T20 World Cup: ಸತತ 2 ಸಿಕ್ಸರ್ ಚಚ್ಚಿ ಹರಿಣಗಳಿಗೆ ಗೆಲುವು ತಂದಿಟ್ಟ ಕಿಲ್ಲರ್ ಮಿಲ್ಲರ್..!

Suvarna News   | Asianet News
Published : Oct 30, 2021, 07:45 PM IST
T20 World Cup: ಸತತ 2 ಸಿಕ್ಸರ್ ಚಚ್ಚಿ ಹರಿಣಗಳಿಗೆ ಗೆಲುವು ತಂದಿಟ್ಟ ಕಿಲ್ಲರ್ ಮಿಲ್ಲರ್..!

ಸಾರಾಂಶ

* ಶ್ರೀಲಂಕಾ ವಿರುದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ರೋಚಕ ಜಯ * ಕೊನೆಯ ಓವರ್‌ನಲ್ಲಿ 2 ಸಿಕ್ಸರ್ ಚಚ್ಚಿ ಪಂದ್ಯದ ದಿಕ್ಕು ಬದಲಿಸಿದ ಮಿಲ್ಲರ್ * ಸೆಮೀಸ್‌ ರೇಸ್‌ನಿಂದ ಬಹುತೇಕ ಹೊರಬಿದ್ದ ಶ್ರೀಲಂಕಾ

ಶಾರ್ಜಾ(ಅ.30): ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಮತ್ತೊಮ್ಮೆ ಅಮೋಘ ಇನಿಂಗ್ಸ್ ಆಡಿದ ಡೇವಿಡ್ ಮಿಲ್ಲರ್ (David Miller) ಶ್ರೀಲಂಕಾ ವಿರುದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ 4 ವಿಕೆಟ್‌ಗಳ ರೋಚಕ ಜಯ ತಂದುಕೊಟ್ಟಿದ್ದಾರೆ. ವನಿಂದು ಹಸರಂಗ (Wanindu Hasaranga) ಹ್ಯಾಟ್ರಿಕ್ ವ್ಯರ್ಥವಾದರೆ, ಕೊನೆಯ ಓವರ್‌ನಲ್ಲಿ ಮಿಲ್ಲರ್ ಸತತ 2 ಸಿಕ್ಸರ್ ಸಿಡಿಸಿ ಗೆಲುವಿನ ಹೀರೋ ಎನಿಸಿದರು. ಇದರೊಂದಿಗೆ ದಕ್ಷಿಣ ಆಫ್ರಿಕಾ ತಂಡವು ತನ್ನ ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಹೌದು, ಶ್ರೀಲಂಕಾ ನೀಡಿದ್ದ 143 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಕೂಡಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ರೀಜಾ ಹೆಂಡ್ರಿಕ್ಸ್‌ 11 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರೆ, ವಿಕೆಟ್‌ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್‌ 12 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. ಈ ಇಬ್ಬರು ಆರಂಭಿಕರನ್ನು ಪೆವಿಲಿಯನ್‌ಗಟ್ಟುವಲ್ಲಿ ಚಮೀರಾ ಯಶಸ್ವಿಯಾದರು. ಇನ್ನು ವ್ಯಾನ್ ಡರ್ ಡುಸೇನ್ 16 ರನ್‌ ಬಾರಿಸಿ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆಗಿ ಪೆವಿಲಿಯನ್ ಸೇರಿದರು. ಈ ವೇಳೆಗೆ ದಕ್ಷಿಣ ಆಫ್ರಿಕ ತಂಡವು 8 ಓವರ್‌ ಮುಕ್ತಾಯದ ವೇಳೆ 3 ವಿಕೆಟ್ ಕಳೆದುಕೊಂಡು 49 ರನ್‌ ಬಾರಿಸಿತ್ತು. 

ತೆಂಬಾ ಬವುಮಾ ತಾಳ್ಮೆಯ ಆಟ: ಮಹತ್ವದ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಹಾಗೂ ನಾಯಕ ತೆಂಬಾ ಬವುಮಾ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಇಳಿದರು. ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಬವುಮಾ 46 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 46 ರನ್‌ ಬಾರಿಸಿ ಹಸರಂಗ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು.

