* ಲೀಡ್ಸ್ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ ದಿಟ್ಟ ಹೋರಾಟ
* ಪವಾಡದ ನಿರೀಕ್ಷೆಯಲ್ಲಿ ವಿರಾಟ್ ಕೊಹ್ಲಿ ಪಡೆ
* ಮೊದಲ ಇನಿಂಗ್ಸ್‌ನಲ್ಲಿ ಕೇವಲ 78 ರನ್‌ಗಳಿಗೆ ಆಲೌಟ್ ಆಗಿದ್ದ ಟೀಂ ಇಂಡಿಯಾ
ಲೀಡ್ಸ್(ಆ.28): ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ 354 ರನ್‌ಗಳ ಬೃಹತ್ ಹಿನ್ನಡೆಯೊಂದಿಗೆ ಭಾರತ ದ್ವಿತೀಯ ಇನ್ನಿಂಗ್ಸ್ ಮುಂದುವರಿಸಿದ್ದು, ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಹೋರಾಟ ನಡೆಸುತ್ತಿದೆ.
ಇಂಗ್ಲೆಂಡ್ ವೇಗಿಗಳ ದಾಳಿಗೆ ತಕ್ಕ ಉತ್ತರ ನೀಡಿ ಆಕರ್ಷಕ ಅರ್ಧಶತಕ ಸಿಡಿಸಿದ ರೋಹಿತ್ ಶರ್ಮಾ, ಶತಕದ ಅಂಚಿನಲ್ಲಿರುವ ಚೇತೇಶ್ವರ್ ಪೂಜಾರ ಭಾರತದ ಹೋರಾಟಕ್ಕೆ ಬಲ ತುಂಬಿದರು. 3ನೇ ದಿನದ ಅಂತ್ಯಕ್ಕೆ ಭಾರತ 2 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿದ್ದು, ಪೂಜಾರ(91*) ಹಾಗೂ ವಿರಾಟ್ ಕೊಹ್ಲಿ(45*) ಅಜೇಯರಾಗಿ ಉಳಿದಿದ್ದಾರೆ. ಭಾರತ ಇನ್ನೂ 139 ರನ್‌ಗಳ ಹಿನ್ನಡೆಯಲ್ಲಿದೆ.
ರಾಹುಲ್ ಮತ್ತೆ ನಿರಾಸೆ: 2ನೇ ಇನ್ನಿಂಗ್ಸ್ ನಲ್ಲೂ ಭಾರತ ಆರಂಭ ಉತ್ತಮವಾಗಿರಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯ ಸುತ್ತಿದ್ದ ಕೆ.ಎಲ್.ರಾಹುಲ್ 2ನೇ ಇನ್ನಿಂಗ್ಸ್‌ನಲ್ಲೂ ಕೇವಲ 8ನೇ ರನ್‌ಗೆ ವಿಕೆಟ್ ಒಪ್ಪಿಸಿದರು.
Stumps in Leeds 🏏
An engrossing day of play comes to an end. | | https://t.co/iuMSsSlSo8 pic.twitter.com/juD7w3QcP4
ರೋಹಿತ್-ಪೂಜಾರ ಹೋರಾಟ:
ಈ ವೇಳೆ ರೋಹಿತ್ ಶರ್ಮಾ ಜೊತೆಗೂಡಿದ ಚೇತೇಶ್ವರ ಪೂಜಾರ ಇಂಗ್ಲೆಂಡ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಸಂಕಷ್ಟಸಂದರ್ಭದಲ್ಲಿ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಈ ಜೋಡಿ 2ನೇ ವಿಕೆಟ್‌ಗೆ 82 ರನ್‌ಗಳ ಜೊತೆಯಾಟ ನೀಡಿತು. ಟೀ ವಿರಾಮದ ವೇಳೆಗೆ ಭಾರತ 1 ವಿಕೆಟ್ ನಷ್ಟಕ್ಕೆ 112ರನ್ ಗಳಿಸಿತ್ತು.
Ind vs Eng ಲೀಡ್ಸ್ ಟೆಸ್ಟ್: 2ನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾಗೆ ಮತ್ತೆ ಆಘಾತ
ವಿರಾಮದ ಬಳಿಕ ದಾಳಿಗಿಳಿದ ರಾಬಿನ್ಸನ್, ರೋಹಿತ್ ಶರ್ಮಾರನ್ನು ಎಲ್‌ಬಿ ಬಲೆಗೆ ಕೆಡವಿದರು. ಇದರೊಂದಿಗೆ ರೋಹಿತ್- ಪೂಜಾರ ಜೊತೆಯಾಟಕ್ಕೆ ಕಡಿವಾಣ ಹಾಕಿ, ಭಾರತಕ್ಕೆ ಆಘಾತ ನೀಡಿದರು. 156 ಎಸೆತಗಳ ಎದುರಿಸಿದ ರೋಹಿತ್ 7 ಬೌಂಡರಿ, 1 ಸಿಕ್ಸರ್ ಸೇರಿ 59 ರನ್ ಬಾರಿಸಿದರು. ಬಳಿಕ ನಾಯಕ ವಿರಾಟ್ ಕೊಹ್ಲಿ ಜೊತೆಗೂಡಿದ ಪೂಜಾರ ಹೋರಾಟ ಮುಂದುವರೆಸಿದರು. 91 ರನ್ ಗಳಿಸಿ ಶತಕದ ಅಂಚಿನಲ್ಲಿರುವ ಪೂಜಾರ ಅಪಾಯಕಾರಿ ಆಗುವ ಸೂಚನೆ ನೀಡಿದ್ದು, ರನ್ ಬರ ಎದುರಿಸುತ್ತಿರುವ ಕೊಹ್ಲಿ ಸಹ ಪುಟಿದೇಳುವ ತವಕದಲ್ಲಿದ್ದಾರೆ.
9 ರನ್‌ಗೆ 2 ವಿಕೆಟ್ ಒಪ್ಪಿಸಿದ ಇಂಗ್ಲೆಂಡ್: 2ನೇ ದಿನದಂತ್ಯಕ್ಕೆ 423 ರನ್ ಗಳಿಸಿದ್ದ ಇಂಗ್ಲೆಂಡ್ 3ನೇ ದಿನ 9 ರನ್ ಕೂಡಿಸುವಷ್ಟರಲ್ಲಿ ಉಳಿದ 2 ವಿಕೆಟ್ ಕಳೆದುಕೊಂಡಿತು. ಕ್ರೇಗ್ ಓವರ್ಟನ್ 32 ರನ್‌ಗೆ ಔಟಾದರು. 2ನೇ ದಿನ ನಾಯಕ ಜೋ ರೂಟ್‌ರ ಆಕರ್ಷಕ ಶತಕ(121) ಹಾಗೂ ರೋರಿ ಬರ್ನ್ಸ್, ಹಸೀಬ್ ಹಮೀದ್ , ಡೇವಿಡ್ ಮಲಾನ್‌ರ ಅರ್ಧಶತಕದ ನೆರವಿನಿಂದ ಬೃಹತ್ ಮೊತ್ತ ಪೇರಿಸಿತ್ತು.
ಸಂಕ್ಷಿಪ್ತ ಸ್ಕೋರ್
ಭಾರತ: 78 ಮತ್ತು 2ನೇ ಇನ್ನಿಂಗ್ಸ್ 3ನೇ ದಿನದ ಅಂತ್ಯಕ್ಕೆ 215/2
ಇಂಗ್ಲೆಂಡ್: 432