IND vs AUS ಅಂತಿಮ ಪಂದ್ಯದಲ್ಲೂ ಆಸ್ಟ್ರೇಲಿಯಾ ಶಾಕ್, ಟಿ20 ಸರಣಿ ವಶಪಡಿಸಿದ ಭಾರತ

By Suvarna NewsFirst Published Sep 25, 2022, 10:42 PM IST
Highlights

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿ ಅಂತ್ಯಗೊಂಡಿದೆ. ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ ಸರಣಿ ವಶಪಡಿಸಿಕೊಂಡಿದೆ. 

ಹೈದರಾಬಾದ್(ಸೆ.25):  ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾ ಭರ್ಜರಿ ತಾಲೀಮು ನಡೆಸಿದೆ. ಆಸ್ಟ್ರೇಲಿಯಾ ವಿರುದ್ದದ 3 ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ. 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ 6 ವಿಕೆಟ್ ಗೆಲುವು ದಾಖಲಿಸಿತು. 187 ರನ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 19.5 ಓವರ್‌ಗಳಲ್ಲಿ ಪಂದ್ಯ ಮುಗಿಸಿತು. ಆರಂಭಿಕ ಪಂದ್ಯ ಸೋಲಿನಿಂದ ಆತಂಕಕ್ಕೊಳಗಾಗಿದ್ದ ಅಭಿಮಾನಿಗಳಿಗೆ ಸರಣಿ ಗೆಲುವಿನ ಉಡುಗೊರೆ ನೀಡಿತು. 187 ರನ್ ಟಾರ್ಗೆಟ್, ಗೆಲ್ಲಲೇಬೇಕಾದ ಒತ್ತಡ, ಫೈನಲ್ ಸ್ವರೂಪ ಪಡೆದಿದ್ದ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾಗೆ ಚೇಸಿಂಗ್ ಆರಂಭದಿಂದಲ್ಲೇ ಸವಾಲಾಗಿ ಪರಿಣಮಿಸಿತು. ಕಾರಣ ಕೆಎಲ್ ರಾಹುಲ್ 1 ರನ್ ಸಿಡಿಸಿ ಔಟಾದರು. ಇತ್ತ ನಾಯಕ ರೋಹಿತ್ ಶರ್ಮಾ ಕೂಡ ಅಬ್ಬರಿಸಲಿಲ್ಲ. ರೋಹಿತ್ ಶರ್ಮಾ 17 ರನ್ ಸಿಡಿಸಿ ನಿರ್ಗಮಿಸಿದರು. 30 ರನ್‌ಗಳಿಗೆ ಭಾರತ ಪ್ರಮುಖ 2 ವಿಕೆಟ್ ಕಳೆದುಕೊಂಡಿತು.

ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಜೊತೆಯಾಟ ಟಾರ್ಗೆಟ್ ಚೇಸ್‌ಗ ನೆರವಾಯಿತು. ಕೊಹ್ಲಿ ಹಾಗೂ ಯಾದವ್ ಸ್ಫೋಟಕ ಬ್ಯಾಟಿಂಗ್ ಮೂಲಕ ಆಸ್ಟ್ರೇಲಿಯಾ ತಲೆನೋವು ಹಚ್ಚಿಸಿದರು. ಸೂರ್ಯಕುಮಾರ್ ಯಾದವ್ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದರು. ಸೂರ್ಯಕುಮಾರ್ ಯಾದವ್ 36 ಎಸೆತದಲ್ಲಿ 5 ಬೌಂಡರಿ ಹಾಗೂ  5 ಸಿಕ್ಸರ್ ಮೂಲಕ 69 ರನ್ ಸಿಡಿಸಿ ಔಟಾದರು. ಈ ಮೂಲಕ 104ರನ್‌ಗಳ ಜೊತೆಯಾಟಕ್ಕೆ ಬ್ರೇಕ್ ಬಿದ್ದಿತು.

