'ಟಿ20 ಕ್ರಿಕೆಟ್‌ನಲ್ಲಿ ಬೆನ್ ಸ್ಟೋಕ್ಸ್‌ಗಿಂತ ಹಾರ್ದಿಕ್ ಪಾಂಡ್ಯ ಸಾಕಷ್ಟು ಮುಂದಿದ್ದಾರೆ'

By Naveen KodaseFirst Published Oct 2, 2022, 5:41 PM IST
Highlights

* ಮತ್ತೆ ಮುನ್ನೆಲೆಗೆ ಬಂದ ಹಾರ್ದಿಕ್ ಪಾಂಡ್ಯ-ಬೆನ್ ಸ್ಟೋಕ್ಸ್ ಚರ್ಚೆ
* ಟಿ20 ಕ್ರಿಕೆಟ್‌ನಲ್ಲಿ ಹಾರ್ದಿಕ್ ಪಾಂಡ್ಯ ಬೆಸ್ಟ್ ಎಂದ ಶೇನ್ ವಾಟ್ಸನ್‌
* ಶೇನ್ ವಾಟ್ಸನ್‌, ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಕಂಡ ಅತ್ಯುತ್ತಮ ಆಲ್ರೌಂಡರ್‌ಗಳಲ್ಲೊಬ್ಬರು

ನವದೆಹಲಿ(ಅ.02): ಆಧುನಿಕ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಹಾಗೂ ಭಾರತದ ಹಾರ್ದಿಕ್ ಪಾಂಡ್ಯ, ಈ ಇಬ್ಬರಲ್ಲಿ ಯಾರು ಬೆಸ್ಟ್ ಆಲ್ರೌಂಡರ್ ಎನ್ನುವ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಇದೀಗ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾಟ್ಸನ್‌ ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ಟಿ20 ಕ್ರಿಕೆಟ್‌ನಲ್ಲಿ ಬೆನ್‌ ಸ್ಟೋಕ್ಸ್‌ ಅವರಿಗಿಂತ ಹಾರ್ದಿಕ್ ಪಾಂಡ್ಯ ಸಾಕಷ್ಟು ಮುಂದಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕ್ರಿಕೆಟ್‌ ಜಗತ್ತು ಕಂಡ ಸಾರ್ವಕಾಲಿಕ ದಿಗ್ಗಜ ಆಲ್ರೌಂಡರ್‌ಗಳ ಪೈಕಿ ಒಬ್ಬರೆನಿಸಿಕೊಂಡಿರುವ ಶೇನ್ ವಾಟ್ಸನ್‌, ಸದ್ಯ ಲೆಜೆಂಡ್ಸ್‌ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ತಮ್ಮ ನೆಚ್ಚಿನ ಆಲ್ರೌಂಡರ್‌ ಹೆಸರಿಸಿದ್ದಾರೆ. ಶೇನ್ ವಾಟ್ಸನ್, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪರ ಒಟ್ಟು 207 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 291 ವಿಕೆಟ್‌ ಹಾಗೂ 10,950 ರನ್‌ ಬಾರಿಸಿದ್ದಾರೆ. 

NDTV ಸುದ್ದಿಸಂಸ್ಥೆಯ ಜತೆ ಮಾತನಾಡಿದ ಶೇನ್ ವಾಟ್ಸನ್‌, 'ಸದ್ಯದ ಮಟ್ಟಿಗಂತೂ ಹಾರ್ದಿಕ್ ಪಾಂಡ್ಯ ಅತ್ಯುದ್ಭುತ ಲಯದಲ್ಲಿದ್ದಾರೆ. ಅವರು ಆಡುವುದನ್ನು ನೋಡುವುದೇ ಕಣ್ಣಿಗೆ ಒಂದು ರೀತಿ ಹಬ್ಬದ ಅನುಭವ. ನಾನು ಯಾವಾಗಲೂ ವೇಗದ ಬೌಲಿಂಗ್ ಆಲ್ರೌಂಡರ್‌ ಅನ್ನು ಹೆಚ್ಚು ಇಷ್ಟಪಡುತ್ತೇನೆ. ಅವರು ಪಂದ್ಯದಲ್ಲಿ ತೋರುವ ಇಂಪ್ಯಾಕ್ಟ್‌ ಇದೆಯಲ್ಲ, ಏಕಾಂಗಿಯಾಗಿ ಅವರು ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅದು ಬ್ಯಾಟಿಂಗ್‌ನಲ್ಲಿ ಆಗಿರಬಹುದು ಅಥವಾ ಬೌಲಿಂಗ್‌ನಲ್ಲಿ ಆಗಿರಬಹುದು ಎಂದು ವಾಟ್ಸನ್ ಅಭಿಪ್ರಾಯಪಟ್ಟಿದ್ದಾರೆ.

