
ದುಬೈ: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಹೈವೋಲ್ಟೇಜ್ ಪಂದ್ಯವಾಗಿ ಗುರುತಿಸಿಕೊಂಡಿದ್ದ ಭಾರತ ಹಾಗೂ ಪಾಕಿಸ್ತಾನ ನಡುವಿನ ಕಾದಾಟದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 6 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಬಹುತೇಕ ತನ್ನ ಸೆಮೀಸ್ ಹಾದಿಯನ್ನು ಖಚಿತಪಡಿಸಿಕೊಂಡಿದೆ.
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಸಂಪೂರ್ಣ ಪ್ರಾಬಲ್ಯ ಮೆರೆಯಿತು. ಇನ್ನು ಭಾರತ ತಂಡದ ಗೆಲುವನ್ನು ಸಂಭ್ರಮಿಸುವುದರ ಜತೆಗೆ ಪಾಕ್ ತಂಡದ ಕುರಿತಂತೆ ಟೀಂ ಇಂಡಿಯಾ ಮಾಜಿ ಆಟಗಾರ ಅಜಯ್ ಜಡೇಜಾ ಅಚ್ಚರಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ 23ರಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವು 49.4 ಓವರ್‌ಗಳಲ್ಲಿ 241 ರನ್‌ಗಳಿಗೆ ಸರ್ವಪತನ ಕಂಡಿತು. ಸೌದ್ ಶಕೀಲ್ ಹಾಗೂ ಮೊಹಮ್ಮದ್ ರಿಜ್ವಾನ್ ಹಾಗೂ ಕೊನೆಯಲ್ಲಿ ಕುಶ್‌ದಿಲ್ ಷಾ ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳು ಪ್ರತಿರೋಧ ತೋರಲಿಲ್ಲ. ಮಾಡು ಇಲ್ಲವೇ ಮಡಿ ಎನ್ನುವಂತಿದ್ದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ನೀರಸ ಬ್ಯಾಟಿಂಗ್ ಪ್ರದರ್ಶನ ತೋರಿತು. ಇನ್ನು ಸುಲಭ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಕೇವಲ 4 ವಿಕೆಟ್ ಕಳೆದುಕೊಂಡು ಇನ್ನೂ 45 ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ವಿರಾಟ್ ಕೊಹ್ಲಿ ಅಜೇಯ ಶತಕ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದನ್ನೂ ಓದಿ: ಪಾಕಿಸ್ತಾನ ಎದುರು ಭಾರತ ಹೀನಾಯವಾಗಿ ಸೋಲುತ್ತೆ ಎಂದು ಭವಿಷ್ಯ ನುಡಿದಿದ್ದ IIT ಬಾಬಾ ಈಗ ಫುಲ್ ಟ್ರೋಲ್!
ಇನ್ನು ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ, ಈ ಪಂದ್ಯದಲ್ಲಿ ಪಾಕಿಸ್ತಾನ ಗೆಲ್ಲಬೇಕು ಎಂದು ಹೇಳಿದ್ದರು. ಟೂರ್ನಿಯು ರೋಚಕತೆಯಿಂದ ಕೂಡಿರಬೇಕಿದ್ದರೇ ಈ ಪಂದ್ಯದಲ್ಲಿ ಪಾಕ್ ಗೆಲ್ಲಬೇಕು, ಇಲ್ಲದಿದ್ದರೇ ಈ ಟೂರ್ನಿ ರೋಚಕತೆ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು.
