
ಕೋಲ್ಕತಾ(ಜು.11): ಬರೋಬ್ಬರಿ 12 ವರ್ಷಗಳ ಬಳಿಕ ಭಾರತದಲ್ಲಿ ಮತ್ತೊಮ್ಮೆ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆಯೋಜನೆಗೊಂಡಿದೆ. ಮುಂಬರುವ ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಜರುಗಲಿದೆ. ಇದೇ ಮೊದಲ ಬಾರಿಗೆ ಸಂಪೂರ್ಣ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸುತ್ತಿದೆ. ದೇಶದ 10 ಸ್ಟೇಡಿಯಂಗಳಲ್ಲಿ ಏಕದಿನ ವಿಶ್ವಕಪ್ ಟೂರ್ನಿ ಜರುಗಲಿದ್ದು, ಇದೀಗ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯ ಪಂದ್ಯಾವಳಿಗಳ ಟಿಕೆಟ್ ದರ ನಿಗದಿ ಪಡಿಸಲಾಗಿದೆ.
ಹೌದು, ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂಬರುವ ಏಕದಿನ ವಿಶ್ವಕಪ್‌ನ ಪಂದ್ಯಗಳ ಟಿಕೆಟ್ ಬೆಲೆಯನ್ನು ಬಂಗಾಳ ಕ್ರಿಕೆಟ್ ಸಂಸ್ಥೆ ಪ್ರಕಟಿಸಿದೆ. 63,500 ಆಸನ ಸಾಮರ್ಥ್ಯವಿರುವ ಈ ಕ್ರೀಡಾಂಗಣದಲ್ಲಿ ಸೆಮಿಫೈನಲ್ ಸೇರಿ 5 ಪಂದ್ಯಗಳು ನಡೆಯಲಿದ್ದು, ಭಾರತ-ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ಕನಿಷ್ಠ 900 ರುಪಾಯಿ ಹಾಗೂ ಗರಿಷ್ಠ 3000 ರುಪಾಯಿ ನಿಗದಿಪಡಿಸಿದೆ. ಇನ್ನು ಸೆಮೀಸ್ ಪಂದ್ಯಕ್ಕೂ ಇದೇ ಬೆಲೆ ನಿಗದಿಪಡಿಸಲಾಗಿದ್ದು, ಪಾಕಿಸ್ತಾನದ 2 ಪಂದ್ಯಗಳ ಟಿಕೆಟೆ ಬೆಲೆ ರುಪಾಯಿ 800ರಿಂದ ಆರಂಭಗೊಂಡು ರುಪಾಯಿ2200 ರ ವರೆಗೆ ಇದೆ. ಬಾಂಗ್ಲಾದೇಶ-ನೆದರ್‌ಲೆಂಡ್ಸ್ ಪಂದ್ಯಕ್ಕೆ ರು.650 ಕನಿಷ್ಠ, 1500 ರು. ಗರಿಷ್ಠ ಬೆಲೆ ನಿಗದಿಪಡಿಸಲಾಗಿದೆ.
ರಿಷಭ್ ಪಂತ್ ನಿಂದ ಆರ್ಚರ್‌ವರೆಗೆ: ಈ ಸ್ಟಾರ್ ಕ್ರಿಕೆಟಿಗರು ಏಕದಿನ ವಿಶ್ವಕಪ್ ಆಡೋದು ಡೌಟ್..!
