ICC T20I Rankings: ಮತ್ತೆ ನಂ.1 ಸ್ಥಾನಕ್ಕೆ ಜಿಗಿದ ಶಫಾಲಿ ವರ್ಮಾ..!

By Suvarna News  |  First Published Jan 26, 2022, 2:22 PM IST

* ಐಸಿಸಿ ಮಹಿಳಾ ಟಿ20 ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ಶಫಾಲಿ ವರ್ಮಾ

* ಆಸ್ಟ್ರೇಲಿಯಾದ ಬೆತ್ ಮೂನಿಯನ್ನು ಹಿಂದಿಕ್ಕಿ ಮತ್ತೆ ಅಗ್ರಸ್ಥಾನಕ್ಕೆ ಜಿಗಿದ ಶಫಾಲಿ

* ಸ್ಮೃತಿ ಮಂಧನಾ ಒಂದು ಸ್ಥಾನ ಕುಸಿತ ಕಂಡು ನಾಲ್ಕನೇ ಸ್ಥಾನಕ್ಕೆ ಜಾರಿದ್ದಾರೆ


ದುಬೈ(ಜ.26): ಭಾರತದ ಯುವ ಕ್ರಿಕೆಟರ್‌ ಶಫಾಲಿ ವರ್ಮಾ (Shafali Verma) ಐಸಿಸಿ ಮಹಿಳಾ ಟಿ20 ಬ್ಯಾಟರ್‌ಗಳ ರ‍್ಯಾಂಕಿಂಗ್‌ (ICC T20I Rankings) ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ಮಂಗಳವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ 726 ರೇಟಿಂಗ್‌ ಅಂಕ ಪಡೆದ ಅವರು, 1 ಸ್ಥಾನ ಏರಿಕೆ ಕಂಡು ಅಗ್ರಸ್ಥಾನ ಪಡೆದಿದ್ದಾರೆ. ಆದರೆ ಸ್ಮೃತಿ ಮಂಧಾನ 4ನೇ ಸ್ಥಾನಕ್ಕೆ ಕುಸಿದಿದ್ದಾರೆ. 17 ವರ್ಷದ ಶಫಾಲಿ ವರ್ಮಾ, ಆಸ್ಟ್ರೇಲಿಯಾದ ಬೆತ್ ಮೂನಿಯನ್ನು ಹಿಂದಿಕ್ಕಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ.

ಶಫಾಲಿ ವರ್ಮಾ 2021ರ ಅಕ್ಟೋಬರ್‌ ತಿಂಗಳಿನಲ್ಲಿ ಕಡೆಯ ಬಾರಿಗೆ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದರು. ಇದಾದ ಬಳಿಕ ಬಿಗ್‌ಬ್ಯಾಶ್ ಲೀಗ್ (Big Bash League) ಟೂರ್ನಿಯಲ್ಲಿ ಶಫಾಲಿ ವರ್ಮಾ ಉತ್ತಮ ಪ್ರದರ್ಶನವನ್ನು ತೋರಿದ್ದರು. ಇನ್ನು 2021ನೇ ಸಾಲಿನ ಐಸಿಸಿ ವರ್ಷದ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿರುವ ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧನಾ (Smriti Mandhana) 4ನೇ ಸ್ಥಾನಕ್ಕೆ ಜಾರಿದ್ದಾರೆ.

Latest Videos

undefined

ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ದ ನಡೆದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಸ್ಮೃತಿ ಮಂಧನಾ ಒಂದು ಅರ್ಧಶತಕ ಸಹಿತ ಉತ್ತಮ ಪ್ರದರ್ಶನವನ್ನು ತೋರಿದ್ದರು. ಹೀಗಿದ್ದೂ ಮಂಧನಾ ಒಂದು ಸ್ಥಾನ ಕುಸಿತ ಕಂಡು ನಾಲ್ಕನೇ ಸ್ಥಾನಕ್ಕೆ ಜಾರಿದ್ದಾರೆ. ಸದ್ಯ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧನಾ ಇಬ್ಬರೂ ಫೆಬ್ರವರಿ ತಿಂಗಳಿನಲ್ಲಿ ನ್ಯೂಜಿಲೆಂಡ್ ವಿರುದ್ದ ಆರಂಭವಾಗಲಿರುವ ಸೀಮಿತ ಓವರ್‌ಗಳ ಸರಣಿ ಹಾಗೂ ಇದಾದ ಬಳಿಕ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಇಬ್ಬರು ಆಟಗಾರ್ತಿಯರನ್ನು ಹೊರತು ಪಡಿಸಿ ಬ್ಯಾಟಿಂಗ್ ವಿಭಾಗದಲ್ಲಿ ಭಾರತದ ಯಾವೊಬ್ಬ ಮಹಿಳಾ ಬ್ಯಾಟರ್‌ಗಳು ಸಹ ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆಯಲು ಯಶಸ್ವಿಯಾಗಿಲ್ಲ.