ಹಾರ್ದಿಕ್ ಪಾಂಡ್ಯ ಹಾಗೂ ಬೆನ್ ಸ್ಟೋಕ್ಸ್‌ ನಡುವಿನ ಹೋಲಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಶೇನ್ ವಾಟ್ಸನ್‌, ಸದ್ಯಕ್ಕಂತೂ ಟಿ20 ಕ್ರಿಕೆಟ್‌ನಲ್ಲಿ ಬೆನ್‌ ಸ್ಟೋಕ್ಸ್‌ಗಿಂತ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸಾಕಷ್ಟು ಮುಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಹಾರ್ದಿಕ್ ಪಾಂಡ್ಯ ಆಡುತ್ತಿರುವುದನ್ನು ನೋಡಿದರೇ ಖುಷಿ ಎನಿಸುತ್ತಿದೆ. ಟಿ20 ಕ್ರಿಕೆಟ್ ಗಮನದಲ್ಲಿಟ್ಟುಕೊಂಡು ಹೇಳುವುದಾದರೇ, ಸದ್ಯದ ಮಟ್ಟಿಗಂತೂ ಬೆನ್‌ ಸ್ಟೋಕ್ಸ್‌ಗಿಂತ ಹಾರ್ದಿಕ್ ಪಾಂಡ್ಯ ಮುಂದಿದ್ದಾರೆ. ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡುವ ರೀತಿ ಹಾಗೂ ಬೌಲಿಂಗ್‌ನಲ್ಲಿ ಸಂದರ್ಭಕ್ಕನುಗುಣವಾಗಿ ತೋರುತ್ತಿರುವ ಪ್ರದರ್ಶನ ಅತ್ಯದ್ಭುತವಾಗಿದೆ ಎಂದು ಶೇನ್ ವಾಟ್ಸನ್ ಅಭಿಪ್ರಾಯಪಟ್ಟಿದ್ದಾರೆ. 

ಇಂಗ್ಲೆಂಡ್‌ ಆಲ್ರೌಂಡರ್ ಜತೆ ಹಾರ್ದಿಕ್ ಪಾಂಡ್ಯ ಹೋಲಿಕೆ ಸಾಧ್ಯವೇ ಇಲ್ಲವೆಂದ ಪಾಕ್ ಮಾಜಿ ಕ್ರಿಕೆಟಿಗ..!

ಕೆಲದಿನಗಳ ಹಿಂದಷ್ಟೇ ಇದೇ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ರಶೀದ್ ಲತೀಫ್, ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್‌ ಜತೆ ಹಾರ್ದಿಕ್ ಪಾಂಡ್ಯ ಅವರನ್ನು ಹೋಲಿಸಲು ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದರು. 'ಬೆನ್ ಸ್ಟೋಕ್ಸ್‌ ಈಗಾಗಲೇ ತಾವೇನು ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ವಿಶ್ವಕಪ್ ಗೆದ್ದಿದ್ದಾರೆ, ಟೆಸ್ಟ್ ಪಂದ್ಯಗಳನ್ನೂ ಗೆಲ್ಲಿಸಿಕೊಟ್ಟಿದ್ದಾರೆ. ಹೀಗಾಗಿ ಬೆನ್ ಸ್ಟೋಕ್ಸ್‌ ಜತೆಗೆ ಹಾರ್ದಿಕ್ ಪಾಂಡ್ಯ ಹೋಲಿಕೆ ಸರಿಯಲ್ಲ. ಯಾಕೆಂದರೆ ಟ್ರೋಫಿ ಗೆಲ್ಲಿಸುವುದು ಮುಖ್ಯ. ಈ ವಿಚಾರದಲ್ಲಿ ಬೆನ್ ಸ್ಟೋಕ್ಸ್‌, ಹಾರ್ದಿಕ್ ಪಾಂಡ್ಯ ಅವರಿಗಿಂತ ಸಾಕಷ್ಟು ಮುಂದಿದ್ದಾರೆ' ಎಂದು ಲತೀಫ್ ಅಭಿಪ್ರಾಯಪಟ್ಟಿದ್ದರು.

2019ರ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಸಾಕಷ್ಟು ಫಿಟ್ನೆಸ್ ಸಮಸ್ಯೆಯಿಂದ ಬಳಲಿದ್ದ ಹಾರ್ದಿಕ್ ಪಾಂಡ್ಯ, 2021ರ ಟಿ20 ವಿಶ್ವಕಪ್ ಬಳಿಕ ಭರ್ಜರಿಯಾಗಿಯೇ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದರು. 2022ರ ಐಪಿಎಲ್ ಟೂರ್ನಿಯಲ್ಲಿ ಮೊದಲ ಬಾರಿಗೆ ಗುಜರಾತ್ ತಂಡದ ನಾಯಕರಾಗಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. ಇದಾದ ಬಳಿಕ ಟೀಂ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಉಪಯುಕ್ತ ಕಾಣಿಕೆ ನೀಡುತ್ತಾ ಬಂದಿದ್ದಾರೆ.

click me!