ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಸೆಮಿಗೆ: ಪಾಕ್‌, ಬಾಂಗ್ಲಾ ಒಟ್ಟಿಗೇ ಮನೆಗೆ!

Published : Feb 25, 2025, 10:06 AM ISTUpdated : Feb 25, 2025, 10:20 AM IST
ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಸೆಮಿಗೆ: ಪಾಕ್‌, ಬಾಂಗ್ಲಾ ಒಟ್ಟಿಗೇ ಮನೆಗೆ!

ಸಾರಾಂಶ

ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ಬಾಂಗ್ಲಾದೇಶವನ್ನು ಸೋಲಿಸಿದ ಕಾರಣ ಭಾರತ ಸೆಮಿಫೈನಲ್ ತಲುಪಿದೆ. ನ್ಯೂಜಿಲೆಂಡ್ ಕೂಡಾ ಸೆಮಿಫೈನಲ್ ಪ್ರವೇಶಿಸಿದೆ. ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡಿ 236 ರನ್ ಗಳಿಸಿತು. ರಚಿನ್ ರವೀಂದ್ರ ಅವರ ಶತಕದ ನೆರವಿನಿಂದ ನ್ಯೂಜಿಲೆಂಡ್ 5 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಆತಿಥೇಯ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಟೂರ್ನಿಯಿಂದ ಹೊರಬಿದ್ದಿವೆ. ಭಾರತ 6ನೇ ಬಾರಿಗೆ ಸೆಮಿಫೈನಲ್ ತಲುಪಿದೆ.

ರಾವಲ್ಪಿಂಡಿ: ಈ ಬಾರಿ ಚಾಂಪಿಯನ್ಸ್‌ ಟ್ರೋಫಿ ಗೆಲ್ಲುವ ಫೇವರಿಟ್‌ ತಂಡ ಎನಿಸಿಕೊಂಡಿರುವ ಭಾರತ, ಟೂರ್ನಿಯಲ್ಲಿ ಅಧಿಕೃತವಾಗಿ ಸೆಮಿಫೈನಲ್‌ ಪ್ರವೇಶಿಸಿದೆ. ಇದಕ್ಕೆ ಕಾರಣವಾಗಿದ್ದು ಸೋಮವಾರದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ನ್ಯೂಜಿಲೆಂಡ್‌ನ ಗೆಲುವು. ಈ ಜಯ ಭಾರತವನ್ನು ಸೆಮಿಫೈನಲ್‌ಗೇರಿಸಿದ್ದಲ್ಲದೇ, ನ್ಯೂಜಿಲೆಂಡ್‌ಗೂ ಅಂತಿಮ 4ರ ಸ್ಥಾನ ಖಚಿತಪಡಿಸಿಕೊಂಡಿತು. ಜೊತೆಗೆ, ಆತಿಥ್ಯ ದೇಶ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಟೂರ್ನಿಯಿಂದಲೇ ಹೊರಬಿತ್ತು.

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾದೇಶ, 50 ಓವರ್‌ಗಳಲ್ಲಿ 9 ವಿಕೆಟ್‌ಗೆ 236 ರನ್‌ ಕಲೆಹಾಕಿತು. ಈ ಮೊತ್ತ ನ್ಯೂಜಿಲೆಂಡ್‌ಗೆ ಸುಲಭ ತುತ್ತಾಯಿತು. ರಚಿನ್‌ ರವೀಂದ್ರ ಸ್ಫೋಟಕ ಶತಕದ ನೆರವಿನಿಂದ ತಂಡ 46.1 ಓವರ್‌ಗಳಲ್ಲೇ 5 ವಿಕೆಟ್‌ಗಳಿಂದ ಜಯ ತನ್ನದಾಗಿಸಿಕೊಂಡಿತು.

ಇದನ್ನೂ ಓದಿ: WPL 2025: ಯುಪಿ ವಾರಿಯರ್ಸ್‌ ಎದುರು ಸೂಪರ್‌ ಓವರ್‌ ಥ್ರಿಲ್ಲರ್‌ ಸೋತ ಆರ್‌ಸಿಬಿ!

