ILT20 2023: ತಂಡ ತೊರೆಯುವ ಪ್ರಾಂಕ್ ಮಾಡಿ ದುಬೈ ಕ್ಯಾಪಿಟಲ್ಸ್‌ ಎದೆಬಡಿತ ನಿಲ್ಲಿಸಿದ ಯೂಸುಫ್ ಪಠಾಣ್..!

By Naveen KodaseFirst Published Feb 3, 2023, 11:10 AM IST
Highlights

* ಇಂಟರ್‌ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಭರಪೂರ ಮನರಂಜನೆ
*  ಯೂಸುಫ್ ಪಠಾಣ್, ಡ್ರೆಸ್ಸಿಂಗ್‌ ರೂಂನಲ್ಲಿ ಪ್ರಾಂಕ್‌ ಮಾಡಿದ ವಿಡಿಯೋ ವೈರಲ್
*  ದುಬೈ ತಂಡವು ILT20 ಟೂರ್ನಿಯಲ್ಲಿ ಟಾಪ್ 4 ಸ್ಥಾನ ಪಡೆಯಲು ಸಾಕಷ್ಟು ಹೋರಾಟ ಮಾಡುತ್ತಿದೆ

ದುಬೈ(ಫೆ.03): ಚೊಚ್ಚಲ ಆವೃತ್ತಿಯ ಇಂಟರ್‌ನ್ಯಾಷನಲ್ ಲೀಗ್ ಟಿ20(ILT20) ಟೂರ್ನಿಯು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಭರ್ಜರಿಯಾಗಿಯೇ ಸಾಗುತ್ತಿದೆ. ಮೈದಾನದಲ್ಲಿ ರನ್‌ ಮಳೆ ಹರಿಯುತ್ತಿದ್ದರೇ, ಮತ್ತೊಂದೆಡೆ ಮೈದಾನದಾಚೆಗೆ ಮೋಜು-ಮಸ್ತಿಗೇನೂ ಕೊರತೆಯಿಲ್ಲ ಎನ್ನುವಂತಿದೆ.

ಹೌದು, ದುಬೈ ಕ್ಯಾಪಿಟಲ್ಸ್ ತಂಡದ ಸ್ಪೋಟಕ ಬ್ಯಾಟರ್ ಯೂಸುಫ್ ಪಠಾಣ್, ಡ್ರೆಸ್ಸಿಂಗ್‌ ರೂಂನಲ್ಲಿ ಪ್ರಾಂಕ್‌ ಮಾಡಿ, ಒಂದು ಕ್ಷಣ ತಂಡದ ಮ್ಯಾನೇಜ್‌ಮೆಂಟ್ ತಬ್ಬಿಬ್ಬಾಗುವಂತೆ ಮಾಡಿದ ವಿಡಿಯೋವೀಗ ಸಾಕಷ್ಟು ವೈರಲ್ ಆಗಿದೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್, ಸದ್ಯ ದುಬೈ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು, ದುಬೈ ತಂಡವು ILT20 ಟೂರ್ನಿಯಲ್ಲಿ ಟಾಪ್ 4 ಸ್ಥಾನ ಪಡೆಯಲು ಸಾಕಷ್ಟು ಹೋರಾಟ ಮಾಡುತ್ತಿದೆ.

ದುಬೈ ಕ್ಯಾಪಿಟಲ್ಸ್‌ ತಂಡವು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಯೂಸುಫ್ ಪಠಾಣ್‌, ತಂಡದ ಮ್ಯಾನೇಜ್‌ಮೆಂಟ್‌ ಒಂದು ಕ್ಷಣ ತಬ್ಬಿಬ್ಬಾಗುವಂತೆ ಮಾಡಿದ್ದಾರೆ. ಈ ವಿಡಿಯೋ ಜತೆಗೆ ದುಬೈ ಕ್ಯಾಪಿಟಲ್ಸ್‌ ಫ್ರಾಂಚೈಸಿಯು, "ಈ ವಿಡಿಯೋದಲ್ಲಿ ನಮ್ಮ ಹೃದಯಬಡಿತವನ್ನೊಮ್ಮೆ ನೋಡಿ" ಎನ್ನುವ ಶೀರ್ಷಿಕೆ ನೀಡಿದೆ.

💓💓💓

Our heartbeats looking at the video 🫣 | pic.twitter.com/k6dY8GTa0S

— Dubai Capitals (@Dubai_Capitals)