ವಿರಾಟ್ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಹಾರ್ದಿಕ್ ಪಾಂಡ್ಯ ಜೊತೆ ಸೇರಿ ಕೊಹ್ಲಿ ಎಚ್ಚರಿಕೆಂದ ಬ್ಯಾಟ್ ಬೀಸಿದರು.ಕೊಹ್ಲಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇದರೊಂದಿಗೆ ಟೀಂ ಇಂಡಿಯಾ ಗೆಲುವಿಗೆ ಅಂತಿಮ 18 ಎಸೆತದಲ್ಲಿ 32 ರನ್ ಅವಶ್ಯಕತೆ ಇತ್ತು. 18ನೇ ಓವರ್‌ನಲ್ಲಿ ಭಾರತ 11 ರನ್ ಸಿಡಿಸಿತು. 19ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಸಿಕ್ಸರ್ ನೆರವಿನಿಂದ ಒಟ್ಟು 10 ರನ್ ಸಿಡಿಸಿತು. ಹೀಗಾಗಿ ಅಂತಿಮ 6 ಎಸೆತದಲ್ಲಿ ಭಾರತದ ಗೆಲುವಿಗೆ 11 ರನ್ ಅವಶ್ಯಕತೆ ಇತ್ತು. 

ಅಂತಿಮ ಓವರ್‌ನ ಮೊದಲ ಎಸೆತದಲ್ಲೇ ಕೊಹ್ಲಿ ಸಿಕ್ಸರ್ ಸಿಡಿಸಿದರು. ಆದರೆ ಮರು ಎಸೆತದಲ್ಲೇ ಕೊಹ್ಲಿ ವಿಕೆಟ್ ಪತನಗೊಂಡಿತು. ಇದು ಟೀಂ ಇಂಡಿಯಾದಲ್ಲಿ ಆತಂಕ ಸೃಷ್ಟಿಸಿತು. ಆದರೆ ಹಾರ್ದಿಕ್ ಪಾಂಡ್ಯ ಬೌಂಡರಿ ಸಿಡಿಸೋ ಮೂಲಕ ಪಂದ್ಯ ಫಿನೀಶ್ ಮಾಡಿದರು. ಭಾರತ 19.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಭಾರತ 6 ವಿಕೆಟ್ ಗೆಲುವು ದಾಖಲಿಸಿತು. ಇಷ್ಟೇ ಅಲ್ಲ 2-1 ಅಂತರದಿಂದ ಸರಣಿ ಗೆದ್ದುಕೊಂಡಿತು. 

ಆಸ್ಟ್ರೇಲಿಯಾ ಇನ್ನಿಂಗ್ಸ್
ಆಸ್ಟ್ರೇಲಿಯಾ ನಿರ್ಣಾಯಕ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡಿದೆ. ಟೀಂ ಇಂಡಿಯಾ ಸ್ಪಿನ್ ದಾಳಿ ಮೂಲಕ ಆಸ್ಟ್ರೇಲಿಯಾ ತಂಡವನ್ನು ಕಟ್ಟಿಹಾಕಲು ಪ್ರಯತ್ನ ಮಾಡಿತು. ಆರಂಭಿಕ ಹಂತದಲ್ಲಿ ಟೀಂ ಇಂಡಿಯಾ ಪ್ಲಾನ್ ವರ್ಕೌಟ್ ಆಯಿತು. ಕ್ಯಾಮರೂನ್ ಗ್ರೀನ್ ಹೋರಾಟ ಮುಂದುವರಿಸಿದರೆ, ನಾಯಕ ಆ್ಯರೋನ್ ಫಿಂಚ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರಿಸಲಿಲ್ಲ. ಗ್ರೀನ್ 52 ರನ್ ಕಾಣಿಕೆ ನೀಡಿದರು. ಜೋಶ್ ಇಂಗ್ಲಿಸ್ 24 ರನ್ ಸಿಡಿಸಿ ಔಟಾದರು. ಆದರೆ ಅಂತಿಮ ಹಂತದಲ್ಲಿ ಟಿಮ್ ಡೇವಿಡ್ ಹಾಗೂ ಡೇನಿಯ್ ಸ್ಯಾಮ್ಸ್ ಜೊತೆಯಾಟ ಪಂದ್ಯದ ಗತಿಯನ್ನು ಬದಲಿಸಿತು. ಡೇವಿಡ್ 27 ಎಸೆತದಲ್ಲಿ 54 ರನ್ ಸಿಡಿಸಿದರು. ಡೇನಿಯಲ್ ಸ್ಯಾಮ್ಸ್ ಅಜೇಯ 28 ರನ್ ಸಿಡಿಸಿದರು. ಈ ಮೂಲಕ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 186 ರನ್ ಸಿಡಿಸಿತು.

click me!