
ನವದೆಹಲಿ(ಫೆ.26): ಆಸ್ಪ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯವನ್ನು ಕೇವಲ 3 ದಿನಗಳೊಳಗೆ ಜಯಿಸಿ ಬಳಿಕ 6 ದಿನಗಳ ವಿಶ್ರಾಂತಿ ಪಡೆದ ಭಾರತೀಯ ಆಟಗಾರರು ಶನಿವಾರ ಇಂದೋರ್‌ಗೆ ಮರಳಿದ್ದು, ತಂಡ ಕೂಡಿಕೊಂಡಿದ್ದಾರೆ. ಫೆಬ್ರವರಿ 17ಕ್ಕೆ ಆರಂಭಗೊಂಡಿದ್ದ 2ನೇ ಟೆಸ್ಟ್ ಪಂದ್ಯ ಕೇವಲ ಮೂರೇ ದಿನಕ್ಕೆ ಕೊನೆಗೊಂಡಿತ್ತು. ಹೀಗಾಗಿ ಬಿಸಿಸಿಐ ಆಟಗಾರರಿಗೆ 6 ದಿನಗಳ ಕಾಲ ವಿಶ್ರಾಂತಿ ನೀಡಿತ್ತು.
ಕೆಲ ಆಟಗಾರರು ತಮ್ಮ ಮನೆಗಳಿಗೆ ತೆರಳಿದ್ದು, ಇನ್ನೂ ಕೆಲವರು ಪ್ರವಾಸಕ್ಕೆ ಹೋಗಿದ್ದರು. ಸದ್ಯ ಬಹುತೇಕ ಎಲ್ಲರೂ ಇಂದೋರ್‌ಗೆ ಆಗಮಿಸಿದ್ದಾರೆ. ಅವರು ಭಾನುವಾರ ಅಭ್ಯಾಸ ಆರಂಭಿಸಲಿದ್ದಾರೆ. ಇದೇ ವೇಳೆ ಆಸೀಸ್ ಆಟಗಾರರು ದೆಹಲಿಯಲ್ಲೇ ಅಭ್ಯಾಸ ನಡೆಸುತ್ತಿದ್ದು, ಭಾನುವಾರ ಇಂದೋರ್‌ಗೆ ಆಗಮಿಸುವ ನಿರೀಕ್ಷೆಯಿದೆ. 3ನೇ ಟೆಸ್ಟ್ ಪಂದ್ಯ ಮಾರ್ಚ್ 1ಕ್ಕೆ ಆರಂಭವಾಗಲಿದೆ.
4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸುವ ಮೂಲಕ 2-0 ಮುನ್ನಡೆ ಕಾಯ್ದುಕೊಂಡಿದೆ. ಮೊದಲೆರಡು ಪಂದ್ಯ ಗೆದ್ದು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಉಳಿಸಿಕೊಳ್ಳುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಇನ್ನು ಮೂರನೇ ಟೆಸ್ಟ್ ಪಂದ್ಯವನ್ನು ಜಯಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆಗಿಟ್ಟಿಸಿಕೊಳ್ಳಲು ಎದುರು ನೋಡುತ್ತಿದೆ.
ನನ್ನ ಕಣ್ಣೀರು ದೇಶ ನೋಡಬಾರದೆಂದ ಹರ್ಮನ್‌ಪ್ರೀತ್ ಕೌರ್‌ಗೆ ತಂದೆಯೇ ಮೊದಲ ಗುರು, ಸೆಹ್ವಾಗ್ ಆರಾಧ್ಯ ದೈವ..!
ಇನ್ನು ಇದಷ್ಟೇ ಅಲ್ಲದೇ, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇಂದೋರ್ ಟೆಸ್ಟ್ ಪಂದ್ಯವನ್ನು ಜಯಿಸಿದರೆ, ಅಧಿಕೃತವಾಗಿ ವಿಶ್ವ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೆ ಲಗ್ಗೆಯಿಡಲಿದೆ.
ಇಂದೋರ್‌ಗಿಂದು ಆಸ್ಟ್ರೇಲಿಯಾ ತಂಡ ಆಗಮನ
ಸತತ 2 ಸೋಲಿನಿಂದ ಕಂಗೆಟ್ಟಿರುವ ಆಸ್ಟ್ರೇಲಿಯಾ ತಂಡ ಭಾನುವಾರ ಇಂದೋರ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಅವರು ಸೋಮವಾರದಿಂದ ಅಭ್ಯಾಸ ಆರಂಭಿಸಲಿದ್ದಾರೆ. 2ನೇ ಟೆಸ್ಟ್ ಮುಕ್ತಾಯಗೊಂಡ ಬಳಿಕ ಆಸ್ಟ್ರೇಲಿಯಾ ಆಟಗಾರರು ದೆಹಲಿಯ ಕ್ರೀಡಾಂಗಣದಲ್ಲೇ ಅಭ್ಯಾಸ ನಿರತರಾಗಿದ್ದಾರೆ. ತಂಡದ ಹಲವು ಆಟಗಾರರು ಈಗಾಗಲೇ ಹಲವು ಕಾರಣಗಳಿಂದಾಗಿ ತವರಿಗೆ ಮರಳಿದ್ದು, ಸ್ಟೀವ್ ಸ್ಮಿತ್ ತಂಡವನ್ನು ಮುನ್ನಡೆಸಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ನಾಲ್ಕನೇ ಟೆಸ್ಟ್‌ಗೆ ಭಾರತದ ಟೆಸ್ಟ್ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (WK), ಇಶಾನ್ ಕಿಶನ್ (wk), ಆರ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಉಮೇಶ್ ಯಾದವ್, ಜೈದೇವ್ ಉನಾದ್ಕತ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.