2025ರ ಚಾಂಪಿಯನ್ಸ್ ಟ್ರೋಫಿ ಆತಿಥ್ಯಕ್ಕೆ ಪಟ್ಟು
ಟೂರ್ನಿ ಶಿಫ್ಟ್ ಆದರೂ ಹಣ ನೀಡುವಂತೆ ಷರತ್ತು
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟ ಇನ್ನೂ ವಿಳಂಬ
ನವದೆಹಲಿ(ಜೂ.21): ಬಿಸಿಸಿಐ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ನಡುವೆ ಏಷ್ಯಾಕಪ್, ಏಕದಿನ ವಿಶ್ವಕಪ್ನ ಗೊಂದಲಗಳು ಜೀವಂತವಾಗಿರುವಾಗಲೇ 2025ರ ಚಾಂಪಿಯನ್ಸ್ ಟ್ರೋಫಿ ವಿಚಾರದಲ್ಲೂ ತಿಕ್ಕಾಟ ಆರಂಭಗೊಂಡಿದೆ. ಮುಂಬರುವ ವಿಶ್ವಕಪ್ನ ವೇಳಾಪಟ್ಟಿ ಪ್ರಕಟ ವಿಳಂಬಗೊಳ್ಳಲು ಇದೂ ಒಂದು ಕಾರಣ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಸದ್ಯ 2025ರ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ಪಾಕಿಸ್ತಾನದ ಬಳಿ ಇದೆ. ಆದರೆ ಟೂರ್ನಿಗಾಗಿ ಭಾರತ ತಂಡ ಪಾಕ್ಗೆ ಹೋಗುವ ಸಾಧ್ಯತೆ ಕಡಿಮೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಭಾರತ ತಂಡ ತೆರಳದೆ ಟೂರ್ನಿ ಸ್ಥಳಾಂತರಗೊಂಡರೆ ತನಗೆ ಬರಬೇಕಿರುವ ಪಾಲನ್ನು ನೀಡುವುದಾಗಿ ಖಚಿತಪಡಿಸುವಂತೆ ಪಿಸಿಬಿ, ಐಸಿಸಿಗೆ ಒತ್ತಡ ಹಾಕುತ್ತಿದೆ ಎಂದು ತಿಳಿದುಬಂದಿದೆ.
undefined
ಈಗಾಗಲೇ ಪಾಕ್ನಲ್ಲಿ ನಡೆಯಬೇಕಿರುವ ಏಷ್ಯಾಕಪ್ನಲ್ಲೂ ಭಾರತ ಆಡಲು ಒಪ್ಪದ ಕಾರಣ ಟೂರ್ನಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿ ವಿಚಾರದಲ್ಲೂ ಕೂಡಾ ಭಾರತದ ಆಕ್ಷೇಪ ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪಿಸಿಬಿ ಈ ಷರತ್ತು ಹಾಕಿದೆ ಎಂದು ವರದಿಯಾಗಿದೆ.
ವಿಶ್ವಕಪ್ ಅರ್ಹತಾ ಸುತ್ತು: ಜಿಂಬಾಬ್ವೆ, ನೇಪಾಳಕ್ಕೆ ಜಯ
ಹರಾರೆ: 2023ರ ಐಸಿಸಿ ಏಕದಿನ ವಿಶ್ವಕಪ್ನ ಅರ್ಹತಾ ಟೂರ್ನಿಯಲ್ಲಿ ಆತಿಥೇಯ ಜಿಂಬಾಬ್ವೆ ಸತತ 2ನೇ ಗೆಲುವು ಸಾಧಿಸಿದೆ. ಮತ್ತೊಂದೆಡೆ ನೇಪಾಳ ಗೆಲುವಿನ ಖಾತೆ ತೆರೆದಿದೆ.
