Ind vs Ban: ಸತತ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾಗೆ ಮತ್ತೆ ಶಾಕ್, ಮತ್ತಿಬ್ಬರು ತಾರಾ ಆಟಗಾರರು ಔಟ್..?

By Naveena K VFirst Published Dec 9, 2022, 1:27 PM IST
Highlights

ಭಾರತ-ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿ ಡಿಸೆಂಬರ್ 14ರಿಂದ ಆರಂಭ
ಟೆಸ್ಟ್ ಸರಣಿಯಿಂದ ಜಡೇಜಾ ಹಾಗೂ ಶಮಿ ಔಟ್?
ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೇರುವ ದೃಷ್ಟಿಯಿಂದ ಭಾರತದ ಪಾಲಿಗೆ ಮಹತ್ವದ ಸರಣಿ

ಢಾಕಾ(ಡಿ.09): ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆತಿಥೇಯ ಬಾಂಗ್ಲಾದೇಶ ತಂಡವು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಕೈವಶ ಮಾಡಿಕೊಂಡಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಟೀಂ ಇಂಡಿಯಾಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ಏಕದಿನ ಸರಣಿ ಸರಣಿ ಮುಗಿಯುತ್ತಿದ್ದಂತೆಯೇ ಡಿಸೆಂಬರ್ 14ರಿಂದ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜಾ ಹೊರಬೀಳುವುದು ಬಹುತೇಕ ಖಚಿತವಾಗಿದೆ.

ಹೌದು, ಸತತ ಸೋಲಿನಿಂದ ಕಂಗೆಟ್ಟಿರುವ ಟೀಂ ಇಂಡಿಯಾಗೆ ಮತ್ತೊಮ್ಮೆ ಆಘಾತ ಎದುರಾಗಿದ್ದು, ಈ ಇಬ್ಬರು ತಾರಾ ಆಟಗಾರರು ಗಾಯದಿಂದ ಸಂಪೂರ್ಣ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಡಿಸೆಂಬರ್ 14ರಿಂದ ಚಟ್ಟೊಗ್ರಾಮ್‌ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯುವುದು ಬಹುತೇಕ ಖಚಿತ ಎನಿಸಿದೆ. ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ಬದಲಿಗೆ ಸೌರಭ್ ಕುಮಾರ್, ಉಮ್ರಾನ್ ಮಲಿಕ್ ಹಾಗೂ ನವದೀಪ್ ಸೈನಿ ಈ ಮೂವರ ಪೈಕಿ ಇಬ್ಬರು ಆಟಗಾರರು ಬಾಂಗ್ಲಾದೇಶ ಸರಣಿಗೆ ಭಾರತ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸೌರಭ್ ಕುಮಾರ್ ಹಾಗೂ ನವದೀಪ್ ಸೈನಿ ಈಗಾಗಲೇ ಭಾರತ 'ಎ' ಪರ ಬಾಂಗ್ಲಾದೇಶ 'ಎ' ತಂಡದ ವಿರುದ್ದ ಅನಧಿಕೃತ ಟೆಸ್ಟ್‌ ಪಂದ್ಯವನ್ನಾಡುತ್ತಿದ್ದಾರೆ. 

ಕಳೆದ ಸೆಪ್ಟೆಂಬರ್‌ನಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿ ಕ್ರಿಕೆಟ್‌ನಿಂದ ದೂರವೇ ಉಳಿದಿರುವ ತಾರಾ ಆಲ್ರೌಂಡರ್ ರವೀಂದ್ರ ಜಡೇಜಾ, ಬಾಂಗ್ಲಾದೇಶ ಎದುರಿನ ಟೆಸ್ಟ್ ಸರಣಿ ವೇಳೆಗೆ ತಂಡ ಕೂಡಿಕೊಳ್ಳುವ ನಿರೀಕ್ಷೆಯಿತ್ತು. ಆದರೆ ಜಡ್ಡು ಸಂಪೂರ್ಣ ಫಿಟ್ನೆಸ್ ಸಾಧಿಸದ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಎದುರಿನ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಇನ್ನು ಟಿ20 ವಿಶ್ವಕಪ್ ಮುಗಿಸಿ ತವರಿಗೆ ವಾಪಾಸ್ಸಾಗಿದ್ದ ಮೊಹಮ್ಮದ್ ಶಮಿ, ಬಾಂಗ್ಲಾದೇಶ ಎದುರಿನ ಸೀಮಿತ ಓವರ್‌ಗಳ ಸರಣಿಗೂ ಮುನ್ನ ಗಾಯಗೊಂಡು ಸರಣಿಯಿಂದ ಹೊರಗುಳಿದಿದ್ದರು.