T20 World Cup: ನಿಸ್ಸಾಂಕ ಏಕಾಂಗಿ ಹೋರಾಟ, ಆಫ್ರಿಕಾಗೆ ಸ್ಪರ್ಧಾತ್ಮಕ ಗುರಿ

ವ್ಯರ್ಥವಾದ ವನಿಂದು ಹಸರಂಗ ಹ್ಯಾಟ್ರಿಕ್‌: ಲಂಕಾ ತಂಡ ಸ್ಟಾರ್ ಸ್ಪಿನ್ನರ್ ವನಿಂದು ಹಸರಂಗ, ಉತ್ತಮವಾಗಿ ಆಡುತ್ತಿದ್ದ ಏಯ್ಡನ್ ಮಾರ್ಕ್‌ರಮ್‌(19) ಅವರನ್ನು ತಮ್ಮ ಕೂಟದ ಮೂರನೇ ಓವರ್‌ನ ಕೊನೆಯ ಎಸೆಯದಲ್ಲಿ ವಿಕೆಟ್ ಕಬಳಿಸಿದರು. ಇದಾದ ಬಳಿಕ 18ನೇ ಓವರ್‌ನ ಮೊದಲೆರಡು ಎಸೆತಗಳಲ್ಲಿ ತೆಂಬ ಬವುಮಾ ಹಾಗೂ ಡ್ವೇನ್ ಪ್ರಿಟೋರಿಯಸ್‌ ಅವರನ್ನು ಪೆವಿಲಿಯನ್ನಿಗಟ್ಟುವ ಮೂಲಕ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು. ಈ ಮೂಲಕ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮೂರನೇ ಬೌಲರ್ ಎನ್ನುವ ಕೀರ್ತಿಗೆ ಹಸರಂಗ ಭಾಜನರಾದರು. 2007ರಲ್ಲಿ ಅಸ್ಟ್ರೇಲಿಯಾದ ವೇಗಿ ಬ್ರೆಟ್ ಲೀ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದರು. ಇದಾದ 2021ರ ಈ ವಿಶ್ವಕಪ್ ಟೂರ್ನಿಯಲ್ಲಿ ನಮಿಬಿಯಾದ ಕರ್ಟಿಸ್‌ ಚಾಂಪರ್ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದರು.

ಹರಿಣಗಳ ಪಾಲಿಗೆ ಆಪತ್ಭಾಂಧವನಾದ ಮಿಲ್ಲರ್ ಕಿಲ್ಲರ್: ತೆಂಬಾ ಬವುಮಾ ಹಾಗೂ ಡ್ವೇನ್ ಪ್ರಿಟೋರಿಯಸ್‌ ವಿಕೆಟ್‌ ಕಬಳಿಸಿದಾಗ ಲಂಕಾ ಪಾಳಯದಲ್ಲಿ ಸಂಭ್ರಮ ಮನೆ ಮಾಡಿತ್ತು.ಕೊನೆಯ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲ್ಲಲು 15 ರನ್‌ಗಳ ಅಗತ್ಯವಿತ್ತು. 20ನೇ ಓವರ್‌ ಬೌಲಿಂಗ್ ಮಾಡಲಿಳಿದ ಲಹಿರು ಕುಮಾರ ಎಸೆತದಲ್ಲಿ ಕಗಿಸೋ ರಬಾಡ (Kagiso Rabada) 1 ರನ್‌ ಗಳಿಸಿದರು. ಸ್ಟ್ರೈಕ್‌ಗೆ ಬಂದ ಡೇವಿಡ್ ಮಿಲ್ಲರ್ 2 ಎಸೆತಗಳಲ್ಲಿ ಸತತ 2 ಸಿಕ್ಸರ್ ಸಿಡಿಸುವ ಮೂಲಕ ಅಫ್ರಿಕಾ ಗೆಲುವಿನ ಹಾದಿ ಸುಗಮಗೊಳಿಸಿದರು. ಕೊನೆಯ 3 ಎಸೆತಗಳಲ್ಲಿ 2 ರನ್ ಅಗತ್ಯವಿತ್ತು. ನಾಲ್ಕನೇ ಎಸೆತದಲ್ಲಿ ಮಿಲ್ಲರ್ ಒಂದು ರನ್‌ ಗಳಿಸಿದರು. 5ನೇ ಎಸೆತದಲ್ಲಿ ರಬಾಡ ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ಕೇಕೆ ಹಾಕುವಂತೆ ಮಾಡಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಶ್ರೀಲಂಕಾ ಕ್ರಿಕೆಟ್ ತಂಡವು ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಆರಂಭಿಕ ಬ್ಯಾಟ್ಸ್‌ಮನ್ ಪತುಮ ನಿಸ್ಸಾಂಕ(72), ಅಸಲಂಕಾ(21) ಹಾಗೂ ನಾಯಕ ದಸುನ್ ಶನಕ(11) ಹೊರತುಪಡಿಸಿ ಉಳಿದ್ಯಾವ ಲಂಕಾ ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸಲು ಸಫಲವಾಗಲಿಲ್ಲ. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಶ್ರೀಲಂಕಾ 10 ವಿಕೆಟ್ ಕಳೆದುಕೊಂಡು 142 ರನ್‌ ಗಳಿಸಿತ್ತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

U19 Asia Cup: ಮತ್ತೆ ಸಿಕ್ಸರ್ ಸುರಿಮಳೆ ಹರಿಸಿ ಸ್ಪೋಟಕ ಶತಕ ಚಚ್ಚಿದ ವೈಭವ್ ಸೂರ್ಯವಂಶಿ!
ವಿಜಯ್‌ ಹಜಾರೆ ಟ್ರೋಫಿ: ಒಂದೂವರೆ ದಶಕದ ಬಳಿಕ ಡೆಲ್ಲಿ ಪರ ವಿರಾಟ್ ಕೊಹ್ಲಿ ಮೈದಾನಕ್ಕೆ! ಬೆಂಗಳೂರಲ್ಲಿ ನಡೆಯುತ್ತೆ ಮ್ಯಾಚ್‌