
ಅಹಮದಾಬಾದ್(ಮಾ.05): ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿ ಬೇಗನೇ ವಿಕೆಟ್ ಒಪ್ಪಿಸಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಟೀಂ ಇಂಡಿಯಾಗೆ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮತ್ತೊಮ್ಮೆ ಆಸರೆಯಾಗಿದ್ದಾರೆ. ಎರಡನೇ ದಿನದಾಟದ ಲಂಚ್ ಬ್ರೇಕ್ ವೇಳೆಗೆ ಭಾರತ 4 ವಿಕೆಟ್ ಕಳೆದುಕೊಂಡು 80 ರನ್ ಬಾರಿಸಿದ್ದು, ಇನ್ನೂ 125 ರನ್‌ಗಳ ಹಿನ್ನಡೆಯಲ್ಲಿದೆ.
ಹೌದು, ಮೊದಲ ದಿನದಾಟದಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 24 ರನ್ ಗಳಿಸಿದ್ದ ಟೀಂ ಇಂಡಿಯಾ ಎರಡನೇ ದಿನದಾಟವನ್ನು ಸಾಕಷ್ಟು ಎಚ್ಚರಿಕೆಯಿಂದಲೇ ಆರಂಭಿಸಿತು. ಎರಡನೇ ವಿಕೆಟ್‌ಗೆ ಪೂಜಾರ ಹಾಗೂ ರೋಹಿತ್ ಜೋಡಿ 40 ರನ್‌ಗಳ ಜತೆಯಾಟವಾಡಿತು. ಆಟಕ್ಕೆ ಕುದುರಿಕೊಳ್ಳುವ ಮುನ್ಸೂಚನೆ ನೀಡಿದ್ದ ಪೂಜಾರ ಮತ್ತೊಮ್ಮೆ ಜಾಕ್ ಲೀಚ್‌ಗೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ವಿಕೆಟ್ ಒಪ್ಪಿಸುವ ಮುನ್ನ ಪೂಜಾರ 66 ಎಸೆತಗಳನ್ನು ಎದುರಿಸಿ 17 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಇನ್ನು ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ಶೂನ್ಯ ಸುತ್ತಿ ಬೆನ್ ಸ್ಟೋಕ್ಸ್‌ಗೆ ಬಲಿಯಾದರು. ಉಪನಾಯಕ ಅಜಿಂಕ್ಯ ರಹಾನೆ ಚುರುಕಿನ 27 ರನ್ ಬಾರಿಸಿ ಆಂಡರ್‌ಸನ್‌ಗೆ ಎರಡನೇ ಬಲಿಯಾದರು.
ಅಹಮದಾಬಾದ್ ಟೆಸ್ಟ್: ಭಾರತಕ್ಕೆ ಮೊದಲ ದಿನದ ಗೌರವ
ಕೊಹ್ಲಿ ಎರಡನೇ ಸಲ ಶೂನ್ಯ ಸಂಪಾದನೆ: ಅಂದಹಾಗೆ ಸರಣಿಯೊಂದರಲ್ಲಿ ಎರಡನೇ ಬಾರಿಗೆ ವಿರಾಟ್ ಕೊಹ್ಲಿ ಎರಡು ಬಾರಿ ಶೂನ್ಯ ಸಂಪಾದನೆ ಮಾಡಿದರು. ಈ ಮೊದಲು 2014ರಲ್ಲಿ ಇಂಗ್ಲೆಂಡ್ ವಿರುದ್ದವೇ ಲಿಯಾಮ್ ಫ್ಲಂಕೆಟ್ ಹಾಗೂ ಜೇಮ್ಸ್ ಆಂಡರ್‌ಸನ್ ಬೌಲಿಂಗ್‌ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಇನ್ನು ಪಸಕ್ತ ಟೂರ್ನಿಯಲ್ಲಿ ಈ ಮೊದಲು ಮೋಯಿನ್ ಅಲಿ ಬೌಲಿಂಗ್‌ನಲ್ಲಿ ಶೂನ್ಯ ಸುತ್ತಿದ್ದರು. ಇದೀಗ ಸ್ಟೋಕ್ಸ್ ಟೀಂ ಇಂಡಿಯಾ ನಾಯಕನಿಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ.
ಹಿಟ್‌ಮ್ಯಾನ್ ಆಸರೆ: ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ನೆಲಕಚ್ಚಿ ಆಡುವ ಪ್ರಯತ್ನ ಮುಂದುವರೆಸಿದ್ದಾರೆ. ರೋಹಿತ್ 106 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 32 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ರೋಹಿತ್ ಬ್ಯಾಟಿಂಗ್ ಪ್ರದರ್ಶನದ ಮೇಲೆ ಟೀಂ ಇಂಡಿಯಾ ಭವಿಷ್ಯ ನಿರ್ಧಾರವಾಗಲಿದೆ.
ಸಂಕ್ಷಿಪ್ತ ಸ್ಕೋರ್:
ಇಂಗ್ಲೆಂಡ್: 205/10
ಭಾರತ: 80/4
(* ಎರಡನೇ ದಿನದಾಟದ ಲಂಚ್ ಬ್ರೇಕ್ ವೇಳೆಗೆ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.