ಇದೀಗ ಭಾರತ ತಂಡವು ಪಾಕಿಸ್ತಾನ ತಂಡವನ್ನು ಸೋಲಿಸಿದ ಬೆನ್ನಲ್ಲೇ ಜಡೇಜಾ ಮತ್ತೊಮ್ಮೆ ಅಚ್ಚರಿಯ ಹೇಳಿಕೆ ಮೂಲಕ ಗಮನ ಸೆಳೆದಿದ್ದಾರೆ. 'ಭಾರತ ತಂಡ ಈ ಪಂದ್ಯ ಜಯಿಸಿದ್ದಕ್ಕೆ ಖುಷಿಯಿದೆ. ಆದ್ರೆ ಕ್ರಿಕೆಟ್ ಸೋತಿದೆ' ಎಂದು ಜಡೇಜಾ ಹೇಳಿದ್ದಾರೆ. ನನಗೆ ಈ ಪಂದ್ಯದ ಒಟ್ಟಾರೆ ಪಂದ್ಯದ ಬಗ್ಗೆ ನನಗೆ ಬೇಸರವಿದೆ. ಪಾಕಿಸ್ತಾನ ತಂಡವು ಯಾವುದೇ ಹಂತದಲ್ಲಿ ಪಂದ್ಯ ಗೆಲ್ಲುವಂತಹ ವಾತಾವರಣವನ್ನು ನಿರ್ಮಾಣ ಮಾಡಲಿಲ್ಲ. ಈ ಹಿಂದೆ ಪಾಕಿಸ್ತಾನ ತಂಡದ ಆಟಗಾರರಲ್ಲಿ ಇದ್ದಂತಹ ಸ್ಕಿಲ್‌ಗಳು ಈಗಿನ ತಂಡದಲ್ಲಿ ಕಾಣಿಸುತ್ತಿಲ್ಲ ಎಂದು ಅಜಯ್ ಜಡೇಜಾ ತಮ್ಮ ಬೇಸರ ಹೊರಹಾಕಿದ್ದಾರೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ: ಭಾರತ ಎದುರು ಹೀನಾಯವಾಗಿ ಸೋಲುತ್ತಿದ್ದಂತೆ ಅಚ್ಚರಿ ಹೇಳಿಕೆ ಕೊಟ್ಟ ಪಾಕ್ ನಾಯಕ ರಿಜ್ವಾನ್!
ಸತತ ಎರಡು ಪಂದ್ಯಗಳನ್ನು ಸೋತಿರುವ ಮೊಹಮ್ಮದ್ ರಿಜ್ವಾನ್ ನೇತೃತ್ವದ ಪಾಕಿಸ್ತಾನ ತಂಡವು ಬಹುತೇಕ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸೆಮೀಸ್ ರೇಸ್‌ನಿಂದ ಹೊರಬಿದ್ದಿದೆ. ಇದೀಗ ಪಾಕಿಸ್ತಾನ ತಂಡವು ಗ್ರೂಪ್ ಹಂತದಲ್ಲಿ ತನ್ನ ಪಾಲಿನ ಕೊನೆಯ ಪಂದ್ಯದಲ್ಲಿ ಫೆಬ್ರವರಿ 27ರಂದು ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಇನ್ನೊಂದೆಡೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಮಾರ್ಚ್ 02ರಂದು ತನ್ನ ಪಾಲಿನ ಕೊನೆಯ ಗ್ರೂಪ್ ಹಂತದ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಪಾಕಿಸ್ತಾನಕ್ಕಿದೆಯಾ ಸೆಮೀಸ್‌ಗೇರುವ ಚಾನ್ಸ್?
ಒಂದು ವೇಳೆ ಇಂದು ಬಾಂಗ್ಲಾದೇಶ ಎದುರು ನ್ಯೂಜಿಲೆಂಡ್ ಸೋತರೇ, ನ್ಯೂಜಿಲೆಂಡ್ ಎದುರು ಭಾರತ ಗೆದ್ದರೇ ಹಾಗೂ ಬಾಂಗ್ಲಾದೇಶ ಎದುರು ಪಾಕಿಸ್ತಾನ ಭಾರೀ ಅಂತರದಲ್ಲಿ ಗೆಲುವು ಸಾಧಿಸಿ, ಬಾಂಗ್ಲಾ ಹಾಗೂ ಕಿವೀಸ್ ನೆಟ್‌ರನ್ ರೇಟ್ ಹಿಂದಿಕ್ಕಿದರಷ್ಟೇ ಭಾರತದ ಜತೆ ಪಾಕಿಸ್ತಾನ ತಂಡವು ಸೆಮೀಸ್‌ಗೇರುವ ಅವಕಾಶ ಇದೆ. ಇದು ಸಾಧ್ಯವಾಗಬೇಕಿದ್ದರೇ ಪವಾಡವೇ ನಡೆಯಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.