ವಿವಾದಗಳ ನಡುವೆ ಟಿ20 ವಿಶ್ವಕಪ್ ಸಮರ; ಇಂದಿನಿಂದ 10ನೇ ಆವೃತ್ತಿಯ ಚುಟುಕು ವಿಶ್ವಕಪ್‌ಗೆ ಚಾಲನೆ!

Kannadaprabha News   | Kannada Prabha
Published : Feb 07, 2026, 06:12 AM IST
World Cup Trophy tour

ಸಾರಾಂಶ

2026ರ ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯ ವಹಿಸುತ್ತಿವೆ. ಆದರೆ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ವಿವಾದಗಳಿಂದಾಗಿ ಈ ಬಾರಿಯ ಟೂರ್ನಿಯು ಆರಂಭಕ್ಕೂ ಮುನ್ನವೇ ಸುದ್ದಿಯಲ್ಲಿದೆ. ಈ ಲೇಖನವು ಟೂರ್ನಿಯ ಇತಿಹಾಸ, ಸ್ವರೂಪ, ಮತ್ತು ವಿವಾದಗಳ ಸಂಪೂರ್ಣ ಚಿತ್ರಣ ನೀಡುತ್ತದೆ.

ವಿಶ್ವದೆಲ್ಲೆಡೆ ಕ್ರಿಕೆಟ್‌ ಅಭಿಮಾನಿಗಳಿಗೆ 2026ರಲ್ಲಿ ಮೊದಲ ಸಂಭ್ರಮ ಎಂಬಂತೆ ಐಸಿಸಿ ಟಿ20 ವಿಶ್ವಕಪ್‌ ಹಬ್ಬ ಆಗಮನವಾಗುತ್ತಿದೆ. 10ನೇ ಆವೃತ್ತಿಯ ಚುಟುಕು ಕ್ರಿಕೆಟ್‌ ವಿಶ್ವ ಸಮರಕ್ಕೆ ಇಂದಿನಿಂದ ಚಾಲನೆ ಸಿಗಲಿದೆ. ಆದರೆ ಈ ಬಾರಿ ವಿಶ್ವಕಪ್‌ ವಿವಾದಗಳಿಂದಲೇ ಸುದ್ದಿಯಾಗುತ್ತಿದೆ.

ಭಾರತದ 5 ಹಾಗೂ ಶ್ರೀಲಂಕಾದ 3 ನಗರಗಳ ಆತಿಥ್ಯದಲ್ಲಿ ನಡೆಯಲಿರುವ ಈ ಬಾರಿ ವಿಶ್ವಕಪ್‌ನಲ್ಲಿ 10 ತಂಡಗಳು ಕಪ್‌ಗಾಗಿ ಸೆಣಸಾಡಲಿವೆ. ಕ್ರೀಡಾಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸುವ ಟಿ20 ವಿಶ್ವಕಪ್‌ನ ಹಿನ್ನೆಲೆ ಏನು? ಪಂದ್ಯಗಳು ನಡೆಯಲಿರುವ ಕ್ರೀಡಾಂಗಣಗಳು ಯಾವುವು? ಇಷ್ಟರವರೆಗೆ ಚಾಂಪಿಯನ್‌ ಆದ ತಂಡಗಳು ಯಾವುವು? ಟೂರ್ನಿಯ ಸುತ್ತ ಗಿರಕಿ ಹೊಡೆಯುತ್ತಿರುವ ವಿವಾದಗಳೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ‘ಕನ್ನಡಪ್ರಭ’ ನಿಮ್ಮ ಮುಂದಿಡುತ್ತಿದೆ.

