ಐಸಿಸಿ ಟೆಸ್ಟ್‌ ವಿಶ್ವಕಪ್‌ ಫೈನಲ್‌ ಮೇಲೆ ಭಾರತ ಕಣ್ಣು!

By Suvarna NewsFirst Published Mar 4, 2021, 8:04 AM IST
Highlights

ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಮೇಲೆ ಚಿತ್ತನೆಟ್ಟಿರುವ ಟೀಂ ಇಂಡಿಯಾ ಅಹಮದಾಬಾದ್‌ನಲ್ಲಿ ನಡೆಯಲಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ಗೆಲುವಿಗಾಗಿ ಎದುರು ನೋಡುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಅಹಮದಾಬಾದ್(ಮಾ.04)‌: ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಸ್ಥಾನದ ಮೇಲೆ ಕಣ್ಣಿಟ್ಟಿರುವ ಭಾರತ, ಗುರುವಾರದಿಂದ ಇಲ್ಲಿ ಆರಂಭಗೊಳ್ಳಲಿರುವ ಇಂಗ್ಲೆಂಡ್‌ ವಿರುದ್ಧದ 4ನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಮತ್ತೊಂದು ಬೃಹತ್‌ ಜಯದ ನಿರೀಕ್ಷೆಯಲ್ಲಿದೆ. 

4 ಪಂದ್ಯಗಳ ಸರಣಿಯಲ್ಲಿ 2-1ರ ಮುನ್ನಡೆ ಹೊಂದಿರುವ ಭಾರತ, ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ಗೇರಲು ಇದೇ ಅಂತರ ಕಾಯ್ದುಕೊಳ್ಳಬೇಕಿದೆ. ಇಲ್ಲವಾದರೆ ನ್ಯೂಜಿಲೆಂಡ್‌ ತಂಡವನ್ನು ಫೈನಲ್‌ನಲ್ಲಿ ಎದುರಿಸುವ ಅವಕಾಶ ಆಸ್ಪ್ರೇಲಿಯಾಗೆ ಸಿಗಲಿದೆ. ಇದರ ಜೊತೆಗೆ ತವರಿನಲ್ಲಿ ತನ್ನ ಗೆಲುವಿನ ಓಟವನ್ನು ಮುಂದುವರಿಸುವ ವಿಶ್ವಾಸದಲ್ಲಿರುವ ಭಾರತ ತಂಡ, ಸತತ 13ನೇ ಸರಣಿ ಜಯದ ಸಿಹಿ ಸವಿಯಲು ಕಾತರಿಸುತ್ತಿದೆ.

ಮತ್ತೊಂದು ಸ್ಪಿನ್‌ ಅಖಾಡ!: ಇಲ್ಲಿನ ಮೊಟೇರಾ ಕ್ರೀಡಾಂಗಣದಲ್ಲಿ ನಡೆದ 3ನೇ ಟೆಸ್ಟ್‌ ಅನ್ನು ಒಂದೂ ಮುಕ್ಕಾಲು ದಿನದಲ್ಲಿ ಗೆದ್ದಿದ್ದ ಭಾರತಕ್ಕೆ 4ನೇ ಟೆಸ್ಟ್‌ನಲ್ಲೂ ಇಲ್ಲಿನ ಸ್ಪಿನ್‌ ಸ್ನೇಹಿ ಪಿಚ್‌ ನೆರವಾಗಲಿದೆ. ಆರ್‌.ಅಶ್ವಿನ್‌ ಹಾಗೂ ಅಕ್ಷರ್‌ ಪಟೇಲ್‌ ಮತ್ತೊಮ್ಮೆ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳನ್ನು ಸ್ಪಿನ್‌ ಖೆಡ್ಡಕ್ಕೆ ಬೀಳಿಸಲು ಸಜ್ಜಾಗಿದ್ದಾರೆ. ಸರಣಿಯಲ್ಲಿ ಒಟ್ಟು 42 ವಿಕೆಟ್‌ ಕಬಳಿಸಿರುವ ಈ ಜೋಡಿ, ಪಿಂಕ್‌ ಬಾಲ್‌ ಟೆಸ್ಟ್‌ನಷ್ಟೇ ಪರಿಣಾಮಕಾರಿಯಾಗುವ ವಿಶ್ವಾಸ ತಂಡಕ್ಕಿದೆ. ಮೊದಲ 3 ಪಂದ್ಯಗಳಲ್ಲಿ ಪತನಗೊಂಡ ಇಂಗ್ಲೆಂಡ್‌ನ ಒಟ್ಟು 60 ವಿಕೆಟ್‌ಗಳಲ್ಲಿ 49 ವಿಕೆಟ್‌ಗಳನ್ನು ಸ್ಪಿನ್ನರ್‌ಗಳೇ ಗಳಿಸಿದ್ದಾರೆ. ಹೀಗಾಗಿ ಈ ಪಂದ್ಯದಲ್ಲೂ ಸ್ಪಿನ್ನರ್‌ಗಳೇ ಭಾರತದ ಟ್ರಂಪ್‌ ಕಾರ್ಡ್‌ಗಳಾಗಿದ್ದಾರೆ. ವಾಷಿಂಗ್ಟನ್‌ ಸುಂದರ್‌ ಬದಲು ಈ ಪಂದ್ಯದಲ್ಲಿ ಕುಲ್ದೀಪ್‌ ಯಾದವ್‌ ಕಣಕ್ಕಿಳಿಯುವ ಸಾಧ್ಯತೆ ಇದ್ದು, ಅಶ್ವಿನ್‌ ಹಾಗೂ ಅಕ್ಷರ್‌ಗೆ ನೆರವಾಗಲಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್‌ಗೆ ಸಂಭಾವ್ಯ ಟೀಂ ಇಂಡಿಯಾ ಪ್ರಕಟ..!

ಬ್ಯಾಟ್ಸ್‌ಮನ್‌ಗಳದ್ದೇ ಚಿಂತೆ: ತವರಿನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಅಬ್ಬರಿಸದೆ ಇರುವುದು ಆಶ್ಚರ್ಯ ಮೂಡಿಸಿದೆ. ರೋಹಿತ್‌ ಶರ್ಮಾ 3 ಪಂದ್ಯಗಳಲ್ಲಿ 296 ರನ್‌ ಗಳಿಸಿ ಭಾರತ ಪರ ಅತಿಹೆಚ್ಚು ರನ್‌ ಗಳಿಸಿರುವ ಬ್ಯಾಟ್ಸ್‌ಮನ್‌ ಎನಿಸಿದ್ದಾರೆ. 2ನೇ ಸ್ಥಾನದಲ್ಲಿ ಆರ್‌.ಅಶ್ವಿನ್‌ (176) ಇದ್ದಾರೆ. ರೋಹಿತ್‌ ಹೊರತು ಪಡಿಸಿ ಸ್ಪಿನ್‌ ಸ್ನೇಹಿ ಪಿಚ್‌ಗಳಲ್ಲಿ ಭಾರತದ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು ದೊಡ್ಡ ಇನ್ನಿಂಗ್ಸ್‌ ಆಡಿಲ್ಲ. ನಾಯಕ ವಿರಾಟ್‌ ಕೊಹ್ಲಿ ಸಹ ವೈಫಲ್ಯ ಕಾಣುತ್ತಿದ್ದಾರೆ. ಶುಭ್‌ಮನ್‌ ಗಿಲ್‌, ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ, ರಿಷಭ್‌ ಪಂತ್‌ರಿಂದ ಸ್ಥಿರ ಪ್ರದರ್ಶನ ಮೂಡಿಬಂದಿಲ್ಲ.

ವೇಗದ ಬೌಲಿಂಗ್‌ ವಿಭಾಗದಲ್ಲಿ ಒಂದು ಬದಲಾವಣೆ ಸಹಜವಾಗಿಯೇ ಆಗಲಿದ್ದು, ಜಸ್‌ಪ್ರೀತ್‌ ಬುಮ್ರಾ ಬದಲಿಗೆ ಉಮೇಶ್‌ ಯಾದವ್‌ ಆಡುವುದು ಬಹುತೇಕ ಖಚಿತ ಎನ್ನಲಾಗಿದೆ. ಇಶಾಂತ್‌ ಶರ್ಮಾ ಇಲ್ಲವೇ ಮೊಹಮದ್‌ ಸಿರಾಜ್‌ ನಡುವೆ ಮತ್ತೊಂದು ಸ್ಥಾನಕ್ಕೆ ಪೈಪೋಟಿ ಇದೆ.