ವಿಡಿಯೋದಲ್ಲಿ ಬಲಗೈ ಬ್ಯಾಟರ್ ಯೂಸುಫ್ ಪಠಾಣ್, ಪ್ರಾರಂಭದಲ್ಲಿ ಕೋಪಗೊಂಡು ಬ್ಯಾಗ್ ಹಿಡಿದು ಡ್ರೆಸ್ಸಿಂಗ್ ರೂಂನಿಂದ ಹೋಗುವಂತೆ ನಟಿಸಿದ್ದಾರೆ. ಆಗ ಟೀಂ ಮ್ಯಾನೇಜ್‌ಮೆಂಟ್, ಕೊಂಚ ಆತಂಕಕ್ಕೆ ಒಳಗಾದಂತೆ ಕಂಡು ಬಂದಿತು. ನಂತರ ನಗು ತಡೆಯಲಾರದೇ ಯೂಸುಫ್ ಪಠಾಣ್, ಇದೊಂದು ಪ್ರಾಂಕ್ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚೊಚ್ಚಲ ಆವೃತ್ತಿಯ ILT20 ಟೂರ್ನಿಯಲ್ಲಿ ಅಬುದಾಬಿ ನೈಟ್‌ರೈಡರ್ಸ್‌, ಡೆಸಾರ್ಟ್‌ ವೈಪರ್ಸ್‌, ದುಬೈ ಕ್ಯಾಪಿಟಲ್ಸ್, ಗಲ್ಫ್‌ ಜೈಂಟ್ಸ್, ಎಂಐ ಎಮಿರೇಟ್ಸ್‌ ಹಾಗೂ ಶಾರ್ಜಾ ವಾರಿಯರ್ಸ್‌ ಹೀಗೆ 6 ತಂಡಗಳು ಪಾಲ್ಗೊಂಡಿವೆ. ಇದೀಗ ಟೂರ್ನಿ ನಿರ್ಣಾಯಕ ಘಟ್ಟದತ್ತ ಸಾಗುತ್ತಿದ್ದು, ಸದ್ಯ ದುಬೈ ಕ್ಯಾಪಿಟಲ್ಸ್ ತಂಡವು 5ನೇ ಸ್ಥಾನದಲ್ಲಿದ್ದು, ಅಂತಿಮ 4ರ ಪಟ್ಟಿಯೊಳಗೆ ಸ್ಥಾನ ಪಡೆಯಲು ಎದುರು ನೋಡುತ್ತಿದೆ. ಎಲಿಮಿನೇಟರ್‌ ಹಂತಕ್ಕೇರಲು ದುಬೈ ಕ್ಯಾಪಿಟಲ್ಸ್ ತಂಡವು ಸಾಕಷ್ಟು ಪೈಪೋಟಿ ನಡೆಸಬೇಕಿದೆ.

ಟಿ20 ಕ್ರಿಕೆಟ್‌ನಲ್ಲಿ 100, ಏಕದಿನ ಕ್ರಿಕೆಟ್‌ನಲ್ಲಿ 200 ರನ್ ಚಚ್ಚಿದ ನಾಲ್ವರು ಕ್ರಿಕೆಟಿಗರಿವರು..!

ಎಮಿನೇಟರ್‌ ಪಂದ್ಯಕ್ಕೂ ಮುನ್ನ ದುಬೈ ಕ್ಯಾಪಿಟಲ್ಸ್ ತಂಡವು ಇನ್ನೂ ಎರಡು ಪಂದ್ಯಗಳನ್ನು ಆಡಲಿದೆ. ದುಬೈ ಕ್ಯಾಪಿಟಲ್ಸ್ ತಂಡವು, ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಡೆಸಾರ್ಟ್‌ ವೈಪರ್ಸ್‌ ತಂಡವನ್ನು ಎದುರಿಸಿದರೇ, ಫೆಬ್ರವರಿ 5ರಂದು ತನ್ನ ಪಾಲಿನ ಕೊನೆಯ ಪಂದ್ಯದಲ್ಲಿಎಂಐ ಎಮಿರೇಟ್ಸ್‌ ವಿರುದ್ದ ಕಾದಾಡಲಿದೆ.

ರೋಮನ್ ಪೋವೆಲ್ ನೇತೃತ್ವದ ದುಬೈ ಕ್ಯಾಪಿಟಲ್ಸ್ ತಂಡದ ನೆಟ್‌ ರನ್‌ರೇಟ್‌ ನೆಗೆಟಿವ್ ಇರುವುದರಿಂದ ಕೇವಲ ಉಳಿದೆರಡು ಪಂದ್ಯಗಳನ್ನು ಗೆದ್ದರಷ್ಟೇ ಸಾಲುವುದಿಲ್ಲ, ದೊಡ್ಡ ಅಂತರದ ಗೆಲುವಿನಿಂದಷ್ಟೇ ದುಬೈ ಕ್ಯಾಪಿಟಲ್ಸ್ ತಂಡವು ನಾಕೌಟ್ ಹಂತಕ್ಕೇರಲು ಸಾಧ್ಯವಾಗಲಿದೆ. 

ಸದ್ಯ ILT20 ಟೂರ್ನಿಯಲ್ಲಿ ಮೊದಲ 25 ಪಂದ್ಯಗಳ ಮುಕ್ತಾಯದ ವೇಳೆಗೆ ಡೆಸಾರ್ಟ್ ವೈಫರ್ಸ್‌ ತಂಡವು 14 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೇ, ಗಲ್ಫ್‌ ಜೈಂಟ್ಸ್, ಎಂಐ ಎಮಿರೇಟ್ಸ್‌ ಹಾಗೂ ಶಾರ್ಜಾ ವಾರಿಯರ್ಸ್‌ ಮೊದಲ 4 ಸ್ಥಾನ ಪಡೆದಿವೆ. ಇನ್ನು 8 ಪಂದ್ಯಗಳನ್ನಾಡಿ ಒಂದೂ ಗೆಲುವು ಕಾಣದ ಅಬುದಾಬಿ ನೈಟ್‌ರೈಡರ್ಸ್‌ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

click me!