ಮಂಗಳವಾರ ‘ಎ’ ಗುಂಪಿನ ನೆದರ್ಲೆಂಡ್್ಸ ವಿರುದ್ಧದ ಪಂದ್ಯದಲ್ಲಿ ಜಿಂಬಾಬ್ವೆ 6 ವಿಕೆಟ್ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್್ಸ 6 ವಿಕೆಟ್ಗೆ 315 ರನ್ ಕಲೆಹಾಕಿತು. ವಿಕ್ರಂಜಿತ್ ಸಿಂಗ್ 88, ಸ್ಕಾಟ್ ಎಡ್ವರ್ಡ್ಸ್ 83 ರನ್ ಗಳಿಸಿದರು. ದೊಡ್ಡ ಗುರಿಯನ್ನು ಜಿಂಬಾಬ್ವೆ ಕೇವಲ 40.5 ಓವರ್ಗಳಲ್ಲೇ ಬೆನ್ನತ್ತಿತು. ಸಿಕಂದರ್ ರಾಜಾ 54 ಎಸೆತದಲ್ಲಿ 6 ಬೌಂಡರಿ, 8 ಸಿಕ್ಸರ್‌ನೊಂದಿಗೆ ಔಟಾಗದೆ 102, ಶಾನ್ ವಿಲಿಯಮ್ಸ್ 91 ರನ್ ಸಿಡಿಸಿದರು.
Ashes 2023: ಅತಿಯಾದ ಆತ್ಮವಿಶ್ವಾಸಕ್ಕೆ ಬೆಲೆ ತೆತ್ತ ಇಂಗ್ಲೆಂಡ್..! ರೋಚಕ ಪಂದ್ಯ ಗೆದ್ದ ಆಸ್ಟ್ರೇಲಿಯಾ
ದಿನದ ಮತ್ತೊಂದು ಪಂದ್ಯದಲ್ಲಿ ಅಮೆರಿಕ ವಿರುದ್ಧ ನೇಪಾಳ 6 ವಿಕೆಟ್‌ಗಳಿಂದ ಜಯಿಸಿತು. ಅಮೆರಿಕ, ಶಯಾನ್ ಜಹಾಂಗೀರ್(100)ರ ಶತಕದ ಹೊರತಾಗಿಯೂ 49 ಓವರ್ಗಳಲ್ಲಿ 207 ರನ್‌ಗೆ ಆಲೌಟಾದರೆ, ನೇಪಾಳ 43 ಓವರ್ಗಳಲ್ಲಿ ಗುರಿ ಬೆನ್ನತ್ತಿತು.
ಮಹಿಳೆಯರ ಏಷ್ಯಾಕಪ್: ಭಾರತ ‘ಎ’ ಫೈನಲ್ಗೆ
ಮೊಂಗ್ಕಾಕ್(ಹಾಂಕಾಂಗ್): ಉದಯೋನ್ಮುಖ ಮಹಿಳೆಯರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ‘ಎ’ ತಂಡ ಫೈನಲ್ ಪ್ರವೇಶಿಸಿದ್ದು, ಬುಧವಾರ ಪ್ರಶಸ್ತಿಗಾಗಿ ಬಾಂಗ್ಲಾದೇಶ ‘ಎ’ ತಂಡದ ವಿರುದ್ಧ ಸೆಣಸಾಡಲಿದೆ. ಭಾರತ ಸೆಮಿಫೈನಲ್ನಲ್ಲಿ ಶ್ರೀಲಂಕಾ ‘ಎ’ ವಿರುದ್ಧ ಆಡಬೇಕಿತ್ತು.
ಸೋಮವಾರದ ಪಂದ್ಯ ಮಂಗಳವಾರಕ್ಕೆ ಮುಂದೂಡಿಕೆಯಾದರೂ ಎರಡೂ ದಿನ ಭಾರೀ ಮಳೆಯಿಂದಾಗಿ ಪಂದ್ಯ ನಡೆಯಲಿಲ್ಲ. ಹೀಗಾಗಿ ಅಂಕಗಳ ಆಧಾರದಲ್ಲಿ ಭಾರತ ಫೈನಲ್ ಪ್ರವೇಶಿಸಿತು. ಭಾರತ ಟೂರ್ನಿಯಲ್ಲಿ ಕೇವಲ 1 ಪಂದ್ಯ ಆಡಿ ಫೈನಲ್ಗೇರಿದೆ ಎನ್ನುವುದು ಅಚ್ಚರಿಯ ಸಂಗತಿ. ಗುಂಪು ಹಂತ ಹಾಗೂ ಸೆಮೀಸ್ ಪಂದ್ಯ ಮಳೆಗೆ ಆಹುತಿಯಾಗಿತ್ತು. ಒಟ್ಟಾರೆ ಟೂರ್ನಿಯ 8 ಪಂದ್ಯಗಳು ಮಳೆಯಿಂದ ರದ್ದುಗೊಂಡಿದೆ. ಬಾಂಗ್ಲಾ ತಂಡ ಸೆಮೀಸ್ನಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದಿದೆ.