
ಢಾಕಾ(ಡಿ.08): ಸದ್ಯ ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದ್ದು, ಇದಾಗುತ್ತಿದ್ದಂತೆಯೇ ಡಿಸೆಂಬರ್ 14ರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದ್ದು, ಈ ಸರಣಿಗೆ 17 ಆಟಗಾರರನ್ನೊಳಗೊಂಡ ಬಲಿಷ್ಠ ಬಾಂಗ್ಲಾದೇಶ ಕ್ರಿಕೆಟ್ ತಂಡ ಪ್ರಕಟವಾಗಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಪ್ರಕಟಿಸಿದ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಮುಷ್ಫಿಕುರ್ ರಹೀಂ, ಯಾಸಿರ್ ಅಲಿ, ಹಾಗೂ ಟಸ್ಕಿನ್ ಅಹಮ್ಮದ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಝಾಕೀರ್ ಹಸನ್ ಇದೇ ಮೊದಲ ಬಾರಿಗೆ ಬಾಂಗ್ಲಾದೇಶ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಝಾಕೀರ್ ಹಸನ್ ಆಯ್ಕೆಯನ್ನು ಸಮರ್ಥಿಸಿಕೊಂಡಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿ ಮುಖ್ಯಸ್ಥ ಮಿನಾಜುಲ್ ಅಬೆದಿನ್, "ಝಾಕೀರ್ ಪ್ರತಿಭಾನ್ವಿತ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದು, ಕಳೆದ ಐದು ವರ್ಷಗಳಿಂದಲೂ ಅವರು ನಮ್ಮ ನಿಗಾದಲ್ಲಿದ್ದರು" ಎಂದು ಹೇಳಿದ್ದಾರೆ. ಅವರು ಹೈ ಫರ್ಫಾಮೆನ್ಸ್ ಘಟಕದಲ್ಲಿದ್ದರು. ಈ ವರ್ಷದಲ್ಲಿ ನಡೆದ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅವರು ಕಳೆದ ವಾರ ನಡೆದ ಭಾರತ 'ಎ' ವಿರುದ್ದ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಇನಿಂಗ್ಸ್ ಆಡಿದ್ದರು ಎಂದು ಝಾಕೀರ್ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇನ್ನು ಕಳೆದ ಜೂನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ತಂಡದಿಂದ ಹೊರಗುಳಿದಿದ್ದ ಅನುಭವಿ ಬ್ಯಾಟರ್ ಮುಷ್ಫಿಕುರ್ ರಹೀಂ, ಯಾಸಿರ್ ಅಲಿ ಹಾಗೂ ವೇಗಿ ಟಸ್ಕಿನ್ ಅಹಮದ್ ಕೂಡಾ ತಂಡ ಕೂಡಿಕೊಂಡಿದ್ದಾರೆ. ಮುಷ್ಫಿಕರ್ ಆ ಸಂದರ್ಭದಲ್ಲಿ ಹಜ್ ಯಾತ್ರೆ ಕೈಗೊಂಡಿದ್ದರು. ಇನ್ನು ಟಸ್ಕಿನ್ ಅಹಮ್ಮದ್ ಹಾಗೂ ಯಾಸಿರ್ ಅಲಿ ಫಿಟ್ನೆಸ್ ಸಮಸ್ಯೆಯಿಂದಾಗಿ ವೆಸ್ಟ್ ಇಂಡೀಸ್ ವಿರುದ್ದದ ಸರಣಿಯಿಂದ ಹೊರಗುಳಿದಿದ್ದರು.
Ind vs Ban ಬಾಂಗ್ಲಾದೇಶ ಎದುರಿನ ಸರಣಿಗೆ ರೋಹಿತ್ ಶರ್ಮಾ ಅನುಮಾನ, ಈ ಆಟಗಾರನಿಗೆ ಸ್ಥಾನ..?
ತೊಡೆಸಂದು ನೋವಿನ ಸಮಸ್ಯೆಯಿಂದ ಭಾರತ ಎದುರಿನ ಏಕದಿನ ಸರಣಿಯಿಂದ ಹೊರಬಿದ್ದಿರುವ ತಮೀಮ್ ಇಕ್ಬಾಲ್ ಇನ್ನೂ ಸಂಪೂರ್ಣ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ, ಭಾರತ ಎದುರಿನ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇನ್ನು ಡಿಸೆಂಬರ್ 22ರಿಂದ ಢಾಕಾದಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೂ ತಮೀಮ್ ಇಕ್ಬಾಲ್ ಬಾಂಗ್ಲಾದೇಶ ತಂಡ ಕೂಡಿಕೊಳ್ಳುವುದು ಅನುಮಾನ ಎನಿಸಿದೆ. ಇನ್ನುಳಿದಂತೆ ತಾರಾ ಆಟಗಾರರಾದ ಮೊಸದೆಕ್ ಹೊಸೈನ್ ಹಾಗೂ ಮುಸ್ತಾಫಿಜುರ್ ರೆಹಮಾನ್, ಬಾಂಗ್ಲಾದೇಶ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.
ಮೊದಲ ಟೆಸ್ಟ್ ಪಂದ್ಯಕ್ಕೆ ಬಾಂಗ್ಲಾದೇಶ ತಂಡ:
ಮೊಹಮದುಲ್ಲಾ ಹಸನ್ ಜಾಯ್, ನಜ್ಮುಲ್ ಹಸನ್ ಶಾಂಟೋ, ಮೊಮಿನುಲ್ ಹಕ್, ಯಾಸಿರ್ ಅಲಿ ಚೌಧರಿ, ಮುಷ್ಫಿಕುರ್ ರಹೀಂ, ಶಕೀಬ್ ಅಲ್ ಹಸನ್(ನಾಯಕ), ಲಿಟನ್ ದಾಸ್, ನೂರುಲ್ ಹಸನ್, ಮೆಹದಿ ಹಸನ್ ಮಿರಜ್, ತೈಜುಲ್ ಇಸ್ಲಾಂ, ಟಸ್ಕಿನ್ ಅಹಮ್ಮದ್, ಸಯ್ಯದ್ ಖಾಲಿದ್ ಅಹಮ್ಮದ್, ಎಬೊದತ್ ಹೊಸೈನ್, ಶೌರಿಫುಲ್ ಇಸ್ಲಾಂ, ಝಾಕೀರ್ ಹಸನ್, ರೆಜೌರ್ ರೆಹಮಾನ್ ರಾಜಾ, ಅನ್ಮುಲ್ ಹಕ್ ಬಿಜೈ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.