ಅಹಮದಾಬಾದ್ ಟೆಸ್ಟ್‌ನಲ್ಲಿ ಕಾಂಗರೂ ಪಡೆಗೆ ಟೀಂ ಇಂಡಿಯಾ ತಿರುಗೇಟು
ಆಕರ್ಷಕ ಶತಕ ಸಿಡಿಸಿ ಮಿಂಚಿದ ಮಾಜಿ ನಾಯಕ ವಿರಾಟ್ ಕೊಹ್ಲಿ
ಚಹಾ ವಿರಾಮದ ವೇಳೆಗ ಕೇವಲ 8 ರನ್‌ಗಳ ಹಿನ್ನಡೆಯಲ್ಲಿರುವ ಟೀಂ ಇಂಡಿಯಾ
ಅಹಮದಾಬಾದ್(ಮಾ.12): ವಿರಾಟ್ ಕೊಹ್ಲಿ ಬಾರಿಸಿದ ಅಜೇಯ ಶತಕ(135) ಹಾಗೂ ಅಕ್ಷರ್ ಪಟೇಲ್(38*) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ, ಅಹಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ನಾಲ್ಕನೇ ದಿನದಾಟದ ಚಹಾ ವಿರಾಮದ ವೇಳೆಗೆ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 472 ರನ್ ಬಾರಿಸಿದ್ದು, ಕೇವಲ 8 ರನ್ ಹಿನ್ನಡೆಯಲ್ಲಿದೆ. ಇದೀಗ ಎಲ್ಲರ ಚಿತ್ತ ಕೊನೆಯ ಸೆಷನ್‌ನತ್ತ ನೆಟ್ಟಿದೆ.
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಕೊನೆಯ ಟೆಸ್ಟ್ ಪಂದ್ಯದಲ್ಲಿ 289 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ನಾಲ್ಕನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ, ತನ್ನ ಖಾತೆಗೆ 20 ರನ್ ಸೇರಿಸುವಷ್ಟರಲ್ಲಿ ಆಲ್ರೌಂಡರ್ ಜಡೇಜಾ ವಿಕೆಟ್ ಕಳೆದುಕೊಂಡಿತು. ನಾಲ್ಕನೇ ವಿಕೆಟ್‌ಗೆ ರವೀಂದ್ರ ಜಡೇಜಾ ಹಾಗೂ ವಿರಾಟ್ ಕೊಹ್ಲಿ ಜೋಡಿ 64 ರನ್‌ಗಳ ಜತೆಯಾಟವಾಡಿತು. ಜಡೇಜಾ 28 ರನ್ ಬಾರಿಸಿ ಟೋಡ್ ಮರ್ಫಿಗೆ ವಿಕೆಟ್ ಒಪ್ಪಿಸಿದರು.
ಇನ್ನು ಇದಾದ ಬಳಿಕ 5ನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ಕೆ ಎಸ್ ಭರತ್ 180 ಎಸೆತಗಳನ್ನು ಎದುರಿಸಿ 84 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 390ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. 88 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 44 ರನ್ ಬಾರಿಸಿ ಚೊಚ್ಚಲ ಅರ್ಧಶತಕದ ಕನವರಿಕೆಯಲ್ಲಿದ್ದ ಭರತ್‌ಗೆ ನೇಥನ್ ಲಯನ್ ಶಾಕ್ ನೀಡಿದರು. ನೇಥನ್ ಲಯನ್ ಬೌಲಿಂಗ್‌ನಲ್ಲಿ ರಕ್ಷಣಾತ್ಮಕ ಆಡುವ ಯತ್ನದಲ್ಲಿ ಪೀಟರ್ ಹ್ಯಾಂಡ್ಸ್‌ಕಂಬ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
India continue to power on after Kohli’s 28th Test ton. | | 📝 https://t.co/VJoLfVSeIF pic.twitter.com/FCZ95iQunl
— ICC (@ICC)ವಿರಾಟ್ ಕೊಹ್ಲಿ ಆಕರ್ಷಕ ಶತಕ: ಆಸ್ಟ್ರೇಲಿಯಾ ಎದುರಿನ ಮೊದಲ 3 ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ವಿರಾಟ್ ಕೊಹ್ಲಿ, ಇದೀಗ ಬರೋಬ್ಬರಿ 1205 ದಿನಗಳ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಲು ಯಶಸ್ವಿಯಾದರು. 241 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂದಹಾಗೆ ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಬಾರಿಸಿದ 28ನೇ ಹಾಗೂ ಒಟ್ಟಾರೆ 75ನೇ ಶತಕವೆನಿಸಿಕೊಂಡಿತು.
ಅಹಮದಾಬಾದ್‌ನಲ್ಲಿ ಕೊಹ್ಲಿ ಸಿಂಹ ಘರ್ಜನೆ, ಕೊನೆಗೂ ಟೆಸ್ಟ್‌ನಲ್ಲೂ ಬಂತು ವಿರಾಟ್ ಶತಕ..!
ವಿರಾಟ್ ಕೊಹ್ಲಿ, 2019ರ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ಎದುರು ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಕೊನೆಯ ಬಾರಿಗೆ ಶತಕ ಸಿಡಿಸಿದ್ದರು. ಇದಾಗಿ ಎರಡೂವರೆ ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಲು ವಿಫಲವಾಗಿದ್ದರು. ಆದರೆ ಇದೀಗ 2022ರ ಸೆಪ್ಟೆಂಬರ್‌ನಿಂದೀಚೆಗೆ ಕಳೆದ 6 ತಿಂಗಳಲ್ಲಿ ಮೂರು ಮಾದರಿಯ ಕ್ರಿಕೆಟ್‌ನಲ್ಲಿ 5 ಅಂತಾರಾಷ್ಟ್ರೀಯ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ, ಹಳೆಯ ಲಯಕ್ಕೆ ಬರುವಲ್ಲಿ ಯಶಸ್ವಿಯಾಗಿದ್ದಾರೆ.
6ನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ಅಕ್ಷರ್ ಪಟೇಲ್ 128 ಎಸೆತಗಳನ್ನು ಎದುರಿಸಿ ಮುರಿಯದ 79 ರನ್‌ಗಳ ಜತೆಯಾಟ ನಿಭಾಯಿಸಿದೆ. ವಿರಾಟ್ ಕೊಹ್ಲಿ 291 ಎಸೆತಗಳನ್ನು ಎದುರಿಸಿ 10 ಬೌಂಡರಿ ಸಹಿತ ಅಜೇಯ 135 ರನ್ ಬಾರಿಸಿದರೆ, ಮತ್ತೊಂದು ತುದಿಯಲ್ಲಿ ಅಕ್ಷರ್ ಪಟೇಲ್ 75 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 38 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.