T20 World Cup: ಬಾಂಗ್ಲಾದೇಶ ಎದುರು ಸುಲಭ ಗೆಲುವು ದಾಖಲಿಸಿದ ದಕ್ಷಿಣ ಆಫ್ರಿಕಾ

Suvarna News   | Asianet News
Published : Nov 02, 2021, 06:38 PM ISTUpdated : Nov 02, 2021, 10:01 PM IST
T20 World Cup: ಬಾಂಗ್ಲಾದೇಶ ಎದುರು ಸುಲಭ ಗೆಲುವು ದಾಖಲಿಸಿದ ದಕ್ಷಿಣ ಆಫ್ರಿಕಾ

ಸಾರಾಂಶ

* ಬಾಂಗ್ಲಾದೇಶ ಎದುರು 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ದಕ್ಷಿಣ ಆಫ್ರಿಕಾ * ಬಾಂಗ್ಲಾದೇಶ ತಂಡಕ್ಕೆ ಸತತ 4ನೇ ಸೋಲು * ಸೆಮೀಸ್ ಕನಸನ್ನು ಜೀವಂತವಾಗಿರಿಸಿಕೊಂಡ ದಕ್ಷಿಣ ಆಫ್ರಿಕಾ

ಅಬುಧಾಬಿ(ನ.02): ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿನ ಪ್ರದರ್ಶನ ತೋರಿದ ದಕ್ಷಿಣ ಆಫ್ರಿಕಾ (South Africa Cricket Team) ತಂಡವು ಬಾಂಗ್ಲಾದೇಶ ಎದುರು 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಸೆಮೀಸ್ ಕನಸನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಇನ್ನೊಂದೆಡೆ ಬಾಂಗ್ಲಾದೇಶ ತಂಡವು ಸತತ 4ನೇ ಸೋಲು ಕಾಣುವ ಮೂಲಕ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ

ಬಾಂಗ್ಲಾದೇಶ (Bangladesh Cricket Team) ನೀಡಿದ್ದ 85 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಮೊದಲ ಓವರ್‌ನಲ್ಲೇ ರೀಜಾ ಹೆಂಡ್ರಿಕ್ಸ್‌ ವಿಕೆಟ್ ಕಳೆದುಕೊಂಡಿತು. ಹೆಂಡ್ರಿಕ್ಸ್‌  ಕೇವಲ 4 ರನ್‌ ಬಾರಿಸಿ ಟಸ್ಕಿನ್‌ ಅಹಮ್ಮದ್‌ಗೆ ವಿಕೆಟ್‌ ಒಪ್ಪಿಸಿದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್‌ ಕ್ವಿಂಟನ್ ಡಿ ಕಾಕ್‌ (Quinton de Kock) 15 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 16 ರನ್‌ ಬಾರಿಸಿ ಮೆಹದಿ ಹಸನ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ಏಯ್ಡನ್ ಮಾರ್ಕ್‌ರಮ್‌ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಇನ್ನು ರಾಸ್ಸಿ ವ್ಯಾನ್ ಡರ್ ಡುಸೇನ್‌ ಹಾಗೂ ತೆಂಬಾ ಬವುಮಾ ಜೋಡಿ 4 ವಿಕೆಟ್‌ಗೆ 37 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ವ್ಯಾನ್ ಡರ್ ಡುಸೇನ್‌ 22 ರನ್ ಬಾರಿಸಿ ನಸುಮ್‌ ಅಹಮ್ಮದ್‌ಗೆ ವಿಕೆಟ್‌ ಒಪ್ಪಿಸಿದರು. ನಾಯಕ ತೆಂಬಾ ಬವುಮಾ 28 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 1 ಸಿಕ್ಸರ್‌ ಸಹಿತ ಅಜೇಯ 31 ರನ್‌ ಬಾರಿಸುವ ಮೂಲಕ ಇನ್ನೂ 39 ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು. 

