
ದುಬೈ: 13ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಮಣಿಸಿದ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಮಹಿಳಾ ಏಕದಿನ ವಿಶ್ವಕಪ್‌ನ ಅತ್ಯುತ್ತಮ ಆಟಗಾರ್ತಿಯರನ್ನು ಒಳಗೊಂಡ 2025ನೇ ಸಾಲಿನ ವಿಶ್ವಕಪ್ ತಂಡವನ್ನು ಐಸಿಸಿ ಪ್ರಕಟಿಸಿದೆ. ಐಸಿಸಿ ಪ್ರಕಟಿಸಿದ ಶ್ರೇಷ್ಠ ಆಟಗಾರ್ತಿಯರನ್ನೊಳಗೊಂಡ ಭಾರತದ ಮೂವರು ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ.
ಭಾರತಕ್ಕೆ ಮಹಿಳಾ ಏಕದಿನ ವಿಶ್ವಕಪ್ ಗೆದ್ದುಕೊಟ್ಟರೂ, ಹರ್ಮನ್‌ಪ್ರೀತ್ ಕೌರ್ ಬದಲಿಗೆ ವಿಶ್ವಕಪ್ ರನ್ನರ್ ಅಪ್ ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೋಲ್ವಾರ್ಡ್ಟ್ ಅವರನ್ನು ಐಸಿಸಿ ಮಹಿಳಾ ತಂಡದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಈ ಬಾರಿಯ ಶ್ರೇಷ್ಠ ಮಹಿಳಾ ವಿಶ್ವಕಪ್ ತಂಡದಲ್ಲಿ ಭಾರತದ ಮೂವರು ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. ಆದರೆ ನಾಯಕಿ ಹರ್ಮನ್‌ಪ್ರೀತ್ ಕೌರ್, ಪ್ರತೀಕಾ ರಾವಲ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್, ಈ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆರಂಭಿಕ ಆಟಗಾರ್ತಿಯಾಗಿ ಎರಡು ಶತಕ ಮತ್ತು ಮೂರು ಅರ್ಧಶತಕ ಸೇರಿದಂತೆ 71.37 ಸರಾಸರಿಯಲ್ಲಿ 571 ರನ್ ಗಳಿಸಿದ ಪ್ರದರ್ಶನವು, ಹರ್ಮನ್‌ಪ್ರೀತ್‌ರನ್ನು ಹಿಂದಿಕ್ಕಿ ಲಾರಾ ವೋಲ್ವಾರ್ಡ್ಟ್ ಅವರನ್ನು ತಂಡದ ನಾಯಕಿ ಮತ್ತು ಆರಂಭಿಕ ಆಟಗಾರ್ತಿಯಾಗಿ ಆಯ್ಕೆ ಮಾಡಲು ಕಾರಣವಾಗಿದೆ.
ಟೂರ್ನಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ, ಲಾರಾ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಸ್ಮೃತಿ ಒಂದು ಶತಕ ಮತ್ತು ಎರಡು ಅರ್ಧಶತಕ ಸೇರಿದಂತೆ 54.25 ಸರಾಸರಿಯಲ್ಲಿ 434 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ನಲ್ಲಿ ಅಜೇಯ ಶತಕ ಸಿಡಿಸಿದ್ದ ಭಾರತದ ಜೆಮಿಮಾ ರೋಡ್ರಿಗ್ಸ್ ಮೂರನೇ ಕ್ರಮಾಂಕದಲ್ಲಿದ್ದಾರೆ. ಟೂರ್ನಿಯಲ್ಲಿ 208 ರನ್ ಮತ್ತು 12 ವಿಕೆಟ್‌ಗಳೊಂದಿಗೆ ಆಲ್ರೌಂಡ್ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾದ ಮರಿಜಾಬೆ ಕಪ್ ನಾಲ್ಕನೇ ಸ್ಥಾನದಲ್ಲಿದ್ದರೆ, 328 ರನ್ ಮತ್ತು ಏಳು ವಿಕೆಟ್ ಪಡೆದ ಆಸ್ಟ್ರೇಲಿಯಾದ ಆಶ್ ಗಾರ್ಡ್ನರ್ ಐದನೇ ಸ್ಥಾನದಲ್ಲಿದ್ದಾರೆ.
ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದೀಪ್ತಿ ಶರ್ಮಾ ತಂಡದಲ್ಲಿರುವ ಮೂರನೇ ಭಾರತೀಯ ಆಟಗಾರ್ತಿಯಾಗಿದ್ದಾರೆ. ಫೈನಲ್‌ನಲ್ಲಿ ಐದು ವಿಕೆಟ್ ಸೇರಿದಂತೆ ಒಟ್ಟು 22 ವಿಕೆಟ್ ಮತ್ತು ಮೂರು ಅರ್ಧಶತಕಗಳೊಂದಿಗೆ 215 ರನ್ ಗಳಿಸಿದ್ದಾರೆ. ಈ ಮೂಲಕ ದೀಪ್ತಿ ಶರ್ಮಾ, ಸರಣಿಶ್ರೇಷ್ಠ ಆಟಗಾರ್ತಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
ಆಸ್ಟ್ರೇಲಿಯಾದ ಆಲ್ರೌಂಡರ್ ಅನ್ನಾಬೆಲ್ ಸದರ್ಲ್ಯಾಂಡ್, ದಕ್ಷಿಣ ಆಫ್ರಿಕಾದ ನಡಿನ್ ಡಿ ಕ್ಲರ್ಕ್, ಪಾಕಿಸ್ತಾನದ ಸಿದ್ರಾ ನವಾಜ್, ಆಸ್ಟ್ರೇಲಿಯಾದ ಅಲನಾ ಕಿಂಗ್ ಮತ್ತು ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್ ಐಸಿಸಿ ತಂಡದಲ್ಲಿರುವ ಇತರ ಆಟಗಾರ್ತಿಯರು. ಇಂಗ್ಲೆಂಡ್‌ನ ನ್ಯಾಟ್ ಸೀವರ್-ಬ್ರಂಟ್ ತಂಡದ 12ನೇ ಆಟಗಾರ್ತಿಯಾಗಿ ಸ್ಥಾನ ಪಡೆದಿದ್ದಾರೆ.
ಸ್ಮೃತಿ ಮಂಧನಾ (ಭಾರತ), ಲಾರಾ ವೋಲ್ವಾರ್ಡ್ಟ್ (ದಕ್ಷಿಣ ಆಫ್ರಿಕಾ) (ನಾಯಕಿ), ಜೆಮಿಮಾ ರೋಡ್ರಿಗ್ಸ್ (ಭಾರತ), ಮರಿಜಾನೆ ಕಪ್ (ದಕ್ಷಿಣ ಆಫ್ರಿಕಾ), ಆಶ್ಲೀ ಗಾರ್ಡ್ನರ್ (ಆಸ್ಟ್ರೇಲಿಯಾ), ದೀಪ್ತಿ ಶರ್ಮಾ (ಭಾರತ), ಅನ್ನಾಬೆಲ್ ಸದರ್ಲ್ಯಾಂಡ್ (ಆಸ್ಟ್ರೇಲಿಯಾ), ನಡಿನ್ ಡಿ ಕ್ಲರ್ಕ್ (ದಕ್ಷಿಣ ಆಫ್ರಿಕಾ), ಸಿದ್ರಾ ನವಾಜ್ (ಪಾಕಿಸ್ತಾನ), ಅಲನಾ ಕಿಂಗ್ (ಆಸ್ಟ್ರೇಲಿಯಾ), ಸೋಫಿ ಎಕ್ಲೆಸ್ಟೋನ್ (ಇಂಗ್ಲೆಂಡ್).
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.