ಬೃಹತ್ ಮೊತ್ತಕ್ಕೆ ಭಾರತ ಕಂಗಾಲು, 3ನೇ ಏಕದಿನಲ್ಲಿ ಆಸ್ಟ್ರೇಲಿಯಾಗೆ 66 ರನ್ ಗೆಲುವು!

By Suvarna NewsFirst Published Sep 27, 2023, 9:37 PM IST
Highlights

ಬೃಹತ್ ಟಾರ್ಗೆಟ್, ಗ್ಲೆನ್ ಮ್ಯಾಕ್ಸ್‌ವೆಲ್ ಸ್ಪಿನ್ ದಾಳಿಗೆ ಟೀಂ ಇಂಡಿಯಾ ಕಂಗಾಲಾಗಿದೆ. 353 ರನ್ ಟಾರ್ಗೆಟ್ ಚೇಸಿಂಗ್ ಯಶಸ್ವಿಯಾಗಲಿಲ್ಲ. ಭಾರತ 286 ರನ್‌ ಸಿಡಿಸಿ ಸೊಲೊಪ್ಪಿಕೊಂಡಿತು. ಏಕದಿನ ಸರಣಿ ಕ್ಲೀನ್ ಸ್ವೀಪ್ ಕನಸಿಗೆ ಆಸ್ಟ್ರೇಲಿಯಾ ಬ್ರೇಕ್ ಹಾಕಿದೆ

ರಾಜ್‌ಕೋಟ್(ಸೆ.27)  ಆಸ್ಟ್ರೇಲಿಯಾ ವಿರುದ್ದದ 3ನೇ ಹಾಗೂ ಅಂತಿಮ ಪಂದ್ಯ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡುವ ಭಾರತದ ಕನಸು ಈಡೇರಲಿಲ್ಲ. ಆರಂಭಿಕ 2 ಪಂದ್ಯದಲ್ಲಿ ಮುಗ್ಗರಿಸಿದ್ದ ಆಸ್ಟ್ರೇಲಿಯಾ ಅಂತಿಮ ಪಂದ್ಯದಲ್ಲಿ ಅಬ್ಬರಿಸಿದೆ. 353 ರನ್ ಟಾರ್ಗೆಟ್ ನೀಡಿ ಟೀಂ ಇಂಡಿಯಾವನ್ನು 286 ರನ್‌ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. 3ನೇ ಏಕದಿನದಲ್ಲಿ ಆಸ್ಟ್ರೇಲಿಯಾ ರನ್ 66 ಗೆಲುವು ಕಂಡಿದೆ. ಆದರೆ ಸರಣಿ 2-1 ಅಂತರದಲ್ಲಿ ಭಾರತದ ಕೈವಶವಾಗಿದೆ.

ಮಿಚೆಲ್ ಮಾರ್ಶ್, ಸ್ಟೀವ್ ಸ್ಮಿತ್, ಮಾನರ್ಸ್ ಲಬುಶೆನ್, ಡೇವಿಡ್ ವಾರ್ನರ್ ಸ್ಪೋಟಕ ಬ್ಯಾಟಿಂಗ್‌ನಿಂದ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 352 ರನ್ ಸಿಡಿಸಿತ್ತು. ಬೃಹತ್ ಗುರಿ ಪಡೆದ ಟೀಂ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಉತ್ತಮ ಆರಂಭ ನೀಡಿದರು. ಆದರೆ ಆರಂಭಿಕನಾಗಿ ಕಣಕ್ಕಿಳಿದ ವಾಶಿಂಗ್ಟನ್ ಸುಂದರ್ ಅಬ್ಬರಿಸಲಿಲ್ಲ. ಹೀಗಾಗಿ ಆರಂಭಿಕರ ಜೋಡಿ 74 ರನ್ ಜೊತೆಯಾಟ ನೀಡಿ ಬೇರ್ಪಟ್ಟಿತು.

ವಾಶಿಂಗ್ಟನ್ ಸುಂದರ್ 18 ರನ್ ಸಿಡಿಸಿ ನಿರ್ಗಮಿಸಿದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಜೊತೆಯಾಟದ ಮೂಲಕ ಟೀಂ ಇಂಡಿಯಾ ರನ್ ಚೇಸ್ ಆತಂಕ ದೂರ ಮಾಡಿತು. ಆದರೆ ರೋಹಿತ್ ಶರ್ಮಾ 57 ಎಸೆತದಲ್ಲಿ 81 ರನ್ ಸಿಡಿಸಿ ಔಟಾದರು. 

ವಿರಾಟ್ ಕೊಹ್ಲಿ ದಿಟ್ಟ ಹೋರಾಟ ನೀಡಿ ಹಾಫ್ ಸೆಂಚುರಿ ಪೂರೈಸಿದರು. ಆದರೆ ಕೊಹ್ಲಿ ಆಟ 56 ರನ್‌ಗೆ ಅಂತ್ಯವಾಯಿತು. ಇತ್ತ ಕೆಎಲ್ ರಾಹುಲ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. 26 ರನ್ ಸಿಡಿಸಿ ನಿರ್ಗಮಿಸಿದರು. ಶ್ರೇಯಸ್ ಅಯ್ಯರ್ ಅಬ್ಬರ ಆರಂಭಗೊಳ್ಳುತ್ತಿದ್ದಂತೆ ವಿಕೆಟ್ ಪತನಗೊಂಡಿತು. ಅಯ್ಯರ್ 43 ಎಸೆತದಲ್ಲಿ 48 ರನ್ ಸಿಡಿಸಿ ಔಟಾದರು.

ಸೂರ್ಯಕುಮಾರ್ ಕೇವಲ 8ರನ್ ಸಿಡಿಸಿ ಔಟಾದರು. ಸೂರ್ಯಕುಮಾರ್ ವಿಕೆಟ್ ಪತನದ ಬೆನ್ನಲ್ಲೇ ಟೀಂ ಇಂಡಿಯಾ ಸೋಲಿನ ಸುಳಿಗೆ ಸಿಲುಕಿತು. ರವೀಂದ್ರ ಜಡೇಜಾ  ನಡೆಸಿದ ಪ್ರಯತ್ನ ಕೈಗೂಡಲಿಲ್ಲ. ಇತ್ತ ಕುಲ್ದೀಪ್ ಯಾದವ್ 2 ರನ್ ಸಿಡಿಸಿ ನಿರ್ಗಮಿಸಿದರು. ರವೀಂದ್ರ ಜಡೇಜಾ ದಿಟ್ಟ ಹೋರಾಟ ನೀಡಿದರೂ ಗೆಲುವಿನ ದಡ ಸೇರಲಿಲ್ಲ. ರವೀಂದ್ರ ಜಡೇಜಾ 35 ರನ್ ಸಿಡಿಸಿ ಔಟಾದರು. ಈ ಮೂಲಕ ಟೀಂ ಇಂಡಿಯಾ 49.4 ಓವರ್‌ಗಳಲ್ಲಿ 286 ರನ್‌ಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ 66 ರನ್ ಗೆಲುವು ದಾಖಲಿಸಿತು. ಕ್ಲೀನ್ ಸ್ವೀಪ್ ಮುಖಭಂಗ ತಪ್ಪಿಸಿಕೊಂಡಿತು. 

click me!