T20 World Cup: ಹರಿಣಗಳಿಗೆ ಸುಲಭ ಗುರಿ ನೀಡಿದ ಬಾಂಗ್ಲಾದೇಶ

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬಾಂಗ್ಲಾದೇಶ ತಂಡಕ್ಕೆ ದಕ್ಷಿಣ ಆಫ್ರಿಕಾ ವೇಗಿಗಳು ಶಾಕ್‌ ನೀಡಿದರು. ಕಗಿಸೋ ರಬಾಡ ಹಾಗೂ ಏನ್ರಿಚ್ ನೊಕಿಯೆ ತಲಾ 3 ವಿಕೆಟ್‌ ಕಬಳಿಸುವ ಮೂಲಕ ಬಾಂಗ್ಲಾದೇಶ ಕುಸಿತಕ್ಕೆ ಕಾರಣರಾದರು. ಲಿಟನ್ ದಾಸ್, ಶಮೀಮ್ ಹೊಸೈನ್ ಹಾಗೂ ಮೆಹದಿ ಹಸನ್ ಎರಡಂಕಿ ದಾಖಲಿಸಿದ್ದು ಬಿಟ್ಟರೆ ಉಳಿದ್ಯಾವ ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾದರು. 

ದಕ್ಷಿಣ ಆಫ್ರಿಕಾ ಪರ ವೇಗದ ದಾಳಿ ಸಂಘಟಿಸಿದ ಕಗಿಸೋ ರಬಾಡ ಕೇವಲ 20 ರನ್‌ ನೀಡಿ ಅಗ್ರ ಕ್ರಮಾಂಕದ ಮೂರು ವಿಕೆಟ್‌ ಪಡೆದು ಬಾಂಗ್ಲಾಗೆ ಆರಂಭಿಕ ಆಘಾತ ನೀಡಿದರು. ಇನ್ನು ಮತ್ತೋರ್ವ ವೇಗಿ ಏನ್ರಿಚ್ ನೊಕಿಯೆ ಕೇವಲ 8 ರನ್‌ ನೀಡಿ 3 ವಿಕೆಟ್ ಕಬಳಿಸಿದರು. ಇನ್ನುಳಿದಂತೆ ಸ್ಪಿನ್ನರ್ ತಬ್ರೀಜ್ ಸಂಶಿ 2 ಹಾಗೂ ಡ್ವೇನ್ ಪ್ರಿಟೋರಿಯಸ್‌ ಒಂದು ವಿಕೆಟ್ ಕಬಳಿಸಿ ಮಿಂಚಿದರು.

ಹರಿಣಗಳ ಸೆಮೀಸ್ ಕನಸು ಜೀವಂತ: ಬಾಂಗ್ಲಾದೇಶ ವಿರುದ್ದ 6 ವಿಕೆಟ್‌ಗಳ ಅಂತರದ ಗೆಲುವು ಸಾಧಿಸುವುದರೊಂದಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ನೆಟ್‌ ರನ್‌ರೇಟ್‌ ಸುಧಾರಿಸಿಕೊಂಡಿದ್ದು ಮಾತ್ರವಲ್ಲದೇ ತಮ್ಮ ಸೆಮಿ ಫೈನಲ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಸದ್ಯ ಗ್ರೂಪ್ 01ರಲ್ಲಿ 4 ಪಂದ್ಯಗಳನ್ನಾಡಿ 3 ಗೆಲುವು ಸಾಧಿಸಿರುವ ದಕ್ಷಿಣ ಆಫ್ರಿಕಾ ತಂಡವು ಎರಡನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಇನ್ನು 4 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿರುವ ಇಂಗ್ಲೆಂಡ್ ತಂಡವು ಈಗಾಗಲೇ ಸೆಮೀಸ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆಸೀಸ್‌, ಆಫ್ಘನ್‌ಗೆ ಟಿ20 ಪಂದ್ಯಗಳೇ ಇಲ್ಲ! ಯಾಕೆ?
ಭಾರತ-ದಕ್ಷಿಣ ಆಫ್ರಿಕಾ 2ನೇ ಟಿ20: ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ!