* ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಸ್ಪೋಟಕ ಶತಕ ಚಚ್ಚಿದ ಪಂತ್
* ಆರಂಭಿಕ ಆಘಾತದಲ್ಲಿದ್ದ ಭಾರತಕ್ಕೆ ಆಸರೆಯಾದ ಪಂತ್-ಜಡೇಜಾ ಜತೆಯಾಟ
* 146 ರನ್ ಬಾರಿಸಿ ಹಲವು ದಾಖಲೆ ಬರೆದ ವಿಕೆಟ್ ಕೀಪರ್ ಬ್ಯಾಟರ್
ಬರ್ಮಿಂಗ್‌ಹ್ಯಾಮ್(ಜು.02): ಬಹುನಿರೀಕ್ಷಿತ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 5ನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಸಿಕ್ಕಿದೆ. ಒಂದು ಹಂತದಲ್ಲಿ ಕೇವಲ 98 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಟೀಂ ಇಂಡಿಯಾಗೆ ಆರನೇ ವಿಕೆಟ್‌ಗೆ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಬಾರಿಸಿದ ದ್ವಿಶತಕದ ಜತೆಯಾಟದಿಂದ ಆತಿಥೇಯ ಇಂಗ್ಲೆಂಡ್‌ಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ರಿಷಭ್ ಪಂತ್ ಬ್ಯಾಟಿಂಗ್‌ನಲ್ಲಿ ಮೂಡಿಬಂದ 5ನೇ ಟೆಸ್ಟ್ ಶತಕವು ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ.
ಭಾರತ ಹಾಗೂ ಇಂಗ್ಲೆಂಡ್ (India vs England) ತಂಡಗಳ ನಡುವಿನ ಮರುನಿಗದಿಯಾಗಿದ್ದ ಟೆಸ್ಟ್ ಪಂದ್ಯಕ್ಕೆ ಇಲ್ಲಿನ ಎಡ್ಜ್‌ಬಾಸ್ಟನ್ ಮೈದಾನ ಆತಿಥ್ಯವನ್ನು ವಹಿಸಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡವು ಇಂಗ್ಲೆಂಡ್ ವೇಗಿಗಳಾದ ಜೇಮ್ಸ್ ಆಂಡರ್‌ಸನ್ ಹಾಗೂ ಮ್ಯಾಟ್ ಪಾಟ್ಸ್ ಮಾರಕ ದಾಳಿಗೆ ತತ್ತರಿಸಿ ಕೇವಲ 98 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಚೇತೇಶ್ವರ್ ಪೂಜಾರ, ಶುಭ್‌ಮನ್ ಗಿಲ್, ಹನುಮ ವಿಹಾರಿ, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಹೆಚ್ಚುಹೊತ್ತು ಕ್ರೀಸ್‌ನಲ್ಲಿರಲು ಇಂಗ್ಲೆಂಡ್ ವೇಗಿಗಳು ಅವಕಾಶ ನೀಡಲಿಲ್ಲ. ಆದರೆ ಆರನೇ ವಿಕೆಟ್‌ಗೆ ಜತೆಯಾದ 24 ವರ್ಷದ ರಿಷಭ್ ಪಂತ್ (Rishabh Pant) ಹಾಗೂ ಸೌರಾಷ್ಟ್ರ ಮೂಲದ ರವೀಂದ್ರ ಜಡೇಜಾ (Ravindra Jadeja) ಆಕರ್ಷಕ ದ್ವಿಶತಕದ ಜತೆಯಾಟವಾಡಿ ತಂಡದ ಮೊತ್ತವನ್ನು 320ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಇದೇ ಪಂದ್ಯದಲ್ಲಿ ರಿಷಭ್ ಪಂತ್ ಸ್ಪೋಟಕ ಶತಕ ಸಿಡಿಸುವುದರ ಜತೆಗೆ ಹಲವು ದಾಖಲೆಗಳನ್ನು ನಿರ್ಮಿಸಿದರು.