ಐಪಿಎಲ್‌ಗಿಂತ ಚೀಪ್ ವಿಶ್ವಕಪ್ ಟಿಕೆಟ್: ಇನ್ನು ಕಳೆದ ಕೆಲ ತಿಂಗಳ ಹಿಂದಷ್ಟೇ ನಡೆದ 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯ ಪಂದ್ಯಾವಳಿಗೆ ಹೋಲಿಸಿದರೆ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದ ಟಿಕೆಟ್‌ಗಳು ತುಂಬಾ ಅಗ್ಗದ ದರ ನಿಗದಿ ಪಡಿಸಲಾಗಿದೆ. ಈ ಮೊದಲು 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ಟಿಕೆಟ್‌ಗಳ ಬೆಲೆ 25,000 ರುಪಾಯಿಗಳವರೆಗೂ ನಿಗದಿಯಾಗಿತ್ತು. ಅದಕ್ಕೆ ಹೋಲಿಸಿದರೆ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯದ ಗರಿಷ್ಠ ಟಿಕೆಟ್ ಬೆಲೆ 3000 ನಿಗದಿ ಪಡಿಸಲಾಗಿದೆ. ಇನ್ನು ಚಿನ್ನಸ್ವಾಮಿ ಸ್ಟೇಡಿಯಂ ಕೂಡಾ 5 ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ವಹಿಸಲಿದ್ದು, ಇನ್ನೂ ಟಿಕೆಟ್ ದರ ನಿಗದಿ ಪಡಿಸಿಲ್ಲ. ಸದ್ಯದಲ್ಲೇ ಬೆಂಗಳೂರಿನ ಪಂದ್ಯಗಳ ಟಿಕೆಟ್ ದರ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.
ಮುಂಬೈ, ಕೋಲ್ಕತಾದಲ್ಲಿ ಸೆಮಿಫೈನಲ್ ಪಂದ್ಯಗಳು ನವೆಂಬರ್ 15 ಹಾಗೂ 16ರಂದು ಕ್ರಮವಾಗಿ ಮುಂಬೈನ ವಾಂಖೇಡೆ ಹಾಗೂ ಕೋಲ್ಕತಾ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿವೆ. ಒಂದು ವೇಳೆ ಪಾಕಿಸ್ತಾನ ಸೆಮೀಸ್ ಪ್ರವೇಶಿಸಿದರೆ ಆ ತಂಡದ ಪಂದ್ಯ ಕೋಲ್ಕತಾದಲ್ಲಿ ನಡೆಯಲಿದೆ. ಭಾರತ ಸೆಮೀಸ್‌ಗೇರಿದರೆ ಪಂದ್ಯಕ್ಕೆ ಮುಂಬೈ ಆತಿಥ್ಯ ವಹಿಸಲಿದೆ. ಒಂದು ವೇಳೆ ಭಾರತ-ಪಾಕಿಸ್ತಾನ ಸೆಮೀಸ್‌ನಲ್ಲಿ ಎದುರಾಗುವ ಸಂದರ್ಭ ಬಂದರೆ ಪಂದ್ಯ ಕೋಲ್ಕತಾದಲ್ಲಿ ನಡೆಯಲಿದೆ ಎಂದು ಐಸಿಸಿ ತಿಳಿಸಿದೆ. ನವೆಂಬರ್ 19ರಂದು ಫೈನಲ್ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ.
46 ದಿನ, 48 ಪಂದ್ಯ: 46 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ 10 ತಂಡಗಳು ಪಾಲ್ಗೊಳ್ಳುತ್ತಿದ್ದು, ಫೈನಲ್ ಸೇರಿ ಒಟ್ಟು 48 ಪಂದ್ಯಗಳು ನಡೆಯಲಿವೆ. ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಇಂಗ್ಲೆಂಡ್, ಬಾಂಗ್ಲಾದೇಶ, ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ. ಈ 8 ತಂಡಗಳು ನೇರ ಅರ್ಹತೆ ಗಿಟ್ಟಿಸಿಕೊಂಡಿದ್ದು, ಇನ್ನೆರಡು ತಂಡಗಳಾದ ಶ್ರೀಲಂಕಾ ಹಾಗೂ ನೆದರ್‌ಲೆಂಡ್ಸ್ ತಂಡಗಳು ಅರ್ಹತಾ ಸುತ್ತಿನ ಮೂಲಕ ಪ್ರಧಾನ ಸುತ್ತಿಗೆ ಲಗ್ಗೆಯಿಟ್ಟಿವೆ.
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವೇಳಾಪಟ್ಟಿ:
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.