ಸಿಡ್ನಿ ಮೈದಾನದಲ್ಲಿಂದು ಇಂಗ್ಲೆಂಡ್ ಹಾಗೂ ಶ್ರೀಲಂಕಾ ಸೆಣಸಾಟ
ಇಂಗ್ಲೆಂಡ್ ಗೆದ್ದರೇ ಜೋಸ್ ಬಟ್ಲರ್ ಪಡೆಯ ಸೆಮೀಸ್ ಹಾದಿ ಸುಗಮ
ಇನ್ನು ಲಂಕಾ ಗೆದ್ದರೇ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಸೆಮೀಸ್‌ಗೆ ಲಗ್ಗೆ
ಸಿಡ್ನಿ(ನ.05): ಟಿ20 ವಿಶ್ವಕಪ್‌ನಲ್ಲಿ ಗುಂಪು 1ರಿಂದ ಸೆಮಿಫೈನಲ್ ಪ್ರವೇಶಿಸುವ 2ನೇ ತಂಡ ಯಾವುದು ಎಂಬುದು ಶನಿವಾರ ಅಧಿಕೃತಗೊಳ್ಳಲಿದೆ. ಗುಂಪು ಹಂತದ ಕೊನೆ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದ ಬಳಿಕ ಮಾಜಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ಹಾಲಿ ಚಾಂಪಿಯನ್ ಆಸ್ಪ್ರೇಲಿಯಾ ತಂಡಗಳ ಭವಿಷ್ಯ ನಿರ್ಧಾರವಾಗಲಿದೆ.
ಸದ್ಯ ಗುಂಪು 1ರಲ್ಲಿ ನ್ಯೂಜಿಲೆಂಡ್ 7 ಅಂಕದ ಜೊತೆ ಅತ್ಯುತ್ತಮ ನೆಟ್ ರನ್‌ರೇಟ್ ಕೂಡಾ ಹೊಂದಿದ್ದು, ಸೆಮೀಸ್ ಸ್ಥಾನ ಅಧಿಕೃತಗೊಳಿಸಿದೆ. 2ನೇ ಸ್ಥಾನಕ್ಕಾಗಿ ಸದ್ಯ 7 ಅಂಕ ಹೊಂದಿರುವ ಆಸೀಸ್, 5 ಅಂಕ ಹೊಂದಿರುವ ಇಂಗ್ಲೆಂಡ್ ನಡುವೆ ಪೈಪೋಟಿ ಇದೆ. ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧ ಗೆದ್ದರೆ 7 ಅಂಕವಾಗಲಿದೆ. ಆದರೆ ನೆಟ್ ರನ್‌ರೇಟ್‌ನಲ್ಲಿ ಆಸೀಸ್‌ಗಿಂತ ಮುಂದಿರುವ ಕಾರಣ ಇಂಗ್ಲೆಂಡ್ ಸೆಮೀಸ್‌ಗೇರಲಿದೆ.
undefined
ಒಂದು ವೇಳೆ ಇಂಗ್ಲೆಂಡ್ ಸೋತರೆ ಆಗ ಆಸೀಸ್‌ಗೆ ಸೆಮೀಸ್ ಟಿಕೆಟ್ ಸಿಗಲಿದೆ. ಪಂದ್ಯ ಮಳೆಯಿಂದಾಗಿ ರದ್ದುಗೊಂಡರೆ ಇಂಗ್ಲೆಂಡ್ ಹೊರಬೀಳಲಿದ್ದು, ಆಸೀಸ್ ಸೆಮೀಸ್‌ಗೇರಲಿದೆ. ಇನ್ನು, ಶುಕ್ರವಾರ ಆಫ್ಘಾನಿಸ್ತಾನ ವಿರುದ್ಧ ಆಸ್ಪ್ರೇಲಿಯಾ ಗೆಲ್ಲುವ ಮೂಲಕ ಶ್ರೀಲಂಕಾದ ನಾಕೌಟ್ ಬಾಗಿಲು ಬಂದಾಗಿದ್ದು, ತಂಡ ಈಗ ಪ್ರತಿಷ್ಠೆಗಾಗಿ ಆಡಬೇಕಿದೆ. ಆದರೆ ಲಂಕಾದ ಗೆಲುವಿಗೆ ಆಸೀಸ್ ಆಟಗಾರರು ಪ್ರಾರ್ಥಿಸುತ್ತಿದ್ದಾರೆ.