ಟಿ20 ವಿಶ್ವಕಪ್‌ಗೆ ಈಗ 20 ವರ್ಷದ ಸಂಭ್ರಮ

ಐಸಿಸಿ ಟಿ20 ವಿಶ್ವಕಪ್‌ ಈಗ 20 ವರ್ಷದ ಸಂಭ್ರಮದಲ್ಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ) ಮೊದಲ ಬಾರಿ ಟೂರ್ನಿ ಆಯೋಜಿಸಿದ್ದು 2007ರಲ್ಲಿ. ಅದರಲ್ಲಿ ಭಾರತ ಗೆದ್ದಿತ್ತು. 2007-2024ರ ನಡುವೆ ಒಟ್ಟು 9 ಬಾರಿ ಟಿ20 ವಿಶ್ವಕಪ್‌ ನಡೆದಿದೆ. ಪ್ರತಿ 2 ವರ್ಷಕ್ಕೊಮ್ಮೆ ಟೂರ್ನಿ ನಡೆಯುತ್ತದೆ. ಈ ಬಾರಿಯದ್ದು 10ನೇ ಆವೃತ್ತಿ. ಭಾರತ ಸೇರಿದಂತೆ ಒಟ್ಟು 6 ತಂಡಗಳು ಈವರೆಗೂ ಕನಿಷ್ಠ ಒಮ್ಮೆಯಾದರೂ ಚಾಂಪಿಯನ್‌ ಆಗಿವೆ.

ಬಾಂಗ್ಲಾ, ಪಾಕಿಸ್ತಾನದ ಕಿರಿಕ್‌: ಈ ಬಾರಿ ವಿವಾದದ್ದೇ ಸೌಂಡ್‌!

ಭಾರತ-ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲಿರುವ ಈ ಬಾರಿ ವಿಶ್ವಕಪ್‌ನಲ್ಲಿ ಪಂದ್ಯ, ಟ್ರೋಫಿ, ಸ್ಟಾರ್‌ ಆಟಗಾರರು, ಚಾಂಪಿಯನ್‌ ಟೀಮ್‌ ಅಥವಾ ಕ್ರೀಡಾಂಗಣಕ್ಕಿಂತ ಜಾಸ್ತಿ ಪಾಕಿಸ್ತಾನ, ಬಾಂಗ್ಲಾದೇಶ ವಿವಾದವೇ ಹೆಚ್ಚು ಸದ್ದು ಮಾಡುತ್ತಿದೆ. ಬಾಂಗ್ಲಾ ವೇಗಿ ಮುಸ್ತಾಫಿಜುರ್‌ ರೆಹಮಾನ್‌ರನ್ನು ಐಪಿಎಲ್‌ನ ಕೋಲ್ಕತಾ ತಂಡದಿಂದ ಹೊರಗಿಟ್ಟಿದ್ದಕ್ಕೆ ಪ್ರತಿಯಾಗಿ, ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಆಡಲ್ಲ ಎಂದು ಬಾಂಗ್ಲಾ ಪಟ್ಟುಹಿಡಿಯಿತು. ಇದಕ್ಕೆ ಭದ್ರತೆ ಸಮಸ್ಯೆ ಎಂಬ ಕಾರಣ ನೀಡಿದ ಬಾಂಗ್ಲಾ, ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಬೇಕು ಎಂದು ಬೇಡಿಕೆ ಇಟ್ಟಿತು. ಆದರೆ ಇದಕ್ಕೆ ಐಸಿಸಿ ಒಪ್ಪಲಿಲ್ಲ. ಹೀಗಾಗಿ ಬಾಂಗ್ಲಾ ಟೂರ್ನಿಯಿಂದಲೇ ಹೊರಬಿತ್ತು. ಬದಲಿ ತಂಡವಾಗಿ ಸ್ಕಾಟ್ಲೆಂಡ್‌ಗೆ ಅವಕಾಶ ಲಭಿಸಿತು.

ಮತ್ತೊಂದೆಡೆ ಬಾಂಗ್ಲಾಗೆ ಬೆಂಬಲವಾಗಿ ನಿಂತಿದ್ದ ಪಾಕ್‌ ತಂಡ, ಫೆ.15ರಂದು ನಡೆಯಬೇಕಿರುವ ಭಾರತ ವಿರುದ್ಧ ಪಂದ್ಯದಲ್ಲಿ ಆಡಲ್ಲ ಎಂದು ಘೋಷಿಸಿದೆ. ಇದು ಇಡೀ ವಿಶ್ವಕಪ್‌ ಮಾತ್ರವಲ್ಲದೆ ಐಸಿಸಿ, ಪಿಸಿಬಿ, ಬಿಸಿಸಿಐ, ಲಂಕಾ ಕ್ರಿಕೆಟ್‌, ಪ್ರಾಯೋಜಕರು, ಪ್ರಸಾರಕರು, ಜಾಹೀರಾತುದಾರರ ಮೇಲೂ ಪರಿಣಾಮ ಬೀರಲಿದೆ.