ಸಂಕಷ್ಟದಲ್ಲಿ ಇಂಗ್ಲೆಂಡ್‌: ಮೊದಲ ಟೆಸ್ಟ್‌ ಬಳಿಕ ಇಂಗ್ಲೆಂಡ್‌ನ ಯೋಜನೆಗಳೆಲ್ಲವೂ ಕೈಕೊಟ್ಟಿವೆ. ಜೋ ರೂಟ್‌ (333 ರನ್‌) ಹೊರತುಪಡಿಸಿ ಸರಣಿಯಲ್ಲಿ ಮತ್ತ್ಯಾವ ಇಂಗ್ಲಿಷ್‌ ಬ್ಯಾಟ್ಸ್‌ಮನ್‌ ಒಟ್ಟು 200 ರನ್‌ ದಾಟಿಲ್ಲ. ತಂಡದ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಈ ಪಂದ್ಯಕ್ಕೆ ಸ್ಪಿನ್ನರ್‌ ಡಾಮ್‌ ಬೆಸ್‌ ವಾಪಸಾಗುವ ನಿರೀಕ್ಷೆ ಇದೆ. ಬ್ಯಾಟಿಂಗ್‌ ಕ್ರಮಾಂಕದಲ್ಲೂ ಕೆಲ ಬದಲಾವಣೆ ಆಗುವ ಸಾಧ್ಯತೆ ಇದೆ. ಓಲಿ ಪೋಪ್‌ 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಜಾನಿ ಬೇರ್‌ಸ್ಟೋವ್‌ 6ನೇ ಕ್ರಮಾಂಕದಲ್ಲಿ ಆಡಬಹುದು.

ಪಿಚ್‌ ರಿಪೋರ್ಟ್‌

ಮೊಟೇರಾ ಪಿಚ್‌ ಒಣ ಪಿಚ್‌ ಆಗಿದ್ದು ಮೊದಲ ದಿನದಿಂದಲೇ ಸ್ಪಿನ್ನರ್‌ಗಳಿಗೆ ನೆರವು ಸಿಗಲಿದೆ. ಆದರೆ ಪಿಂಕ್‌ ಬಾಲ್‌ ಪಂದ್ಯದಲ್ಲಿ ಪತನಗೊಂಡಷ್ಟುವೇಗವಾಗಿ, ಒಟ್ಟೊಟ್ಟಿಗೆ ವಿಕೆಟ್‌ಗಳು ಬೀಳುವ ಸಾಧ್ಯತೆ ಕಡಿಮೆ. ಪಂದ್ಯ 4ನೇ ದಿನದ ವರೆಗೂ ನಡೆಯಬಹುದು ಎಂದು ವಿಶ್ಲೇಷಿಸಲಾಗಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ, ಶುಭ್‌ಮನ್‌ ಗಿಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ರಿಷಭ್‌ ಪಂತ್‌, ಆರ್‌.ಅಶ್ವಿನ್‌, ಅಕ್ಷರ್‌ ಪಟೇಲ್‌, ಕುಲ್ದೀಪ್‌ ಯಾದವ್‌, ಉಮೇಶ್‌ ಯಾದವ್‌, ಇಶಾಂತ್‌/ಸಿರಾಜ್‌.

ಇಂಗ್ಲೆಂಡ್‌: ಜ್ಯಾಕ್‌ ಕ್ರಾಲಿ, ಡಾಮ್‌ ಸಿಬ್ಲಿ, ಓಲಿ ಪೋಪ್‌, ಜೋ ರೂಟ್‌(ನಾಯಕ), ಬೆನ್‌ ಸ್ಟೋಕ್ಸ್‌, ಜಾನಿ ಬೇರ್‌ಸ್ಟೋವ್‌, ಬೆನ್‌ ಫೋಕ್ಸ್‌, ಡಾಮ್‌ ಬೆಸ್‌, ಜ್ಯಾಕ್‌ ಲೀಚ್‌, ಜೋಫ್ರಾ ಆರ್ಚರ್‌, ಜೇಮ್ಸ್‌ ಆ್ಯಂಡರ್‌ಸನ್‌.

ಸ್ಥಳ: ಅಹಮದಾಬಾದ್‌ 
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

click me!