T20 World Cup: ಆಸೀಸ್ ಮಾರಕ ದಾಳಿ, ಆಫ್ರಿಕಾ ಎದುರು ಗೆಲ್ಲಲು 119 ರನ್‌ ಗುರಿ

By Suvarna NewsFirst Published Oct 23, 2021, 5:21 PM IST
Highlights

* ದಕ್ಷಿಣ ಆಫ್ರಿಕಾ ಎದುರು ಆಸ್ಟ್ರೇಲಿಯಾ ಬೌಲರ್‌ಗಳ ಮಿಂಚಿನ ದಾಳಿ

* ಸಂಘಟಿತ ಪ್ರದರ್ಶನದ ಮೂಲಕ ಮಿಂಚಿದ ಆಸೀಸ್‌ ಬೌಲರ್‌ಗಳು

* ಮೊದಲ ಪಂದ್ಯ ಗೆಲ್ಲಲು ಆಸ್ಟ್ರೇಲಿಯಾಗೆ ಕೇವಲ 119 ರನ್‌ಗಳ ಗುರಿ

ಅಬುಧಾಬಿ(ಅ.23): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಉದ್ಘಾಟನಾ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡವು 9 ವಿಕೆಟ್ ಕಳೆದುಕೊಂಡು ಕೇವಲ 118 ರನ್ ಬಾರಿಸಿದ್ದು, ಕಾಂಗರೂ ಪಡೆಗೆ ಗೆಲ್ಲಲು ಸಾಧಾರಣ ಗುರಿ ನೀಡಿದೆ. ಹರಿಣಗಳ ಪರ ಏಯ್ಡನ್ ಮಾರ್ಕ್‌ರಮ್ 40 ರನ್‌ ಬಾರಿಸದಿದ್ದರೆ ದಕ್ಷಿಣ ಆಫ್ರಿಕಾ ತಂಡವು ಮೂರಂಕಿ ಮೊತ್ತ ದಾಖಲಿಸುವುದು ಅನುಮಾನ ಎನಿಸಿತ್ತು. 

ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್‌ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್‌ ಮಾಡಿದ ಆಸೀಸ್‌ ವೇಗಿಗಳು ಪವರ್‌ ಪ್ಲೇನಲ್ಲೇ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳನ್ನು ಬಲಿ ಪಡೆಯುವ ಮೂಲಕ ಹರಿಣಗಳ ಪಡೆಗೆ ಶಾಕ್‌ ನೀಡಿದರು. ಪಂದ್ಯದ ಎರಡನೇ ಓವರ್‌ ಬೌಲಿಂಗ್ ಮಾಡುವ ಜವಾಬ್ದಾರಿ ವಹಿಸಿಕೊಂಡ ಆಫ್‌ಸ್ಪಿನ್ನರ್ ಗ್ಲೆನ್‌ ಮ್ಯಾಕ್ಸ್‌ವೆಲ್‌, ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿ ಆಸೀಸ್‌ಗೆ ಮೊದಲ ಯಶಸ್ಸು ದಕ್ಕಿಸಿಕೊಟ್ಟರು. ಬವುಮಾ 12 ರನ್‌ ಬಾರಿಸಿ ಪೆವಿಲಿಯನ್ ಸೇರಿದರು. ಇನ್ನು ಅಭ್ಯಾಸ ಪಂದ್ಯದಲ್ಲಿ ಶತಕ ಚಚ್ಚಿದ್ದ ರಾಸ್ಸಿ ವ್ಯಾನ್ ಡರ್‌ ಡುಸೇನ್(2) ಹಾಗೂ ಕ್ವಿಂಟನ್ ಡಿ ಕಾಕ್ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಜೋಶ್ ಹೇಜಲ್‌ವುಡ್‌ ಯಶಸ್ವಿಯಾದರು. ಈ ವೇಳೆಗೆ ದಕ್ಷಿಣ ಆಫ್ರಿಕಾ 4.1 ಓವರ್‌ನಲ್ಲಿ 23 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

