ಭಾರತದ ದಾಳಿಗೆ ಆಸ್ಟ್ರೇಲಿಯಾ 217 ರನ್‌ಗೆ ಆಲೌಟ್, ಭರ್ಜರಿ ಗೆಲುವಿನೊಂದಿಗೆ ಏಕದಿನ ಸರಣಿ ಕೈವಶ!

By Suvarna NewsFirst Published Sep 24, 2023, 10:07 PM IST
Highlights

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಪ್ರಾಬಲ್ಯ ಸಾಧಿಸಿದೆ. ಬೃಹತ್ ಟಾರ್ಗೆಟ್ ಚೇಸ್ ಮಾಡಲು ಸಾಧ್ಯವಾಗದೇ 217 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಆರಂಭಿಕ 2 ಪಂದ್ಯ ಗೆದ್ದ ಭಾರತ ಸರಣಿ ಕೈವಶ ಮಾಡಿಕೊಂಡಿದೆ. 

ಇಂದೋರ್(ಸೆ.24) ವಿಶ್ವಕಪ್ ಏಕದಿನ ಸರಣಿಗೆ ಭಾರತ ತಂಡದ ಆತ್ಮವಿಶ್ವಾಸ ಹೆಚ್ಚಿದೆ. ವರ್ಲ್ಡ್ ಕಪ್‌ಗೂ ಮುನ್ನ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ಅತ್ಯುತ್ತಮ ಪ್ರದರ್ಶನ ನೀಡಿದೆ. ಇಂದು ನಡೆದ 2ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 217 ರನ್‌ಗೆ ಆಲೌಟ್ ಮಾಡಿದ ಟೀಂ ಇಂಡಿಯಾ 99 ರನ್ ಗೆಲುವು ದಾಖಲಿಸಿದೆ. ಭರ್ಜರಿ ಗೆಲುವಿನೊಂದಿಗೆ ಟೀಂ ಇಂಡಿಯಾ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಏಕದಿನ ಸರಣಿ ಗೆದ್ದುಕೊಂಡಿದೆ. ಭಾರತ 400 ರನ್ ಟಾರ್ಗೆಟ್ ನೀಡಿತ್ತು. ಆದರೆ ಮಳೆಯಿಂದ ಡಿಎಲ್ಎಸ್ ಪ್ರಕಾರ 317 ರನ್ ಟಾರ್ಗೆಟ್ ನೀಡಲಾಗಿತ್ತು. ಈ ಟಾರ್ಗೆಟ್ ಚೇಸಿಂಗ್ ಮಾಡಲು ವಿಫಲವಾದ ಆಸ್ಟ್ರೇಲಿಯಾ ಓವರ್‌ಗೆ 217 ರನ್ ಸಿಡಿಸಿ ಆಲೌಟ್ ಆಯಿತು.

ಟೀಂ ಇಂಡಿಯಾ ನೀಡಿದ 399 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಆಸ್ಟ್ರೇಲಿಯಾ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ಮ್ಯಾಥ್ಯೂ ಶಾರ್ಟ್ ಕೇವಲ 9 ರನ್ ಸಿಡಿಸಿ ಔಟಾದರು. ಇತ್ತ ಸ್ಟೀವ್ ಸ್ಮಿತ್ ಡಕೌಟ್ ಆದರು.  9 ರನ್‌ಗೆ 2 ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾಗೆ ಡೇವಿಡ್ ವಾರ್ನರ್ ಹಾಗೂ ಮಾರ್ನಸ್ ಲಬುಶೇನ್ ಜೊತೆಯಾಟದಿಂದ ಚೇತರಿಸಿಕೊಂಡಿತು. 