ಒಂದು ಹಂತದಲ್ಲಿ ಕೇವಲ 98 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದರೂ ಸಹಾ ರಿಷಭ್ ಪಂತ್, ನಿರ್ಭಯವಾಗಿ ಬ್ಯಾಟ್ ಬೀಸುವ ಮೂಲಕ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು. ಆರನೇ ವಿಕೆಟ್‌ಗೆ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಕೇವಲ 40 ಓವರ್‌ಗಳೊಳಗಾಗಿ 222 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 320ರ ಗಡಿ ದಾಟುವಂತೆ ಮಾಡಿದರು. ರಿಷಭ್ ಪಂತ್ ಕೇವಲ 111 ಎಸೆತಗಳಲ್ಲಿ 146 ರನ್ ಸಿಡಿಸಿ ಜೋ ರೂಟ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು ಮೊದಲ ದಿನದಾಟದಲ್ಲಿ ರಿಷಭ್ ಪಂತ್ ಹೆಸರಿಗೆ ಸೇರ್ಪಡೆಯಾದ ಇಂಟ್ರೆಸ್ಟಿಂಗ್ ಅಂಕಿ-ಅಂಶಗಳು ಇಲ್ಲಿವೆ ನೋಡಿ.
Rishabh Pant walks back to a standing ovation 👏 | | 📝 Scorecard: https://t.co/wMZK8kesdD pic.twitter.com/KtiiB4LfKA
— ICC (@ICC)ENGvsIND : ಟೀಕೆಗಳಿಗೆ ಸೆಂಚುರಿ ಮೂಲಕ ಉತ್ತರ ಕೊಟ್ಟ ರಿಷಭ್, ಸಾಥ್ ನೀಡಿದ ಜಡೇಜಾ!
89 ಎಸೆತಗಳಲ್ಲಿ ಶತಕ: ರಿಷಭ್ ಪಂತ್ ಕೇವಲ 89 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಸಿಡಿಸಿದ ಭಾರತದ ವಿಕೆಟ್ ಕೀಪರ್ ಬ್ಯಾಟರ್ ಎನ್ನುವ ದಾಖಲೆಗೆ ಪಂತ್ ಪಾತ್ರರಾದರು. ಇದಷ್ಟೇ ಅಲ್ಲದೇ ಇಂಗ್ಲೆಂಡ್ ನೆಲದಲ್ಲಿ ಎರಡನೇ ಅತಿವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎನ್ನುವ ಹಿರಿಮೆಗೂ ಪಂತ್ ಭಾಜನರಾಗಿದ್ದಾರೆ.
ದಾಖಲೆಯ 222 ರನ್‌ಗಳ ಜತೆಯಾಟ: ಒಂದು ಹಂತದಲ್ಲಿ 98 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡಕ್ಕೆ ಆರನೇ ವಿಕೆಟ್‌ಗೆ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ 222 ರನ್‌ಗಳ ಜತೆಯಾಟವಾಡುವ ಮೂಲಕ 6ನೇ ವಿಕೆಟ್‌ಗೆ ಇಂಗ್ಲೆಂಡ್ ಎದುರು ಗರಿಷ್ಟ ರನ್ ಜತೆಯಾಟ ನಿಭಾಯಿಸಿದ ದಾಖಲೆ ನಿಭಾಯಿಸಿದೆ.
146 ರನ್: ರಿಷಭ್ ಪಂತ್ 146 ರನ್ ಬಾರಿಸುವ ಮೂಲಕ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಎರಡನೇ ಗರಿಷ್ಠ ರನ್ ಬಾರಿಸಿದ ವಿಕೆಟ್ ಕೀಪರ್ ಎನ್ನುವ ದಾಖಲೆಗೆ ಪಾತ್ರರಾಗಿದ್ದರು. ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟರ್ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಆಡಂ ಗಿಲ್‌ಕ್ರಿಸ್ಟ್ 152 ರನ್ ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ.
5ನೇ ಶತಕ ಬಾರಿಸಿದ ಪಂತ್: ರಿಷಭ್ ಪಂತ್ 2018ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದುವರೆಗೂ ರಿಷಭ್ ಪಂತ್ 5ನೇ ಟೆಸ್ಟ್ ಶತಕ ಪೂರೈಸಿದ್ದಾರೆ. ಪಂತ್ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಬಳಿಕ ಜಗತ್ತಿನ ಯಾವೊಬ್ಬ ವಿಕೆಟ್ ಕೀಪರ್ ಕೂಡಾ ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರಕ್ಕೂ ಹೆಚ್ಚು ಶತಕ ಬಾರಿಸಿಲ್ಲ.