ICC Womens Cricketer of the Year: ಐಸಿಸಿ ವರ್ಷದ ಆಟಗಾರ್ತಿಯಾಗಿ ಸ್ಮೃತಿ ಮಂಧನಾ ಆಯ್ಕೆ

ಆಸ್ಟ್ರೇಲಿಯಾದ ಬೆತ್ ಮೂನಿ (Beth Mooney) ಹಾಗೂ ಮೆಗ್ ಲ್ಯಾನಿಂಗ್‌ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದರೆ, ಎಲಿಸಾ ಹೀಲಿ(Alyssa Healy) ಆರನೇ ಸ್ಥಾನದಲ್ಲಿ ಭದ್ರವಾಗಿದ್ದಾರೆ. ಇನ್ನುಳಿದಂತೆ ನ್ಯೂಜಿಲೆಂಡ್‌ನ ಸೋಫಿ ಡಿವೈನ್ ಹಾಗೂ ಸುಜಿ ಬೇಟ್ಸ್‌ ಕ್ರಮವಾಗಿ ಐದು ಹಾಗೂ ಏಳನೇ ಸ್ಥಾನದಲ್ಲಿದ್ದಾರೆ.

🔹 Shafali Verma back on 🔝
🔹 Big gains for Chamari Athapaththu 🙌

Here are the movements in this week's ICC Women's Player Rankings 📈

Details 👉 https://t.co/vgKLeRzB8D pic.twitter.com/Eh6A9fi7bj

— ICC (@ICC)

Ind vs SA: ವೈಟ್‌ವಾಶ್ ಅನುಭವಿಸಿದ ಬೆನ್ನಲ್ಲೇ ಟೀಂ ಇಂಡಿಯಾಗೆ ಶಾಕ್ ಕೊಟ್ಟ ಐಸಿಸಿ..!

ಇನ್ನು ಇದೇ ವೇಳೆ ಶ್ರೀಲಂಕಾದ ಚಮಾರಿ ಅಟಪಟ್ಟು (Chamari Athapaththu) ಬರೋಬ್ಬರಿ 6 ಸ್ಥಾನ ಜಿಗಿತ ಕಂಡು ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ. ಕಾಮನ್‌ವೆಲ್ತ್‌ ಗೇಮ್ಸ್‌ ಕ್ವಾಲಿಫೈಯರ್ಸ್‌ ಪಂದ್ಯಗಳಲ್ಲಿ ಚಮಾರಿ ಅಟಪಟ್ಟು 55.25ರ ಬ್ಯಾಟಿಂಗ್ ಸರಾಸರಿಯಲ್ಲಿ 221 ರನ್ ಬಾರಿಸಿ ಗಮನ ಸೆಳೆದಿದ್ದರು. ಇದೀಗ ಚಮಾರಿ ಅಟಪಟ್ಟು ಐಸಿಸಿ ಮಹಿಳಾ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ 8ನೇ ಸ್ಥಾನದಲ್ಲಿ ಭದ್ರವಾಗಿದ್ದಾರೆ. ಚಮಾರಿ ಅಟಪಟ್ಟು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಟೂರ್ನಿಯಲ್ಲಿ ಶ್ರೀಲಂಕಾ ಚಾಂಪಿಯನ್ ಆಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 

ಭಾರತದ ಸ್ಪಿನ್ನರ್ ದೀಪ್ತಿ ಶರ್ಮಾ (Deepti Sharma) ಬೌಲರ್‌ಗಳ ಪಟ್ಟಿಯಲ್ಲಿ 1 ಸ್ಥಾನ ಮೇಲಕ್ಕೇರಿ 4ನೇ ಹಾಗೂ ಆಲ್ರೌಂಡರ್‌ಗಳ ಪಟ್ಟಿಯಲ್ಲಿ 1 ಸ್ಥಾನ ಜಿಗಿತ ಕಂಡು 3ನೇ ಸ್ಥಾನ ಪಡೆದಿದ್ದಾರೆ.

click me!