ಉತ್ತರ ಪ್ರದೇಶ ಮೂಲದ ಎಡಗೈ ಸ್ಪಿನ್ನರ್ ಸೌರಭ್ ಕುಮಾರ್, ರವೀಂದ್ರ ಜಡೇಜಾ ಅನುಪಸ್ಥಿತಿಯಲ್ಲಿ ಟಂ ಇಂಡಿಯಾಗೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ. ಸೌರಭ್ ಕುಮಾರ್, ಕಳೆದ ರಣಜಿ ಟ್ರೋಫಿ ಟೂರ್ನಿಯಲ್ಲಿ ಹಾಗೂ ಇದೀಗ ಬಾಂಗ್ಲಾದೇಶ 'ಎ' ತಂಡದ ವಿರುದ್ದ ಮಿಂಚಿನ ಬೌಲಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಇನ್ನು ಬ್ಯಾಟಿಂಗ್‌ನಲ್ಲೂ ಕೆಳ ಕ್ರಮಾಂಕದಲ್ಲಿ ಉತ್ತಮ ರನ್ ಕಾಣಿಕೆ ನೀಡುವ ಸಾಮರ್ಥ್ಯವನ್ನು ಸೌರಭ್ ಕುಮಾರ್ ಹೊಂದಿದ್ದಾರೆ.

Ind vs Ban: ಟೀಂ ಇಂಡಿಯಾ ಎದುರಿನ ಟೆಸ್ಟ್ ಸರಣಿಗೆ 17 ಆಟಗಾರರನ್ನೊಳಗೊಂಡ ಬಲಿಷ್ಠ ಬಾಂಗ್ಲಾದೇಶ ತಂಡ ಪ್ರಕಟ..!

ಇನ್ನು ಬಾಂಗ್ಲಾದೇಶ ಎದುರಿನ ಟೆಸ್ಟ್ ಸರಣಿಗೆ ಈಗಾಗಲೇ ತಂಡದಲ್ಲಿ ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ಅವರಂತಹ ವೇಗದ ಬೌಲರ್‌ಗಳಿದ್ದು, ಅವರ ಜತೆಗೆ ಡೆಲ್ಲಿ ಮೂಲದ ವೇಗಿ ನವದೀಪ್ ಸೈನಿ ಕೂಡಾ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ಸಾಧ್ಯತೆಯಿದೆ. ಇನ್ನು ಬಾಂಗ್ಲಾದೇಶ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಬೆರಳಿನ ಗಾಯಕ್ಕೆ ಒಳಗಾಗಿರುವ ರೋಹಿತ್ ಶರ್ಮಾ ಕೂಡಾ, ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎನಿಸಿಕೊಂಡಿದೆ.

ಟೀಂ ಇಂಡಿಯಾ ಪಾಲಿಗೆ ಮಹತ್ವದ ಸರಣಿ: ಬಾಂಗ್ಲಾದೇಶ ಪ್ರವಾಸದಲ್ಲಿ ಟೀಂ ಇಂಡಿಯಾ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದ್ದು, ಒಂದು ವೇಳೆ ಭಾರತ ಈ ಸರಣಿಯನ್ನು 2-0 ಅಂತರದಲ್ಲಿ ಜಯಿಸಿದರೆ, ಹಾಗೂ ಆಸ್ಟ್ರೇಲಿಯಾ ಎದುರು ತವರಿನಲ್ಲಿ ನಡೆಯಲಿರುವ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಂದಕ್ಕಿಂತ ಹೆಚ್ಚು ಪಂದ್ಯವನ್ನು ಸೋಲದೇ ಹೋದರೆ ಟೀಂ ಇಂಡಿಯಾ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಅಗ್ರ 2ರೊಳಗೆ ಸ್ಥಾನ ಪಡೆಯಲಿದೆ.

click me!