ಭಾರತಕ್ಕೆ 3ನೇ ಬಾರಿ ಆತಿಥ್ಯ ಸಿಕ್ಕಿದ್ದು ಹೇಗೆ?

ಭಾರತ ಟಿ20 ವಿಶ್ವಕಪ್‌ಗೆ 3ನೇ ಬಾರಿ ಆತಿಥ್ಯ ವಹಿಸುತ್ತಿದೆ. 2016ರಲ್ಲಿ ಮೊದಲ ಬಾರಿ ಭಾರತದಲ್ಲಿ ಪಂದ್ಯಗಳು ನಡೆದಿದ್ದವು. 2021ರಲ್ಲಿ ಆತಿಥ್ಯ ಹಕ್ಕು ಭಾರತಕ್ಕೆ ಸಿಕ್ಕರೂ ಪಂದ್ಯಗಳು ಕೋವಿಡ್‌ ಕಾರಣದಿಂದಾಗಿ ಯುಎಇ ಹಾಗೂ ಒಮಾನ್‌ನಲ್ಲಿ ಆಯೋಜನೆಗೊಂಡಿದ್ದವು. ಈ ಬಾರಿ ಭಾರತ-ಶ್ರೀಲಂಕಾ ಜಂಟಿಯಾಗಿ ಟೂರ್ನಿ ನಡೆಸುತ್ತಿವೆ. ಟೂರ್ನಿ ಆಯೋಜನೆಗೆ ಆರಂಭದಲ್ಲಿ ಶ್ರೀಲಂಕಾ ಮಾತ್ರ ಆಸಕ್ತಿ ತೋರಿತ್ತು. 2021ರಲ್ಲಿ ಈ ಬಗ್ಗೆ ಘೋಷಣೆ ಹೊರಡಿಸಿದ್ದ ಐಸಿಸಿ, ಟೂರ್ನಿ ಲಂಕಾದಲ್ಲಿ ನಡೆಯುವುದಾಗಿ ತಿಳಿಸಿತ್ತು. ಆದರೆ ಟೂರ್ನಿಯ ವಿಸ್ತರಣೆ ಹಾಗೂ ಲಂಕಾದಲ್ಲಿ ಕ್ರೀಡಾಂಗಣಗಳ ಕೊರತೆಯ ಕಾರಣದಿಂದಾಗಿ ಭಾರತದ ಜಂಟಿ ಆತಿಥ್ಯದಲ್ಲಿ ವಿಶ್ವಕಪ್‌ ಆಯೋಜಿಸಲು ಐಸಿಸಿ ನಿರ್ಧರಿಸಿತು. ಶ್ರೀಲಂಕಾ ಈ ಹಿಂದೆ 2012ರಲ್ಲಿ ವಿಶ್ವಕಪ್ ಆಯೋಜಿಸಿತ್ತು.

ರೋಹಿತ್‌ ರಾಯಭಾರಿ

ಭಾರತಕ್ಕೆ 2024ರಲ್ಲಿ ಟಿ20 ವಿಶ್ವಕಪ್‌ ತಂದುಕೊಟ್ಟಿದ್ದ ರೋಹಿತ್‌ ಶರ್ಮಾ ಈ ಬಾರಿ ಟೂರ್ನಿಯ ರಾಯಭಾರಿ. ಕಳೆದ ವರ್ಷ ನವೆಂಬರ್‌ನಲ್ಲಿ ಐಸಿಸಿ ಈ ಆಯ್ಕೆಯನ್ನು ಘೋಷಿಸಿತ್ತು. ‘ಫೀಲ್‌ ದಿ ಥ್ರಿಲ್‌’ ಎಂಬುದು ಈ ವರ್ಷದ ವಿಶ್ವಕಪ್‌ನ ಥೀಮ್‌ ಸಾಂಗ್‌.

ತಂಡಗಳ ಆಯ್ಕೆ ಹೇಗೆ?