ಬಾಂಗ್ಲಾದ ಆರಂಭಿಕ ಸ್ಪೆಲ್‌ ಮಾರಕವಾಗಿತ್ತು. ಕಳೆದ ಪಂದ್ಯದ ಶತಕ ವೀರ ವಿಲ್‌ ಯಂಗ್‌ ಸೊನ್ನೆ ಸುತ್ತಿದರೆ, ಅನುಭವಿ ಕೇನ್‌ ವಿಲಿಯಮ್ಸನ್‌ 5 ರನ್‌ಗೆ ಔಟಾದರು. 15 ರನ್‌ಗೆ 2 ವಿಕೆಟ್‌ ಬಿದ್ದರೂ ಕಿವೀಸ್‌ ಎದೆಗುಂದಲಿಲ್ಲ. ಬಾಂಗ್ಲಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ರಚಿನ್‌ ಭರ್ಜರಿ ಶತಕ ಬಾರಿಸಿದರು. ಅವರು 105 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್‌ಗಳೊಂದಿಗೆ 112 ರನ್‌ ಸಿಡಿಸಿ ನಿರ್ಗಮಿಸಿದರು. ಅವರು 4ನೇ ವಿಕೆಟ್‌ಗೆ ಟಾಮ್‌ ಲೇಥಮ್‌ ಜೊತೆಗೂಡಿ 129 ರನ್‌ ಜೊತೆಯಾಟವಾಡಿದರು. ಲೇಥಮ್‌ 55 ರನ್‌ ಗಳಿಸಿ ತಂಡವನ್ನು ಗೆಲ್ಲಿಸಿದರು.

ನಜ್ಮುಲ್‌ ಹೋರಾಟ: ಬಾಂಗ್ಲಾ ಈ ಪಂದ್ಯದಲ್ಲಿ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ 45 ರನ್‌ ಜೊತೆಯಾಟ ಮೂಡಿಬಂತು. ಆದರೆ ನಾಯಕ ನಜ್ಮುಲ್‌ ಹೊಸೈನ್‌ ಶಾಂಟೊ ಹೊರತುಪಡಿಸಿ ಇತರ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ನಜ್ಮುಲ್‌ 110 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ 77 ರನ್‌ ಸಿಡಿಸಿದರು.

ಇದನ್ನೂ ಓದಿ: ಪಾಕಿಸ್ತಾನ ಎದುರು ಭಾರತ ಹೀನಾಯವಾಗಿ ಸೋಲುತ್ತೆ ಎಂದು ಭವಿಷ್ಯ ನುಡಿದಿದ್ದ IIT ಬಾಬಾ ಈಗ ಫುಲ್ ಟ್ರೋಲ್!

ಕೊನೆಯಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ ಜಾಕರ್‌ ಅಲಿ(45), ರಿಶಾದ್‌ ಹೊಸೈನ್‌(26) ತಂಡದ ಮೊತ್ತವನ್ನು 230ರ ಗಡಿ ದಾಟಿಸಿದರು. ಸ್ಪಿನ್ನರ್‌ ಮೈಕಲ್‌ ಬ್ರೇಸ್‌ವೆಲ್‌ 4, ವಿಲಿಯಮ್‌ ಒರೌರ್ಕೆ 2 ವಿಕೆಟ್‌ ಕಿತ್ತರು.

ಸ್ಕೋರ್‌: ಬಾಂಗ್ಲಾದೇಶ 50 ಓವರಲ್ಲಿ 9 ವಿಕೆಟ್‌ಗೆ 236 (ನಜ್ಮುಲ್‌ 77, ಜಾಕರ್‌ 45, ಬ್ರೇಸ್‌ವೆಲ್‌ 4-26), ನ್ಯೂಜಿಲೆಂಡ್‌ 46.1 ಓವರಲ್ಲಿ 240/5 (ರಚಿನ್‌ ರವೀಂದ್ರ 112, ಲೇಥಮ್‌ 55, ತಸ್ಕೀನ್‌ 1-28)

