* ಟೀಂ ಇಂಡಿಯಾ ಕ್ರಿಕೆಟಿಗರಿಗೆ ತಟ್ಟಿದ ಕೊರೋನಾ ಬಿಸಿ
* ಈಗಾಗಲೇ ರಿಷಭ್ ಪಂತ್‌ಗೆ ಕೋವಿಡ್ ಪಾಸಿಟಿವ್
* ಟೀಂ ಇಂಡಿಯಾ ಕ್ರಿಕೆಟಿಗರಿಗೆ ಬಿಸಿಸಿಐ 20 ದಿನಗಳ ಕಾಲ ವಿಶ್ರಾಂತಿ ನೀಡಲಾಗಿತ್ತು
ಮಸ್ಕಟ್(ಜು.17): ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಕೊರೋನಾ ಸೋಂಕು ತಗುಲಿದ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ‘ಆಟಗಾರರು ರಜೆಯಲ್ಲಿದ್ದರು. ಯುರೋ ಕಪ್ ಹಾಗೂ ವಿಂಬಲ್ಡನ್‌ನಲ್ಲಿ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗಿತ್ತು. ಯಾವಾಗಲೂ ಮಾಸ್ಕ್ ಹಾಕಿಕೊಂಡೇ ಇರಲು ಅಸಾಧ್ಯ’ ಎಂದು ಸಮರ್ಥಿಸಿಕೊಂಡಿದ್ದಾರೆ.
ಐಸಿಸಿ ಟಿ20 ವಿಶ್ವಕಪ್‌ನ ಸಿದ್ಧತೆಗಳ ಪರಿಶೀಲನೆಗಾಗಿ ಒಮಾನ್‌ಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಗಂಗೂಲಿ, ‘ಯಾವುದೇ ಆತಂಕವಿಲ್ಲ. ಸೋಂಕಿಗೆ ಒಳಗಾಗಿರುವ ರಿಷಭ್ ಪಂತ್ ಹಾಗೂ ಸಹಾಯಕ ಸಿಬ್ಬಂದಿ ದಯಾನಂದ್ ಆರಾಮಾಗಿದ್ದಾರೆ’ ಎಂದರು.
undefined
ಶುಭ್‌ಮನ್ ಗಿಲ್ ಗಾಯಕ್ಕೆ ಒಳಗಾಗಿ ತಂಡದಿಂದ ಹೊರಬಿದ್ದಿರುವುದರಿಂದ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಯಾರು ರೋಹಿತ್ ಶರ್ಮಾ ಜತೆ ಇನಿಂಗ್ಸ್ ಆರಂಭಿಸಲಿದ್ದಾರೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೌರವ್, ಈ ವಿಚಾರಗಳಿಗೆ ನಾನು ಮಧ್ಯ ಪ್ರವೇಶಿಸುವುದಿಲ್ಲ, ಇದನ್ನೆಲ್ಲ ತಂಡದ ಆಡಳಿತ ಮಂಡಳಿ ತೀರ್ಮಾನಿಸಲಿದೆ ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.
ಐಸಿಸಿ ಟಿ20 ವಿಶ್ವಕಪ್: ಒಂದೇ ಗುಂಪಿನಲ್ಲಿ ಸ್ಥಾನ ಪಡೆದ ಭಾರತ-ಪಾಕಿಸ್ತಾನ..!
ನ್ಯೂಜಿಲೆಂಡ್ ವಿರುದ್ದದ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಬಿಸಿಸಿಐ 20 ದಿನಗಳ ಕಾಲ ವಿಶ್ರಾಂತಿ ನೀಡಲಾಗಿತ್ತು. ಈ ಬಿಡುವಿನಲ್ಲಿ ರಿಷಭ್ ಪಂತ್ ತಮ್ಮ ಸ್ನೇಹಿತರೊಟ್ಟಿಗೆ ಯುರೋ ಕಪ್ ಫುಟ್ಬಾಲ್ ಪಂದ್ಯ ವೀಕ್ಷಿಸಲು ವಿಂಬ್ಲೆ ಮೈದಾನಕ್ಕೆ ತೆರಳಿದ್ದರು. ಇದೀಗ ರಿಷಭ್ ಪಂತ್‌ಗೆ ಕೋವಿಡ್ ಪಾಸಿಟಿವ್ ಬಂದಿದೆ. ಇದರ ಬೆನ್ನಲ್ಲೇ ಪ್ರಾಥಮಿಕ ಸಂಪರ್ಕ ಹೊಂದಿದ್ದ ಟೀಂ ಇಂಡಿಯಾ ಬೌಲಿಂಗ್ ಕೋಚ್ ಭರತ್ ಅರುಣ್, ವೃದ್ದಿಮಾನ್ ಸಾಹ ಹಾಗೂ ಅಭಿಮನ್ಯು ಈಶ್ವರನ್ ಅವರನ್ನು ಐಸೋಲೇಷನ್‌ನಲ್ಲಿಡಲಾಗಿದೆ.