
ದುಬೈ(ಜ.20): ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಮುಕ್ತಾಯದ ಬೆನ್ನಲ್ಲೇ ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟಿಸಿದ್ದು, ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ವೃತ್ತಿ ಜೀವನದ ಶ್ರೇಷ್ಠ ಸಾಧನೆ(13ನೇ ಸ್ಥಾನ) ಮಾಡಿದ್ದಾರೆ.
ಗಾಬಾ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ರಿಷಭ್ ಪಂತ್ ಅಜೇಯ 89 ರನ್ ಬಾರಿಸುವ ಮೂಲಕ ಭಾರತಕ್ಕೆ ಐತಿಹಾಸಿಕ ಗೆಲುವು ದಕ್ಕಿಸಿಕೊಟ್ಟಿದ್ದರು. ಇದರೊಂದಿಗೆ 691 ರೇಟಿಂಗ್ ಅಂಕ ಕಲೆಹಾಕುವ ಮೂಲಕ ಪಂತ್ 13ನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಪ್ರಸ್ತುತ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳ ಪೈಕಿ ಪಂತ್ ಅಗ್ರಸ್ಥಾನಕ್ಕೇರಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ 677 ರೇಟಿಂಗ್ ಅಂಕಗಳೊಂದಿಗೆ 15ನೇ ಸ್ಥಾನದಲ್ಲಿದ್ದಾರೆ.
ಇನ್ನು ಶ್ರೀಲಂಕಾ ವಿರುದ್ದ ಗಾಲೆ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ದ್ವಿಶತಕ ಬಾರಿಸಿದ ಜೋ ರೂಟ್ ಲಾಂಗ್ ಜಂಪ್ ಮಾಡಿದ್ದು, ಚೇತೇಶ್ವರ್ ಪೂಜಾರ ಹಾಗೂ ಬಾಬರ್ ಅಜಂ ಅವರನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಕೇನ್ ವಿಲಿಯಮ್ಸನ್ ಹಾಗೂ ಸ್ಟೀವ್ ಸ್ಮಿತ್ ಮೊದಲೆರಡು ಸ್ಥಾನಗಳನ್ನು ಉಳಿಸಿಕೊಂಡರೆ, ಮಾರ್ನಸ್ ಲಬುಶೇನ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ್ದಾರೆ. ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಬಳಿಕ ಪಿತೃತ್ವದ ರಜೆಯ ಮೇರೆಗೆ ತವರಿಗೆ ಮರಳಿದ್ದರು. ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಒಂದು ಸ್ಥಾನ ಮೇಲೇರಿ 7ನೇ ಸ್ಥಾನಕ್ಕೆ ಲಗ್ಗೆಯಿಟ್ಟರೆ, ಅಜಿಂಕ್ಯ ರಹಾನೆ ಒಂದು ಸ್ಥಾನ ಕುಸಿತ ಕಂಡು 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಬ್ರಿಸ್ಬೇನ್‌ನಲ್ಲಿ ಟೀಂ ಇಂಡಿಯಾ ದಿಗ್ವಿಜಯ; ಬಾರ್ಡರ್-ಗವಾಸ್ಕರ್ ಸರಣಿ ಕೈವಶ
ಇನ್ನು ಬೌಲಿಂಗ್ ವಿಭಾಗದಲ್ಲಿ ಪ್ಯಾಟ್ ಕಮಿನ್ಸ್, ಸ್ಟುವರ್ಟ್ ಬ್ರಾಡ್ ಹಾಗೂ ನೀಲ್ ವ್ಯಾಗ್ನರ್ ಕ್ರಮವಾಗಿ ಮೊದಲ 3 ಸ್ಥಾನಗಳನ್ನು ಹಂಚಿಕೊಂಡಿದ್ದರೆ, ಭಾರತ ವಿರುದ್ದ ಮಾರಕ ದಾಳಿ ನಡೆಸಿದ್ದ ಜೋಸ್ ಹೇಜಲ್‌ವುಡ್ 4ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನುಳಿದಂತೆ ರವಿಚಂದ್ರನ್ ಅಶ್ವಿನ್ ಹಾಗೂ ಜಸ್ಪ್ರೀತ್ ಬುಮ್ರಾ ತಲಾ ಒಂದೊಂದು ಸ್ಥಾನ ಮೇಲೇರಿದ್ದು ಕ್ರಮವಾಗಿ 8 ಮತ್ತು 9ನೇ ಸ್ಥಾನ ಹಂಚಿಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.