ಆಸ್ಟ್ರೇಲಿಯಾ 9 ಓವರ್‌ಗೆ 2 ವಿಕೆಟ್ ಕಳೆದುಕೊಂಡು 52 ರನ್ ಸಿಡಿಸಿದಾಗ ಮಳೆ ವಕ್ಕರಿಸಿತು. ಹೆಚ್ಚು ಹೊತ್ತು ಮಳೆ ಸುರಿದ ಕಾರಣ ಪಂದ್ಯ ವಿಳಂಬಗೊಂಡಿತು. ಹೀಗಾಗಿ ಡಕ್ ವರ್ತ್ ನಿಯಮ ಅನ್ವಯಿಸಲಾಗಿತ್ತು. ಈ ವೇಳೆ ಆಸ್ಟ್ರೇಲಿಯಾಗೆ 33 ಓವರ್‌ನಲ್ಲಿ 317 ರನ್ ಟಾರ್ಗೆಟ್ ನೀಡಲಾಗಿತ್ತು. ಮಳೆ ಬಳಿಕ ಕಣಕ್ಕಿಳಿದ ಡೇವಿಡ್ ವಾರ್ನರ್ ಹಾಗೂ ಲಬುಶೇನ್ ಆಕ್ರಮಣಕಾರಿ ಆಟಕ್ಕೆ ಮುಂದಾದರು.

ಡೇವಿಡ್ ವಾರ್ನರ್ ಅಬ್ಬರ ಆರಂಭಗೊಂಡಿತು. ಇದೇ ವೇಳೆ ಸ್ಟಾರ್ಟರ್ಜಿ ಬದಲಿಸಿದ ಟೀಂ ಇಂಡಿಯಾ ಆರ್ ಅಶ್ವಿನ್ ದಾಳಿ ಆರಂಭಿಸಿತು. ಸ್ಪಿನ್ ಮೋಡಿ ಆರಂಭಗೊಳ್ಳುತ್ತಿದ್ದಂತೆ ಆಸ್ಟ್ರೇಲಿಯಾ ಪತನ ಆರಂಭಗೊಂಡಿತು. ಲಬುಶೇನ್ 27 ರನ್ ಸಿಡಿಸಿ ಔಟಾದರು. ಇತ್ತ ಡೇವಿಡ್ ವಾರ್ನರ್ ಸ್ಪೋಟಕ ಹಾಫ್ ಸೆಂಚುರಿ ಸಿಡಿಸಿದರು. 53 ರನ್ ಸಿಡಿಸಿದ ವಾರ್ನರ್ ಕೂಡ ಅಶ್ವಿನ್ ಸ್ಪಿನ್ ದಾಳಿಗೆ ಔಟಾದರು.

ಜೋಶ್ ಇಂಗ್ಲೀಸ್ ಕೇವಲ 6 ರನ್ ಸಿಡಿಸಿ ನಿರ್ಗಮಿಸಿದರು. ಅಲೆಕ್ಸ್ ಕ್ಯಾರಿ 14 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಕ್ಯಾಮರೂನ್ ಗ್ರೀನ್ 19 ರನ್ ಸಿಡಿಸಿ ಔಟಾದರು. ಆ್ಯಡಮ್ ಜಂಪಾ 5 ರನ್ ಗಳಿಸಿ ಔಟಾದರು. ಆದರೆ ಸೀನ್ ಅಬಾಟ್ ಹಾಗೂ ಜೋಶ್ ಹೇಜಲ್‌ವುಡ್ ಅಂತಿಮ ಹಂತದಲ್ಲಿ ಅಬ್ಬರಿಸಿದರು.  ಇದರ ನಡುವೆ ಕೆಲ ಕ್ಯಾಚ್ ಕೈಚೆಲ್ಲಿದ ಭಾರತ ಗೆಲುವಿನ ಅಂತರ ತಗ್ಗಿಸಿಕೊಂಡಿತು.

ಸಿಕ್ಸರ್ ಮೂಲಕ ಅಬ್ಬರಿಸಿದ ಸೀನ್ ಅಬಾಟ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇತ್ತ ಜೋಶ್ ಹೇಜಲ್‌ವುಡ್ 23 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಸೀನ್ ಅಬಾಟ್ 53 ರನ್ ಸಿಡಿಸಿ ಔಟಾದರು. ಇದರೊಂದಿಗೆ ಆಸ್ಟ್ರೇಲಿಯಾ 28.2 ಓವರ್‌ಗಳಲ್ಲಿ 217ರನ್‌ಗೆ ಆಲೌಟ್ ಆಯಿತು. ಭಾರತ 99 ರನ್ ಗೆಲುವು ದಾಖಲಿಸಿತು. 
 

click me!