ಫ್ರಾಂಚೈಸಿ ಕ್ರಿಕೆಟ್‌ಗೆ ಯಾರ್ಕರ್‌ ಸ್ಪೆಷಲಿಸ್ಟ್ ಲಸಿತ್‌ ಮಾಲಿಂಗ ವಿದಾಯ

By Suvarna NewsFirst Published Jan 21, 2021, 10:31 AM IST
Highlights

ಶ್ರೀಲಂಕಾ ಕ್ರಿಕೆಟ್‌ ದಿಗ್ಗಜ ಲಸಿತ್ ಮಾಲಿಂಗ ಎಲ್ಲಾ ಮಾದರಿಯ ಫ್ರಾಂಚೈಸಿ ಲೀಗ್‌ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಕೊಲಂಬೊ(ಜ.21): ಸೀಮಿತ ಓವರ್‌ ಕ್ರಿಕೆಟ್‌ನ ಅನುಭವಿ ವೇಗದ ಬೌಲರ್‌ ಲಸಿತ್‌ ಮಾಲಿಂಗ ಅವರನ್ನು ಮುಂಬೈ ಇಂಡಿಯನ್ಸ್‌ ತಂಡ ರೀಟೈನ್‌ ಮಾಡಿಕೊಳ್ಳದ ಬೆನ್ನಲ್ಲೇ, ಯಾರ್ಕರ್‌ ಸ್ಪೆಷಲಿಸ್ಟ್ ಮಾಲಿಂಗ ಫ್ರಾಂಚೈಸಿ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 

ಜನವರಿ ತಿಂಗಳಾರಂಭದಲ್ಲೇ ಲಸಿತ್‌ ಮಾಲಿಂಗ ಮುಂಬರುವ ಐಪಿಎಲ್ ಟೂರ್ನಿಗೆ ತಮ್ಮ ಅಲಭ್ಯತೆಯ ಬಗ್ಗೆ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಗೆ ತಿಳಿಸಿದ್ದರು ಎನ್ನಲಾಗಿದೆ. ತಮ್ಮ ಕುಟುಂಬದೊಂದಿಗೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಲಸಿತ್ ಮಾಲಿಂಗ ತಿಳಿಸಿದ್ದಾರೆ.

ನಮ್ಮ ಕುಟುಂಬದೊಟ್ಟಿಗೆ ಚರ್ಚಿಸಿ ಎಲ್ಲಾ ಮಾದರಿಯ ಫ್ರಾಂಚೈಸಿಗೆ ವಿದಾಯ ಹೇಳಲು ಇದು ಸರಿಯಾದ ಸಮಯ ಎನ್ನುವ ತೀರ್ಮಾನಕ್ಕೆ ಬಂದಿದೆ. ಕೊರೋನಾ ಹೆಮ್ಮಾರಿಯ ಅಟ್ಟಹಾಸ, ವಿದೇಶಿ ಓಡಾಟಕ್ಕೆ ನಿರ್ಬಂಧಗಳು ಬಿದ್ದಿದ್ದರಿಂದ ಸಂಪೂರ್ಣವಾಗಿ ಫ್ರಾಂಚೈಸಿ ಲೀಗ್‌ಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇದೇ ಸರಿಯಾದ ಸಮಯವೆಂದು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಮಾಲಿಂಗ ಹೇಳಿದ್ದಾರೆ.

ಮಾಲಿಂಗ ಸೇರಿ 7 ಕ್ರಿಕೆಟಿಗರ ಕೈಬಿಟ್ಟ ಮುಂಬೈ; ತಂಡದಲ್ಲಿ ಉಳಿದುಕೊಂಡವರ್ಯಾರು?

ಇದೇ ವಿಚಾರವನ್ನು ಕೆಲದಿನಗಳ ಹಿಂದಷ್ಟೇ ಮುಂಬರುವ ಹರಾಜು ಪ್ರಕ್ರಿಯೆಗೆ ಸಿದ್ದತೆ ನಡೆಸುತ್ತಿರುವ ಮುಂಬೈ ಇಂಡಿಯನ್ಸ್‌ ಆಡಳಿತ ಮಂಡಳಿಯ ಜತೆಯೂ ಮಾತುಕತೆ ನಡೆಸಿದ್ದೇನೆ. ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ತುಂಬಾ ಬೆಂಬಲವಾಗಿದ್ದು, ನನ್ನ ನಿರ್ಧಾರವನ್ನು ಫ್ರಾಂಚೈಸಿ ಅರ್ಥಮಾಡಿಕೊಂಡಿದೆ. ಈ ಸಂದರ್ಭದಲ್ಲಿ ಕಳೆದ 12 ವರ್ಷಗಳಿಂದ ನನ್ನನ್ನು ಬೆಂಬಲಿಸಿಕೊಂಡು ಬಂದಿರುವ ಅಂಬಾನಿ ಕುಟುಂಬಕ್ಕೆ, ಮುಂಬೈ ಇಂಡಿಯನ್ಸ್‌ನ ಪ್ರತಿಯೊಬ್ಬ ಸಿಬ್ಬಂದಿಗೂ ಹಾಗೂ ಅಭಿಮಾನಿಗಳಿಗೆ ನನ್ನ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಎಂದು ಮಾಲಿಂಗ ಹೇಳಿದ್ದಾರೆ.
 
ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಪರ 122 ಪಂದ್ಯಗಳನ್ನಾಡಿದ ಲಸಿತ್‌ ಮಾಲಿಂಗಗೆ ಮುಂಬೈ ಫ್ರಾಂಚೈಸಿ ಮಾಲೀಕ ಆಕಾಶ್‌ ಅಂಬಾನಿ ಕೂಡಾ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಕಳೆದ 12 ವರ್ಷಗಳಿಂದ ಮುಂಬೈ ಇಂಡಿಯನ್ಸ್‌ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದರು. ನಾವು ಮಾಲಿಂಗ ಅವರು ತೆಗೆದುಕೊಂಡ ನಿರ್ಧಾರವನ್ನು ಗೌರವಿಸುತ್ತೇವೆ. ಇನ್ನು 5 ವರ್ಷಗಳ ಕಾಲ ಅವರು ನಮ್ಮ ಬೌಲಿಂಗ್ ಪಡೆಯನ್ನು ಮುನ್ನಡೆಸಬಹುದು ಎಂದು ನಿರೀಕ್ಷಿಸಿದ್ದೆ ಎಂದು ಆಕಾಶ್ ಅಂಬಾನಿ ಹೇಳಿದ್ದಾರೆ.

click me!