರ ಸಿಂಗ್ ಧೋನಿ ಬಳಿಕ ಲಾರ್ಡ್ಸ್ ಮೈದಾನದಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟ ನಾಯಕ ಎನ್ನುವ ಕೀರ್ತಿ ವಿರಾಟ್ ಕೊಹ್ಲಿ ಪಾಲಾಯಿತು.
ಒಂದು ಹಂತದಲ್ಲಿ 209ಕ್ಕೆ 8 ವಿಕೆಟ್ ಕಳೆದುಕೊಂಡು ದುಸ್ಥಿತಿಯಲ್ಲಿದ್ದ ಭಾರತಕ್ಕೆ ಜೀವದಾನ ನೀಡಿದ್ದು 9ನೇ ವಿಕೆಟ್‌ಗೆ ಶಮಿ-ಬುಮ್ರಾ ಪೇರಿಸಿದ ಅಜೇಯ 89 ರನ್ ಜತೆಯಾಟ. ಇದು ಇಂಗ್ಲೆಂಡ್ ಗೆಲುವಿನಾಸೆಯನ್ನು ಕಮರಿಸಿತಲ್ಲದೆ, ಭಾರತಕ್ಕೆ ಬೌಲಿಂಗ್‌ನಲ್ಲಿ ಮನಸೋಇಚ್ಛೆ ದಾಳಿ ನಡೆಸಲು ಆತ್ಮವಿಶ್ವಾಸ ನೀಡಿತು. ರಾಹುಲ್ ಶತಕ, ವೇಗಿಗಳ ಶ್ರೇಷ್ಠ ಬೌಲಿಂಗ್ ನಡುವೆಯೂ ಭಾರತದ ಗೆಲುವಿಗೆ ಶಮಿ-ಬುಮ್ರಾ ಜತೆಯಾಟ ಲಾರ್ಡ್ಸ್ ಪಂದ್ಯ ಭಾರತದ ಪಾಲಾಗುವಂತೆ ಮಾಡಿತು.
ಇಂಗ್ಲೆಂಡ್‌ಗೆ ಗೆಲ್ಲಲು ಭಾರತ 272 ರನ್‌ಗಳ ಕಠಿಣ ಗುರಿ ನೀಡಿತು. ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಶಮಿ ಹಾಗೂ ಬುಮ್ರಾ ಬೌಲಿಂಗ್‌ನಲ್ಲೂ ಆರಂಭದಲ್ಲೇ ಇಂಗ್ಲೆಂಡ್ ಶಾಕ್ ನೀಡಿತು. ಇಂಗ್ಲೆಂಡ್ ಆರಂಭಿಕರಾದ ಬರ್ನ್ಸ್ ಹಾಗೂ ಸಿಬ್ಲಿ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿದರು. ಕೊನೆಯಲ್ಲಿ ಸಿರಾಜ್ ಮಾರಕ ದಾಳಿ ನಡೆಸಿ 4 ವಿಕೆಟ್ ಕಬಳಿಸುವುದರೊಂದಿಗೆ ಭಾರತ ಲಾರ್ಡ್ಸ್ ಮೈದಾನದಲ್ಲಿ ಗೆಲುವಿನ ಕೇಕೆ ಹಾಕಿತು. ಭಾರತದ ಪ್ರದರ್ಶನ ಕಂಡು ನೆಟ್ಟಿಗರು ಜೈ ಹೋ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.