Ind vs Eng ಸ್ಯಾಮ್ ಕರ್ರನ್‌ರಲ್ಲಿ ಧೋನಿ ಛಾಯೆ ಕಂಡ ಜೋಸ್‌ ಬಟ್ಲರ್‌

By Suvarna NewsFirst Published Mar 29, 2021, 5:02 PM IST
Highlights

ಇಂಗ್ಲೆಂಡ್ ಯುವ ಪ್ರತಿಭಾನ್ವಿತ ಆಲ್ರೌಂಡರ್‌ ಸ್ಯಾಮ್ ಕರ್ರನ್‌ ಭಾರತ ವಿರುದ್ದದ ಮೂರನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್‌ ಮಾಡಿದ ರೀತಿಯನ್ನು ಇಂಗ್ಲೆಂಡ್‌ ನಾಯಕ ಜೋಸ್ ಬಟ್ಲರ್ ಕೊಂಡಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಮಾ.29): ಯುಎಇನಲ್ಲಿ ನಡೆದ 13ನೇ ಅವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಎಂ.ಎಸ್. ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ಪರ ಸ್ಯಾಮ್‌ ಕರ್ರನ್‌ ಅದ್ಭುತ ಆಲ್ರೌಂಡ್‌ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಇದೀಗ ಭಾರತ ವಿರುದ್ದದ ಕೊನೆಯ ಏಕದಿನ ಪಂದ್ಯದಲ್ಲೂ ಏಕಾಂಗಿಯಾಗಿ ಕೆಚ್ಚೆದೆಯ ಬ್ಯಾಟಿಂಗ್‌ ಪ್ರದರ್ಶನ ತೋರುವ ಮೂಲಕ ಅಬ್ಬರಿಸಿದ್ದಾರೆ.

ಹೌದು, ಭಾರತ ವಿರುದ್ದದ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯವನ್ನು ಗೆಲ್ಲಲು ಇಂಗ್ಲೆಂಡ್‌ 330 ರನ್‌ಗಳ ಗುರಿ ಬೆನ್ನತ್ತಿತ್ತು. ನಿರಂತರವಾಗಿ ಇಂಗ್ಲೆಂಡ್‌ ವಿಕೆಟ್‌ ಕಳೆದುಕೊಂಡ ಪರಿಣಾಮ 200 ರನ್‌ ಗಳಿಸುವಷ್ಟರಲ್ಲಿ 7 ವಿಕೆಟ್‌ ಕಳೆದುಕೊಂಡು ಹಾಲಿ ಚಾಂಪಿಯನ್‌ ಇಂಗ್ಲೆಂಡ್ ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಇನ್ನೂ ಇಂಗ್ಲೆಂಡ್‌ ಗೆಲ್ಲಲು ಬರೋಬ್ಬರಿ 130 ರನ್‌ಗಳ ಅಗತ್ಯವಿತ್ತು. ಆ ವೇಳೆ ಬಾಲಂಗೋಚಿಗಳ ಸಹಾಯದ ಯುವ ಆಲ್ರೌಂಡರ್‌ ಸ್ಯಾಮ್‌ ಕರ್ರನ್‌ ಆಕರ್ಷಕ ಬ್ಯಾಟಿಂಗ್‌ ಮೂಲಕ ತಂಡವನ್ನು ಗೆಲುವಿನ ಸಮೀಪ ಕೊಂಡೊಯ್ದಿದ್ದರು. ಸ್ಯಾಮ್ ಕರ್ರನ್‌ ಆಟ ನೋಡಿ ಬಹುತೇಕ ಮಂದಿ ಧೋನಿಯಂತೆಯೇ ಕರ್ರನ್‌ ಮ್ಯಾಚ್‌ ಫಿನಿಶ್‌ ಮಾಡಬಹುದು ಎಂದು ಲೆಕ್ಕಾಚಾರ ಹಾಕಲಾರಂಭಿಸಿದ್ದರು. ಇದೆಲ್ಲದರ ಹೊರತಾಗಿ ಭಾರತೀಯ ಬೌಲರ್‌ಗಳ ಚಾಣಾಕ್ಷ ದಾಳಿಯಿಂದಾಗಿ ಇಂಗ್ಲೆಂಡ್‌ 7 ರನ್‌ಗಳ ರೋಚಕ ಸೋಲು ಕಂಡಿತು. ಸ್ಯಾಮ್ ಕರ್ರನ್‌ 83 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 3 ಸಿಕ್ಸರ್‌ ನೆರವಿನಿಂದ ಅಜೇಯ 95 ರನ್‌ ಬಾರಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಪಾಂಡ್ಯ ಸಾಷ್ಟಾಂಗ ನಮಸ್ಕಾರ; ಯೂ ಆರ್ ವೆಲ್‌ ಕಂ ಎಂದ ಡೆಲ್ಲಿ ಕ್ಯಾಪಿಟಲ್ಸ್‌..!

ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಇಂಗ್ಲೆಂಡ್ ನಾಯಕ ಜೋಸ್‌ ಬಟ್ಲರ್, ಸ್ಯಾಮ್‌ ಕರ್ರನ್ ಖಂಡಿತ ಮೂರನೇ ಏಕದಿನ ಪಂದ್ಯದ ಬಗ್ಗೆ ಧೋನಿ ಜತೆ ಮಾತನಾಡಲಿದ್ದಾರೆ ಎಂದೆನಿಸುತ್ತಿದೆ. ಇಂತಹ ಕಠಿಣ ಸಂದರ್ಭಗಳಲ್ಲಿ ಧೋನಿ ಹೇಗೆ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದರೋ ಅದೇ ರೀತಿಯ ಛಾಯೆಯನ್ನು ಕರ್ರನ್‌ರಲ್ಲಿ ನೋಡಲು ಸಿಕ್ಕಿತು. ಧೋನಿ ಓರ್ವ ಅದ್ಭುತ ಮ್ಯಾಚ್‌ ಫಿನಿಶರ್ ಎನ್ನುವುದು ನಮಗೆಲ್ಲರಿಗೂ ಗೊತ್ತು. ಧೋನಿಯ ಜತೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳುವುದರಿಂದ ಸಾಕಷ್ಟು ಕಲಿಯಲು ಅವಕಾಶ ಸಿಗಲಿದೆ ಎಂದು ಬಟ್ಲರ್ ಹೇಳಿದ್ದಾರೆ.

ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ಈಗಾಗಲೇ ಭರ್ಜರಿ ಅಭ್ಯಾಸ ಆರಂಭಿಸಿದ್ದು, ಸ್ಯಾಮ್‌ ಕರ್ರನ್‌ ಸೋಮವಾರವಾದ ಇಂದು(ಮಾ.29) ಸಿಎಸ್‌ಕೆ ತಂಡ ಕೂಡಿಕೊಳ್ಳಲಿದ್ದಾರೆ. ಏಪ್ರಿಲ್ 10ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದ ಮೊದಲ ಪಂದ್ಯವನ್ನಾಡಲಿದೆ.
 

click me!