ಆತಿಥ್ಯ ದೇಶಗಳಾದ ಭಾರತ, ಶ್ರೀಲಂಕಾ ಹಾಗೂ 2024ರ ವಿಶ್ವಕಪ್‌ನ ಅಗ್ರ-7 ತಂಡಗಳು ಈ ಬಾರಿ ವಿಶ್ವಕಪ್‌ಗೆ ನೇರ ಅರ್ಹತೆ ಪಡೆದಿವೆ. ಈ ಪೈಕಿ ಬಾಂಗ್ಲಾದೇಶ ಈಗ ಹೊರಬಿದ್ದಿದೆ. 2024ರ ಜೂನ್‌ಗೆ ಅನ್ವಯವಾಗುವಂತೆ ಐಸಿಸಿ ರ್‍ಯಾಂಕಿಂಗ್‌ ಆಧಾರದಲ್ಲಿ 3 ತಂಡಗಳು ವಿಶ್ವಕಪ್‌ ಪ್ರವೇಶಿಸಿವೆ. ಬಾಂಗ್ಲಾ ಹೊರಬಿದ್ದ ಕಾರಣ ರ್‍ಯಾಂಕಿಂಗ್‌ ಆಧಾರದಲ್ಲಿ ಸ್ಕಾಟ್ಲೆಂಡ್‌ಗೆ ಅವಕಾಶ ಲಭಿಸಿತು. ಅಲ್ಲಿಗೆ 12 ತಂಡಗಳಾದವು. ಉಳಿದ 8 ತಂಡಗಳು ಆಯ್ಕೆಯಾಗಿದ್ದು ಪ್ರಾದೇಶಿಕ ಅರ್ಹತಾ ಟೂರ್ನಿ ಮೂಲಕ. ಅಮೆರಿಕ ಖಂಡದ 1, ಯುರೋಪ್‌ನ 2, ಆಫ್ರಿಕಾದ 2 ಹಾಗೂ ಏಷ್ಯಾ ಪೆಸಿಫಿಕ್‌ನ 3 ತಂಡಗಳು ಟೂರ್ನಿ ಪ್ರವೇಶಿಸಿವೆ.

ಟೂರ್ನಿ ಮಾದರಿ ಹೇಗೆ?

ಟೂರ್ನಿಯಲ್ಲಿ ಒಟ್ಟು 20 ತಂಡಗಳಿವೆ. ಇದನ್ನು ತಲಾ 5 ತಂಡಗಳ 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಗುಂಪಿನಲ್ಲಿ ಪ್ರತಿ ತಂಡಗಳು ಇತರ 4 ತಂಡಗಳ ವಿರುದ್ಧ ಒಮ್ಮೆ ಆಡಲಿವೆ. ಪ್ರತಿ ಗುಂಪಿನ ಅಗ್ರ-2 ತಂಡಗಳು ಸೂಪರ್‌-8 ಹಂತ ಪ್ರವೇಶಿಸಲಿವೆ. ಈ 8 ತಂಡಗಳನ್ನು ಮತ್ತೆ ತಲಾ 4 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗುತ್ತದೆ. ಗುಂಪಿನ ತಂಡಗಳು ತಲಾ 1 ಬಾರಿ ಪರಸ್ಪರ ಆಡಲಿವೆ. ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆದ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಸೆಮೀಸ್‌ನಲ್ಲಿ ಗೆದ್ದ ತಂಡಗಳು ಫೈನಲ್‌ ಆಡಲಿವೆ.

ಈವರೆಗಿನ ಟಿ20 ವಿಶ್ವಕಪ್‌ ವಿಜೇತರು

2007:

ಚಾಂಪಿಯನ್‌: ಭಾರತ

ರನ್ನರ್‌-ಅಪ್‌: ಪಾಕಿಸ್ತಾನ

2009:

ಚಾಂಪಿಯನ್‌: ಪಾಕಿಸ್ತಾನ

ರನ್ನರ್‌-ಅಪ್‌: ಶ್ರೀಲಂಕಾ

2010:

ಚಾಂಪಿಯನ್‌: ಇಂಗ್ಲೆಂಡ್‌

ರನ್ನರ್‌-ಅಪ್‌: ಆಸ್ಟ್ರೇಲಿಯಾ

2012:

ಚಾಂಪಿಯನ್‌: ವೆಸ್ಟ್‌ಇಂಡೀಸ್

ರನ್ನರ್‌-ಅಪ್‌: ಶ್ರೀಲಂಕಾ

2014:

ಚಾಂಪಿಯನ್‌: ಶ್ರೀಲಂಕಾ

ರನ್ನರ್‌-ಅಪ್‌: ಭಾರತ

2016:

ಚಾಂಪಿಯನ್‌: ವೆಸ್ಟ್‌ಇಂಡೀಸ್‌

ರನ್ನರ್‌-ಅಪ್‌: ಇಂಗ್ಲೆಂಡ್‌

2021:

ಚಾಂಪಿಯನ್‌: ಆಸ್ಟ್ರೇಲಿಯಾ

ರನ್ನರ್‌-ಅಪ್‌: ನ್ಯೂಜಿಲೆಂಡ್‌

2022

ಚಾಂಪಿಯನ್‌: ಇಂಗ್ಲೆಂಡ್‌

ರನ್ನರ್‌-ಅಪ್‌: ಪಾಕಿಸ್ತಾನ

2024:

ಚಾಂಪಿಯನ್‌: ಭಾರತ

ರನ್ನರ್‌-ಅಪ್‌: ದಕ್ಷಿಣ ಆಫ್ರಿಕಾ

ಪಂದ್ಯಗಳಿಗೆ ಆತಿಥ್ಯ ವಹಿಸಲಿರುವ ಕ್ರೀಡಾಂಗಣಗಳು

1. ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್‌

ಪಂದ್ಯಗಳು: 7 (ಫೈನಲ್‌ ಸೇರಿ)

ಆಸನ ಸಾಮರ್ಥ್ಯ: 132000

2. ಚೆಪಾಕ್ ಕ್ರೀಡಾಂಗಣ, ಚೆನ್ನೈ

ಪಂದ್ಯಗಳು: 7

ಆಸನ ಸಾಮರ್ಥ್ಯ: 39000

3. ಅರುಣ್ ಜೇಟ್ಲಿ ಕ್ರೀಡಾಂಗಣ, ನವದೆಹಲಿ

ಪಂದ್ಯಗಳು: 6

ಆಸನ ಸಾಮರ್ಥ್ಯ: 55000

4. ಈಡನ್‌ ಗಾರ್ಡನ್ಸ್‌, ಕೋಲ್ಕತಾ

ಪಂದ್ಯಗಳು: 7 (ಸೆಮಿಫೈನಲ್‌ ಸೇರಿ)

ಆಸನ ಸಾಮರ್ಥ್ಯ: 68000

5. ವಾಂಖೇಡೆ ಕ್ರೀಡಾಂಗಣ, ಮುಂಬೈ

ಪಂದ್ಯಗಳು: 8 (ಸೆಮಿಫೈನಲ್‌ ಸೇರಿ)

ಆಸನ ಸಾಮರ್ಥ್ಯ: 33108

6. ಆರ್‌.ಪ್ರೇಮದಾಸ ಕ್ರೀಡಾಂಗಣ(ಆರ್‌ಪಿಎಸ್‌), ಕೊಲಂಬೊ

ಪಂದ್ಯಗಳು: 10 (ಸೆಮಿ, ಫೈನಲ್‌ ಸೇರಿ)

ಆಸನ ಸಾಮರ್ಥ್ಯ: 35000

7. ಸಿಂಹಳೀಸ್‌ ಸ್ಪೋರ್ಟ್ಸ್‌ ಕ್ಲಬ್‌(ಎಸ್‌ಎಸ್‌ಸಿ), ಕೊಲಂಬೊ

ಪಂದ್ಯಗಳು: 5

ಆಸನ ಸಾಮರ್ಥ್ಯ: 10,000

8. ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣ, ಕ್ಯಾಂಡಿ

ಪಂದ್ಯಗಳು: 7

ಆಸನ ಸಾಮರ್ಥ್ಯ: 35000

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತಕ್ಕೆ 6ನೇ ಅ19 ವಿಶ್ವಕಪ್ ಟ್ರೋಫಿ, 1988ರಿಂದ 2026ರ ವರೆಗೆ ಕಪ್ ಗೆದ್ದ ತಂಡಗಳ ಫುಲ್ ಲಿಸ್ಟ್
ಒಂದೇ ಪಂದ್ಯದಲ್ಲಿ 5 ವಿಶ್ವದಾಖಲೆ, ಕ್ರಿಕೆಟ್ ಜಗತ್ತನ್ನೇ ಬೆಚ್ಚಿ ಬೀಳಿಸಿದ ಯುವ ಆಟಗಾರ ವೈಭವ್