ಭಾರತಕ್ಕೆ ಚಾಂಪಿಯನ್ಸ್‌ ಟ್ರೋಫಿ ಗೆಲ್ಲಲು ಸವಾಲಿನ ಗುರಿ ನೀಡಿದ ಕಿವೀಸ್!

Published : Mar 09, 2025, 06:02 PM ISTUpdated : Mar 09, 2025, 06:18 PM IST
ಭಾರತಕ್ಕೆ ಚಾಂಪಿಯನ್ಸ್‌ ಟ್ರೋಫಿ ಗೆಲ್ಲಲು ಸವಾಲಿನ ಗುರಿ ನೀಡಿದ ಕಿವೀಸ್!

ಸಾರಾಂಶ

ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ಭಾರತಕ್ಕೆ 252 ರನ್‌ಗಳ ಗುರಿ ನೀಡಿದೆ. ಮಿಚೆಲ್ ಮತ್ತು ಬ್ರೇಸ್‌ವೆಲ್ ಅರ್ಧಶತಕ ಗಳಿಸಿ ತಂಡಕ್ಕೆ ನೆರವಾದರು. ಭಾರತದ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರೂ, ಕಿವೀಸ್ ಬ್ಯಾಟರ್‌ಗಳು ದಿಟ್ಟತನದಿಂದ ಆಡಿದರು. ನ್ಯೂಜಿಲೆಂಡ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಭಾರತಕ್ಕೆ 252 ರನ್‌ಗಳ ಸ್ಪರ್ಧಾತ್ಮಕ ಗುರಿ ಸಿಕ್ಕಿದೆ. ಡೇರಲ್ ಮಿಚೆಲ್ ಹಾಗೂ ಮಿಚೆಲ್ ಬ್ರೇಸ್‌ವೆಲ್ ಆಕರ್ಷಕ ಅರ್ಧಶತಕಗಳ ನೆರವಿನಿಂದ ಕಿವೀಸ್ ತಂಡವು ಮೊದಲು ಬ್ಯಾಟ್ ಮಾಡಿ ಸವಾಲಿನ ಮೊತ್ತ ಕಲೆಹಾಕಿದೆ. ಟೀಂ ಇಂಡಿಯಾ ಬೌಲರ್‌ಗಳ ಸಂಘಟಿತ ಪ್ರದರ್ಶನದ ಹೊರತಾಗಿಯೂ ದುಬೈ ಪಿಚ್‌ನಲ್ಲಿ ಕಿವೀಸ್‌ ಬ್ಯಾಟರ್‌ಗಳು ದಿಟ್ಟ ಪ್ರದರ್ಶನ ತೋರಿದ್ದಾರೆ.

ಇಲ್ಲಿನ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬ್ಯಾಟ್ ಮಾಡುವಲ್ಲಿ ಕಿವೀಸ್ ಆರಂಭಿಕರಾದ ವಿಲ್ ಯಂಗ್ ಹಾಗೂ ರಚಿನ್ ರವೀಂದ್ರ ಯಶಸ್ವಿಯಾದರು. ಮೊದಲ ವಿಕೆಟ್‌ಗೆ ಈ ಜೋಡಿ 7.5 ಓವರ್‌ಗಳಲ್ಲಿ 57 ರನ್‌ಗಳ ಜತೆಯಾಟವಾಡಿದರು. ಆದರೆ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ವರುಣ್ ಚಕ್ರವರ್ತಿ ಯಶಸ್ವಿಯಾದರು.  ವಿಲ್ ಯಂಗ್ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ರಚಿನ್ ರವೀಂದ್ರ 37 ರನ್ ಗಳಿಸಿ ಕುಲ್ದೀಪ್ ಯಾದವ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರೆ, ಮಾಜಿ ನಾಯಕ ಕೇನ್ ವಿಲಿಯಮ್ಸನ್ 11 ರನ್ ಗಳಿಸಿ ಕುಲ್ದೀಪ್‌ಗೆ ಎರಡನೇ ಬಲಿಯಾದರು. 75 ರನ್ ಗಳಿಸುವಷ್ಟರಲ್ಲಿ ಕಿವೀಸ್ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಇನ್ನು ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಲೇಥಮ್ ಬ್ಯಾಟಿಂಗ್ ಕೇವಲ 11 ರನ್‌ಗಳಿಗೆ ಸೀಮಿತವಾಯಿತು. ಇನ್ನು 5ನೇ ವಿಕೆಟ್‌ಗೆ ಡೇರಲ್ ಮಿಚೆಲ್ ಹಾಗೂ ಗ್ಲೆನ್ ಫಿಲಿಪ್ಸ್ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ಗ್ಲೆನ್ ಫಿಲಿಫ್ಸ್ 34 ರನ್ ಗಳಿಸಿ ವರುಣ್ ಚಕ್ರವರ್ತಿ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಮತ್ತೊಂದು ತುದಿಯಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಿದ ಡೇರಲ್ ಮಿಚೆಲ್ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. 101 ಎಸೆತಗಳನ್ನು ಎದುರಿಸಿದ ಡೇರಲ್ ಮಿಚೆಲ್ 3 ಬೌಂಡರಿ ಸಹಿತ 63 ರನ್ ಸಿಡಿಸಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು.

ಕೊನೆಯಲ್ಲಿ ಚುರುಕಿನ ಬ್ಯಾಟಿಂಗ್ ನಡೆಸಿದ ಮಿಚೆಲ್ ಬ್ರೇಸ್‌ವೆಲ್‌ ಕೇವಲ 40 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 53 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 250ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