
ದುಬೈ (ಆ.22) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆ ಕ್ರಿಕೆಟ್ ಇತಿಹಾಸದಲ್ಲಿ ಮಾತ್ರವಲ್ಲ ರಾಜ್ಯಕ್ಕೆ ಕಪ್ಪು ಚುಕ್ಕೆಯಾಗಿದೆ. ಆರ್‌ಸಿಬಿ ಟ್ರೋಫಿ ಗೆದ್ದ ಸಂಭ್ರಮಾಚರಣೆಯಲ್ಲಿ ದುರಂತ ಸಂಭವಿಸಿ 11 ಮಂದಿ ಮೃತಪಟ್ಟಿದ್ದರು. ಈ ಘಟನೆ ಬಳಿಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಡಳಿತ ಮಂಡಳಿ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಪ್ರಕರಣ ಎದುರಿಸುತ್ತಿದ್ದಾರೆ. ದುರಂತದ ಬಳಿಕ ಇದೀಗ ಐಸಿಸಿ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಶಾಕ್ ನೀಡಿದೆ. ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯ ಪರಿಷ್ಕೃತ ವೇಳಾಪಟ್ಟ ಪ್ರಕಟಗೊಂಡಿದೆ. ಮೊದಲು ಪ್ರಕಟಿಸಿದ್ದ ವೇಳಾಪಟ್ಟಿಯಲ್ಲಿ ಬೆಂಗಳೂರು ಹಲವು ಪಂದ್ಯಗಳಿಗೆ ಆತಿಥ್ಯವಹಿಸಿತ್ತು. ಆದರೆ ಇದೀಗ ಹೊಸ ಪಟ್ಟಿ ಬಿಡುಗಡೆ ಮಾಡಿದ್ದು, ಬೆಂಗಳೂರು ಪಂದ್ಯಗಳನ್ನು ಸ್ಥಳಾಂತರ ಮಾಡಲಾಗಿದೆ.
ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಗೆ ಭಾರತ ಹಾಗೂ ಶ್ರೀಲಂಕಾ ಆತಿಥ್ಯವಹಿಸಿದೆ. ಭಾರತದ ಪಂದ್ಯಗಳ ಪೈಕಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಪ್ರಮುಖ ತಾಣವಾಗಿತ್ತು. ಭಾರತ ಹಾಗೂ ಶ್ರೀಲಂಕಾ ನಡುವಿನ ಪಂದ್ಯಕ್ಕೂ ಚಿನ್ನಸ್ವಾಮಿ ಕ್ರೀಡಾಂಗಣ ಪಂದ್ಯದಲ್ಲಿ ಆಯೋಜಿಸಲಾಗಿತ್ತು. ಆದರೆ ಚಿನ್ನಸ್ವಾಮಿ ಕಾಲ್ತುಳಿತದ ಬಳಿಕ ಐಸಿಸಿ ವೇಳಾಪಟ್ಟಿ ಪರಿಷ್ಕರಿಸುವುದಾಗಿ ಹೇಳಿತ್ತು. ಇದೀಗ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ್ದು, ಬೆಂಗಳೂರು ಪಂದ್ಯಗಳನ್ನು ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ.
ಸೆಪ್ಟೆಂಬರ್ 30 ರಿಂದು ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿ ಆರಂಭಗೊಳ್ಳುತ್ತಿದೆ. ನವೆಂಬರ್ 2 ರಂದು ಫೈನಲ್ ಪಂದ್ಯ ಆಯೋಜನೆಗೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ಕಾರಣ, ಜೊತೆಗೆ ಭದ್ರತೆ, ಟ್ರಾಫಿಕ್ ಮ್ಯಾನೇಜ್ಮೆಂಟ್, ಕಾಲ್ತುಳಿತ ಸೇರಿದಂತೆ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಐಸಿಸಿ ವೇಳಾಪಟ್ಟಿ ಪರಿಷ್ಕರಿಸಿ ಬೆಂಗಳೂರು ಪಂದ್ಯಗಳನ್ನು ಸ್ಥಳಾಂತರಿಸಿದೆ. ಅನಿವಾರ್ಯ ಕಾರಣಗಳಿಂದ ಐಸಿಸಿ ಪಂದ್ಯದ ವೇಳಾಪಟ್ಟಿ ಬದಲಾಗಿದೆ. ಇದೀಗ ಐದು ವಿಶ್ವ ದರ್ಜೆ ಕ್ರೀಡಾಂಗಣದಲ್ಲಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿ ಆಯೋಜಿಸಲಾಗಿದೆ. ಮಹಿಳಾ ಆಟಗಾರ್ತಿಯರಿಗೆ ಹಾಗೂ ಅಭಿಮಾನಿಗಳಿಗೆ ಉತ್ತಮ ಮನರಂಜನೆ ಸಿಗಲಿದೆ. ಎಲ್ಲಾ ತಯಾರಿಗಳು ಪೂರ್ಣಗೊಂಡಿದೆ. ಮಹತ್ವದ ಹೋರಾಟಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಎಂದು ಐಸಿಸಿ ಹೇಳಿದೆ.
ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಕುಳಿತು ಪಂದ್ಯ ವೀಕ್ಷಿಸಲು ಸಾಧ್ಯವಿಲ್ಲ. ಸರಿಸುಮಾರು 20 ಸಾವಿರು ಅಭಿಮಾನಿಗಳು ಪಂದ್ಯ ವೀಕ್ಷಿಸಬಹುದು. ಕ್ರೀಡಾಂಗಣ ಚಿಕ್ಕದಾಗಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದರೆ ನಿಯಂತ್ರಣ ಕಷ್ಟವಾಗಲಿದೆ. ಬೆಂಗಳೂರು ಪ್ರತಿ ಪಂದ್ಯಕ್ಕೂ ಕ್ಕಿಕ್ಕಿರಿದು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುತ್ತಾರೆ. ಹೀಗಾಗಿ ಅಪಾಯದ ಸಾಧ್ಯತೆ ಹೆಚ್ಚು ಎಂದು ಐಸಿಸಿ ಪಂದ್ಯದ ಸ್ಥಳ ಬದಲಾವಣೆ ಮಾಡಿದೆ.
ನವೆಂಬರ್ 2ರಂದು ನಡೆಯಲಿರುವ ಫೈನಲ್ ಪಂದ್ಯದ ಕ್ರೀಡಾಂಗಣ ಇನ್ನೂ ಅಂತಿಮಗೊಂಡಿಲ್ಲ. ಶ್ರೀಲಂಕಾದ ಕೊಲೊಂಬೊ ಅಥವಾ ಮುಂಬೈನಲ್ಲಿ ಪಂದ್ಯ ಆಯೋಜಿಸಲು ಐಸಿಸಿ ಮುಂದಾಗಿದೆ. ಲೀಗ್ ಹಂತದ ಪಂದ್ಯಗಳು ಅಂತಿಮ ಹಂತಕ್ಕೆ ತಲುಪಿದಾಗ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದ ವೇಳಾಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.