
ಮೀರ್‌ಪುರ(ಡಿ.23): ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ರಿಷಭ್(86) ಹಾಗೂ ಶ್ರೇಯಸ್ ಅಯ್ಯರ್(58) ಅಜೇಯ ಶತಕದ ಜತೆಯಾಟದ(132) ನೆರವಿನಿಂದ ಪಂದ್ಯದಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿದೆ. ಎರಡನೇ ದಿನದಾಟದ ಚಹಾ ವಿರಾಮದ ವೇಳೆಗೆ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು 226 ರನ್ ಬಾರಿಸಿದ್ದು, ಇನ್ನು ಕೇವಲ ಒಂದು ರನ್ ಹಿನ್ನೆಡೆಯಲ್ಲಿದೆ.
ಇಲ್ಲಿನ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನ ಆರಂಭಿಕ ಆಘಾತದ ಹೊರತಾಗಿಯೂ ಟೀಂ ಇಂಡಿಯಾ ಭರ್ಜರಿ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದೆ. ಲಂಚ್ ಬ್ರೇಕ್ ವೇಳೆಗೆ 3 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ, ಲಂಚ್ ಬ್ರೇಕ್ ಬಳಿಕ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿತು. ವಿರಾಟ್ ಕೊಹ್ಲಿ 24 ರನ್ ಬಾರಿಸಿ ಟಸ್ಕಿನ್ ಅಹಮ್ಮದ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ನುರುಲ್ ಹಸನ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಟೀಂ ಇಂಡಿಯಾ 94 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಪಂತ್ ಆಕ್ರಮಣಕಾರಿ ಬ್ಯಾಟಿಂಗ್, ಅಯ್ಯರ್ ಸಮಯೋಚಿತ ಫಿಫ್ಟಿ: ಟೀಂ ಇಂಡಿಯಾ ಮೂರಂಕಿ ಮೊತ್ತ ಕಲೆಹಾಕುವ ಮುನ್ನವೇ ಪ್ರಮುಖ 4 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದಾಗ ಐದನೇ ವಿಕೆಟ್‌ಗೆ ಜತೆಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ಸ್ಪೋಟಕ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸಾಕಷ್ಟು ತಿರುವು ಪಡೆಯುತ್ತಿರುವ ಪಿಚ್‌ನಲ್ಲಿ ರಕ್ಷಣಾತ್ಮಕ ಆಟವಾಡುವುದರಿಂದ ಪ್ರಯೋಜನವಿಲ್ಲ ಎನ್ನುವುದನ್ನು ಅರಿತುಕೊಂಡ ಈ ಜೋಡಿ, ಪ್ರತಿ ಓವರ್‌ನಲ್ಲಿ ಬೌಂಡರಿ ಸಿಕ್ಸರ್ ಬಾರಿಸುವ ಮೂಲಕ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಪರಿಣಾಮ ಎರಡನೆ ಸೆಷನ್‌ನಲ್ಲಿ ಟೀಂ ಇಂಡಿಯಾ 25 ಓವರ್‌ಗಳನ್ನಾಡಿ ಕೇವಲ ಒಂದು ವಿಕೆಟ್ ಕಳೆದುಕೊಂಡು 140 ರನ್‌ಗಳನ್ನು ಕಲೆಹಾಕಿತು.
Ind vs Ban: ಮತ್ತೆ 2ನೇ ಟೆಸ್ಟ್‌ನಲ್ಲಿ ಕೆ ಎಲ್ ರಾಹುಲ್ ಫೇಲ್, ವಿರಾಟ್ ಮುಂದಿದೆ ದೊಡ್ಡ ಇನಿಂಗ್ಸ್ ಕಟ್ಟುವ ಸವಾಲ್..!
ಮೈಚಳಿ ಬಿಟ್ಟು ಬ್ಯಾಟ್ ಬೀಸಿದ ರಿಷಭ್ ಪಂತ್ ಕೇವಲ 90 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 5 ಮುಗಿಲೆತ್ತರದ ಸಿಕ್ಸರ್ ನೆರವಿನಿಂದ ಅಜೇಯ 86 ರನ್ ಬಾರಿಸಿದ್ದು, ಈ ವರ್ಷದಲ್ಲೇ ಮೂರನೇ ಟೆಸ್ಟ್ ಶತಕದತ್ತ ದಾಪುಗಾಲಿಡುತ್ತಿದ್ದಾರೆ. ಇನ್ನೊಂದೆಡೆ ರಿಷಭ್ ಪಂತ್‌ಗೆ ಉತ್ತಮ ಸಾಥ್ ನೀಡಿದ ಶ್ರೇಯಸ್ ಅಯ್ಯರ್ ಕೂಡಾ ಕೇವಲ 68 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 58 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.