T20 World Cup: ಉದ್ಘಾಟನಾ ಪಂದ್ಯದಲ್ಲಿ ಆಫ್ರಿಕಾ ಎದುರು ಟಾಸ್ ಗೆದ್ದ ಆಸೀಸ್ ಬೌಲಿಂಗ್ ಆಯ್ಕೆ

ಕೈಕೊಟ್ಟ ಮಧ್ಯಮ ಕ್ರಮಾಂಕ: ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬೇಗನೇ ವಿಕೆಟ್ ಒಪ್ಪಿಸಿದ್ದರಿಂದ ಹರಿಣಗಳ ಪಡೆ ಆತಂಕಕ್ಕೆ ಸಿಲುಕಿತು. ಈ ವೇಳೆ ನಾಲ್ಕನೇ ವಿಕೆಟ್‌ಗೆ ಏಯ್ಡನ್ ಮಾರ್ಕ್‌ರಮ್ ಹಾಗೂ ಹೆನ್ರಿಚ್‌ ಕ್ಲಾಸೆನ್ ಜೋಡಿ 23 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಕೊಂಚ ಆಸರೆಯಾದರು. ಕ್ಲಾಸೆನ್‌ 13 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮಿಲ್ಲರ್ ಆಟ ಕೇವಲ 16 ರನ್‌ಗಳಿಗೆ ಸೀಮಿತವಾಯಿತು. ಇನ್ನು ಆಲ್ರೌಂಡರ್ ಡ್ವೇನ್‌ ಪ್ರಿಟೋರಿಯಸ್‌(01) ಹಾಗೂ ಕೇಶವ್ ಮಹರಾಜ್(0) ಒಂದಂಕಿ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿ ನಿರಾಸೆ ಅನುಭವಿಸಿದರು.

ಏಯ್ಡನ್‌ ಮಾರ್ಕ್‌ರಮ್‌ ಏಕಾಂಗಿ ಹೋರಾಟ: ಒಂದು ಕಡೆ ನಿರಂತರ ವಿಕೆಟ್‌ ಬೀಳುತ್ತಿದ್ದರೂ, ಮತ್ತೊಂದೆಡೆ ಜವಾಬ್ದಾರಿಯುತ ಬ್ಯಾಟಿಂಗ್ ಮಾಡುವಲ್ಲಿ ಏಯ್ಡನ್ ಮಾರ್ಕ್‌ರಮ್ ಯಶಸ್ವಿಯಾದರು. ಒಟ್ಟು 36 ಎಸೆತಗಳನ್ನು ಎದುರಿಸಿದ ಮಾರ್ಕ್‌ರಮ್ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 40 ರನ್‌ ಬಾರಿಸಿ 18ನೇ ಓವರ್‌ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ಮಿಚೆಲ್‌ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು.

ಮಿಂಚಿದ ಆಸೀಸ್‌ ಬೌಲರ್‌ಗಳು: ಆಸ್ಟ್ರೇಲಿಯಾ ಬೌಲರ್‌ಗಳು ದಕ್ಷಿಣ ಆಫ್ರಿಕಾ ವಿರುದ್ದ ಆರಂಭದಲ್ಲೇ ವಿಕೆಟ್ ಕಬಳಿಸುವ ಮೂಲಕ ಹರಿಣಗಳ ರನ್‌ ವೇಗಕ್ಕೆ ಕಡಿವಾಣ ಹಾಕಿದರು. ವೇಗಿ ಜೋಶ್ ಹೇಜಲ್‌ವುಡ್ 19 ರನ್ ನೀಡಿ 2 ವಿಕೆಟ್ ಪಡೆದರೆ, ಆಡಂ ಜಂಪಾ 21 ರನ್ ನೀಡಿ 2 ವಿಕೆಟ್ ಪಡೆದರು. ಮಿಚೆಲ್ ಸ್ಟಾರ್ಕ್ ಕೊಂಚ ದುಬಾರಿಯಾದರೂ ಸಹಾ ರನ್‌ ನೀಡಿ ವಿಕೆಟ್ ಪಡೆದರು. ಇನ್ನು ಪ್ಯಾಟ್‌ ಕಮಿನ್ಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ತಲಾ ಒಂದೊಂದು ವಿಕೆಟ್ ಪಡೆದರು.

click me!