
ಚಿತ್ತಗಾಂಗ್(ಡಿ.16): ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ಬಿಗಿಹಿಡಿತ ಮತ್ತಷ್ಟು ಬಲವಾಗಿದೆ. ನಾಯಕ ಕೆ ಎಲ್ ರಾಹುಲ್ ಎರಡನೇ ಇನಿಂಗ್ಸ್‌ನಲ್ಲಿಯೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಮೂರನೇ ದಿನದಾಟದ ಚಹಾ ವಿರಾಮದ ವೇಳೆಗೆ ಟೀಂ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು 140 ರನ್ ಬಾರಿಸಿದ್ದು, ಒಟ್ಟಾರೆ 394 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ.
ಮೊದಲ ಇನಿಂಗ್ಸ್‌ನಲ್ಲಿ 254 ರನ್‌ಗಳ ಬೃಹತ್ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ, ಎಚ್ಚರಿಕೆಯ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಕೆ ಎಲ್ ರಾಹುಲ್ ಹಾಗೂ ಶುಭ್‌ಮನ್ ಗಿಲ್ 70 ರನ್‌ಗಳ ಜತೆಯಾಟ ಒದಗಿಸಿಕೊಟ್ಟರು. ನಾಯಕ ಕೆ ಎಲ್ ರಾಹುಲ್ 63 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 23 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ತಮಗೆ ಸಿಕ್ಕ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ರಾಹುಲ್ ಮತ್ತೊಮ್ಮೆ ವಿಫಲವಾದರು. ಮೊದಲ ಇನಿಂಗ್ಸ್‌ನಲ್ಲಿ 22 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದ ಕೆ ಎಲ್ ರಾಹುಲ್, ಎರಡನೇ ಇನಿಂಗ್ಸ್‌ನಲ್ಲಿ 23 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಶುಭ್‌ಮನ್ ಗಿಲ್ ಆಕರ್ಷಕ ಫಿಫ್ಟಿ: ಇನ್ನು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಆರಂಭಿಕನಾಗಿ ತಂಡದಲ್ಲಿ ಸ್ಥಾನ ಪಡೆದ ಪ್ರತಿಭಾನ್ವಿತ ಬ್ಯಾಟರ್ ಶುಭ್‌ಮನ್ ಗಿಲ್, ಎರಡನೇ ಇನಿಂಗ್ಸ್‌ನಲ್ಲಿ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಕೇವಲ 20 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದ ಶುಭ್‌ಮನ್ ಗಿಲ್, ಎರಡನೇ ಇನಿಂಗ್ಸ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಗಿಲ್ 84 ಎಸೆತಗಳನ್ನು ಎದುರಿಸಿ ವೃತ್ತಿಜೀವನದ 5ನೇ ಅರ್ಧಶತಕ ಬಾರಿಸಿ ಸಂಭ್ರಮಿಸಿದರು. ಇದೀಗ ಶುಭ್‌ಮನ್ ಗಿಲ್ ಶತಕದತ್ತ ದಾಪುಗಾಲಿಡುತ್ತಿದ್ದಾರೆ. ಸದ್ಯ ಶುಭ್‌ಮನ್ ಗಿಲ್ 120 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 80 ರನ್ ಬಾರಿಸಿದ್ದಾರೆ.
Ind vs Ban: ಟೀಂ ಇಂಡಿಯಾ ಬಿಗಿ ಹಿಡಿತದಲ್ಲಿ ಬಾಂಗ್ಲಾದೇಶ
ಇನ್ನು ಶುಭ್‌ಮನ್ ಗಿಲ್‌ಗೆ ಅತ್ಯುತ್ತಮ ಸಾಥ್ ನೀಡಿರುವ ಚೇತೇಶ್ವರ್ ಪೂಜಾರ 55 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 33 ರನ್ ಬಾರಿಸಿದ್ದಾರೆ. ಎರಡನೇ ವಿಕೆಟ್‌ಗೆ ಪೂಜಾರ ಹಾಗೂ ಗಿಲ್ ಜೋಡಿ 99 ಎಸೆತಗಳನ್ನು ಎದುರಿಸಿ ಮುರಿಯದ 70 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.