ಇಂಗ್ಲೆಂಡ್ ಪಾಲಿಗೆ ಈ ಪಂದ್ಯವು ಒಂದು ರೀತಿ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿದ್ದು, ಬ್ಯಾಟಿಂಗ್‌ನಲ್ಲಿ ಜೋಸ್ ಬಟ್ಲರ್, ಅಲೆಕ್ಸ್ ಹೇಲ್ಸ್, ಡೇವಿಡ್ ಮಲಾನ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್ಸ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ನೆಚ್ಚಿಕೊಂಡಿದೆ. ಇನ್ನು ಆಲ್ರೌಂಡರ್‌ಗಳಾದ ಮೋಯಿನ್ ಅಲಿ, ಸ್ಯಾಮ್ ಕರ್ರನ್ ಕೂಡಾ ಮಿಂಚುವ ವಿಶ್ವಾಸದಲ್ಲಿದ್ದಾರೆ. ಇನ್ನು ಬೌಲರ್‌ಗಳಾದ ಮಾರ್ಕ್ ವುಡ್, ಕ್ರಿಸ್ ವೋಕ್ಸ್ ಹಾಗೂ ಆದಿಲ್ ರಶೀದ್ ಲಂಕಾ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.
ಇನ್ನೊಂದೆಡೆ ಈಗಾಗಲೇ ಸೆಮೀಸ್ ರೇಸ್‌ನಿಂದ ಹೊರಬಿದ್ದಿರುವ ಶ್ರೀಲಂಕಾ ತಂಡವು ಗೆಲುವಿನೊಂದಿಗೆ ಅಭಿಯಾನ ಮುಗಿಸಲು ಎದುರು ನೋಡುತ್ತಿದೆ. ಹೀಗಾಗಿ ಕುಸಾಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಭನುಕಾ ರಾಜಪಕ್ಸಾ ಹಾಗೂ ದಶುನ್ ಶನಕಾ ಬ್ಯಾಟಿಂಗ್‌ನಲ್ಲಿ ಅಬ್ಬರಿಸಲು ಎದುರು ನೋಡುತ್ತಿದ್ದಾರೆ. ಇನ್ನು ಮಾಂತ್ರಿಕ ಸ್ಪಿನ್ನರ್‌ಗಳಾದ ವನಿಂದು ಹಸರಂಗ ಹಾಗೂ ಮಹೀಶ್ ತೀಕ್ಷಣ ಇಂಗ್ಲೆಂಡ್ ಬ್ಯಾಟರ್‌ಗಳಿಗೆ ಸವಾಲಾಗುವ ಸಾಧ್ಯತೆಯಿದೆ.
ಇಂಗ್ಲೆಂಡ್ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಪಂದ್ಯಕ್ಕೆ ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದ್ದು, ಟಾಸ್ ಮಹತ್ತರ ಪಾತ್ರವಹಿಸುವ ಸಾಧ್ಯತೆಯಿದೆ. ಯಾಕೆಂದರೆ, ಪ್ರಸಕ್ತ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ 5 ಪಂದ್ಯಗಳು ನಡೆದಿದ್ದೂ, ಐದೂ ಪಂದ್ಯಗಳಲ್ಲೂ ಮೊದಲು ಬ್ಯಾಟ್ ಮಾಡಿದ ತಂಡ ಗೆಲುವಿನ ನಗೆ ಬೀರಿದೆ. ಹೀಗಾಗಿ ಇಂದು ಕೂಡಾ ಟಾಸ್ ಗೆದ್ದ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಸಂಭಾವ್ಯ ತಂಡಗಳು ಹೀಗಿವೆ ನೋಡಿ
ಇಂಗ್ಲೆಂಡ್: ಜೋಸ್ ಬಟ್ಲರ್(ನಾಯಕ), ಅಲೆಕ್ಸ್ ಹೇಲ್ಸ್, ಡೇವಿಡ್ ಮಲಾನ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಮೋಯಿನ್ ಅಲಿ, ಸ್ಯಾಮ್ ಕರ್ರನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್.
ಶ್ರೀಲಂಕಾ: ಪಥುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭನುಕಾ ರಾಜಪಕ್ಸಾ, ದಶುನ್ ಶನಕಾ, ವನಿಂದು ಹಸರಂಗ, ಮಹೀಶ್ ತೀಕ್ಷಣ, ಪ್ರಮೋದ್ ಮದುಶನ್, ಲಹಿರು ಕುಮಾರ, ಕುಸಾನ್ ರಜಿತ.
ಪಂದ್ಯ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್‌ಸ್ಟಾರ್