ಪಂದ್ಯಶ್ರೇಷ್ಠ: ರಚಿನ್‌ ರವೀಂದ್ರ

‘ಬಿ’ ಗುಂಪಿನಿಂದ ಭಾರತ,ಕಿವೀಸ್‌ ಸೆಮಿಫೈನಲ್‌ಗೆ

ಟೂರ್ನಿಯಲ್ಲಿ 8 ತಂಡಗಳಿವೆ. ಇದರಲ್ಲಿ ‘ಬಿ’ ಗುಂಪಿನ 4 ತಂಡಗಳ ಪೈಕಿ ಭಾರತ ಹಾಗೂ ನ್ಯೂಜಿಲೆಂಡ್‌ ಸೆಮಿಫೈನಲ್‌ ಪ್ರವೇಶಿಸಿವೆ. ಕಿವೀಸ್‌ ಆಡಿದ 2 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ 4 ಅಂಕ ಗಳಿಸಿ, ಗುಂಪಿನಲ್ಲಿ ಅಗ್ರಸ್ಥಾನಿಯಾಯಿತು. ಭಾರತ ಕೂಡಾ 2 ಪಂದ್ಯಗಳಲ್ಲಿ ಗೆದ್ದರೂ, ನೆಟ್‌ ರನ್‌ರೇಟ್‌ ಆಧಾರದಲ್ಲಿ ಸದ್ಯ 2ನೇ ಸ್ಥಾನದಲ್ಲಿದೆ. ಇತ್ತಂಡಗಳೂ ಭಾನುವಾರ ಮುಖಾಮುಖಿಯಾಗಲಿವೆ. ಆದರೆ ಸೆಮಿಫೈನಲ್‌ ಸ್ಥಾನ ಖಚಿತವಾಗಿರುವುದರಿಂದ ಆ ಪಂದ್ಯ ಗುಂಪು ಹಂತದ ಅಗ್ರಸ್ಥಾನಿಯನ್ನು ನಿರ್ಧರಿಸಲಿದೆ. ಇನ್ನು, ಪಾಕ್‌ ಹಾಗೂ ಬಾಂಗ್ಲಾ ಆಡಿರುವ ತಲಾ 2 ಪಂದ್ಯಗಳಲ್ಲೂ ಸೋತಿದ್ದು, ಗುಂಪಿನಿಂದ ಅಧಿಕೃತವಾಗಿ ಹೊರಬಿತ್ತು. ಈ ಎರಡು ತಂಡಗಳೇ ಗುರುವಾರ ಪರಸ್ಪರ ಆಡಲಿವೆ. ಆದರೆ ಯಾರೇ ಗೆದ್ದರೂ ಸೆಮಿಫೈನಲ್‌ಗೇರಲ್ಲ.

ಇದನ್ನೂ ಓದಿ: ಭಾರತ ಗೆದ್ದಿದ್ದಕ್ಕೆ ಖುಷಿಯಿದೆ, ಆದ್ರೆ? ಮತ್ತೊಮ್ಮೆ ಅಚ್ಚರಿ ಅಭಿಪ್ರಾಯ ಹೊರಹಾಕಿದ ಅಜಯ್ ಜಡೇಜಾ!

ಹೋರಾಡಿ ಆತಿಥ್ಯ ಗಿಟ್ಟಿಸಿದ್ದ ಪಾಕ್‌ 2 ಪಂದ್ಯಕ್ಕೇ ಢಮಾರ್‌

ಪಾಕ್‌ ಈ ಬಾರಿ ಚಾಂಪಿಯನ್ಸ್‌ ಟ್ರೋಫಿಯ ಆತಿಥ್ಯ ಹಕ್ಕನ್ನು ತನ್ನಲ್ಲೇ ಉಳಿಸಿಕೊಳ್ಳಲು ಬಹಳ ಕಷ್ಟಪಟ್ಟಿದೆ. ಬಿಸಿಸಿಐ ಜೊತೆ ಸಂಘರ್ಷಕ್ಕೆ ಇಳಿದಿದ್ದ ಪಾಕ್‌, ಟೂರ್ನಿ ಬೇರೆ ದೇಶಕ್ಕೆ ಸ್ಥಳಾಂತರಗೊಳ್ಳದಂತೆ ನೋಡಿಕೊಂಡಿತ್ತು. ಆದರೆ ಟೂರ್ನಿಯಲ್ಲಿ ಆಡಿರುವ 2 ಪಂದ್ಯಗಳಲ್ಲೂ ಸೋತು ಸೆಮಿಫೈನಲ್‌ ರೇಸ್‌ನಿಂದಲೇ ಹೊರಬೀಳುವ ಮೂಲಕ ತೀವ್ರ ಮುಖಭಂಗಕ್ಕೊಳಗಾಗಿದೆ.

6ನೇ ಸಲ ಭಾರತ ಸೆಮಿಗೆ

ಭಾರತ ಚಾಂಪಿಯನ್ಸ್‌ ಟ್ರೋಫಿಯಲ್ಲಿ 6ನೇ ಬಾರಿ ಸೆಮಿಫೈನಲ್‌ಗೇರಿದೆ. ಈ ಮೊದಲು 1998, 2000, 2002, 2013, 2017ರಲ್ಲಿ ಸೆಮೀಸ್‌ಗೇರಿತ್ತು. ಈ ಪೈಕಿ 2002, 2013ರಲ್ಲಿ ಚಾಂಪಿಯನ್‌ ಆಗಿದ್ದರೆ, 2000, 2017ರಲ್ಲಿ ರನ್ನರ್‌-ಆಪ್‌ ಆಗಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