
ಕೋಲ್ಕತ್ತಾ: ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಸದ್ಯ ಸತತ ಸೋಲುಗಳಿಂದಾಗಿ ಟೀಕೆ ಎದುರಿಸುತ್ತಿದ್ದಾರೆ. ಇದೇ ವೇಳೆ ಮುಂದಿನ ಕೋಚ್ ಯಾರಾಗಬಹುದು ಎಂಬ ಚರ್ಚೆಯೂ ಶುರುವಾಗಿದೆ. ಈ ರೇಸ್‌ನಲ್ಲಿ ಕೇಳಿಬರುತ್ತಿರುವ ಪ್ರಮುಖ ಹೆಸರುಗಳಲ್ಲಿ ಒಬ್ಬರು ಆಶಿಶ್ ನೆಹ್ರಾ. ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ನೆಹ್ರಾ ಅವರು ಭಾರತ ತಂಡದ ಕೋಚ್ ಆಗುವ ಬಗ್ಗೆ ಕೇಳಿದ ಪ್ರಶ್ನೆಗೆ ಅತ್ಯಂತ ತಮಾಷೆಯಾಗಿ ಉತ್ತರಿಸಿದ್ದಾರೆ.
ಬಂಗಾಳ ಕ್ರಿಕೆಟ್ ಸಂಸ್ಥೆಯ (CAB) ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಆಶಿಶ್ ನೆಹ್ರಾ, ನಾನು ಟೀಮ್ ಇಂಡಿಯಾ ಕೋಚ್ ಆಗಬೇಕೆಂದರೆ ಮೊದಲು ನನ್ನ ಮನೆಯಲ್ಲಿರುವ ‘ಹೈಕಮಿಷನರ್’ ಅಂದರೆ ನನ್ನ ಹೆಂಡತಿಯ ಅನುಮತಿ ಪಡೆಯಬೇಕು. ಒಂದು ವೇಳೆ ಆಕೆ ಒಪ್ಪದಿದ್ದರೂ ನಾನು ಕೋಚ್ ಜವಾಬ್ದಾರಿ ವಹಿಸಿಕೊಂಡರೆ, ನನಗೆ ಡಿವೋರ್ಸ್ (ವಿಚ್ಛೇದನ) ಆಗುವುದು ಗ್ಯಾರಂಟಿ! ಎಂದು ನಗುತ್ತಲೇ ಹೇಳಿದ್ದಾರೆ.
ನೆಹ್ರಾ ಅವರ ಈ ಮಾತಿನ ಹಿಂದೆ ಒಂದು ಗಂಭೀರವಾದ ಕಾರಣವೂ ಇದೆ. ಅಂತರಾಷ್ಟ್ರೀಯ ತಂಡದ ಕೋಚ್ ಜವಾಬ್ದಾರಿ ಹೊತ್ತರೆ ವರ್ಷದಲ್ಲಿ ಕನಿಷ್ಠ 8 ರಿಂದ 9 ತಿಂಗಳುಗಳ ಕಾಲ ಸತತವಾಗಿ ಪ್ರವಾಸದಲ್ಲಿ ಇರಬೇಕಾಗುತ್ತದೆ. ಕುಟುಂಬದಿಂದ ಅಷ್ಟು ದಿನ ದೂರವಿರುವುದು ಸುಲಭದ ಮಾತಲ್ಲ. ಐಪಿಎಲ್‌ನಲ್ಲಿ ಕೇವಲ ಎರಡೂವರೆ ತಿಂಗಳು ಕೆಲಸ ಇರುತ್ತದೆ, ಹಾಗಾಗಿ ಅಲ್ಲಿ ನಿಭಾಯಿಸಬಹುದು. ಆದರೆ ರಾಷ್ಟ್ರೀಯ ತಂಡದ ಜವಾಬ್ದಾರಿ ದೊಡ್ಡದು ಎಂದು ನೆಹ್ರಾ ವಿವರಿಸಿದ್ದಾರೆ.
ಭಾರತ ತಂಡದ ಕೋಚ್ ಆಗುವುದು ಒಂದು ಗೌರವದ ವಿಷಯ ಹೌದು. ಆದರೆ ಸದ್ಯಕ್ಕೆ ಅಂತಹ ಯಾವುದೇ ಮಹತ್ವಾಕಾಂಕ್ಷೆ ನನ್ನಲ್ಲಿ ಇಲ್ಲ. ನಾನು ಈಗ ಇರುವ ಜಾಗದಲ್ಲಿ (ಗುಜರಾತ್ ಟೈಟಾನ್ಸ್) ತುಂಬಾ ಸಂತೋಷವಾಗಿದ್ದೇನೆ. ಭವಿಷ್ಯದಲ್ಲಿ ಏನಾಗುತ್ತದೋ ನೋಡೋಣ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಐಪಿಎಲ್ 2022ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮೊದಲ ಪ್ರಯತ್ನದಲ್ಲೇ ಚಾಂಪಿಯನ್ ಮಾಡಿದ್ದ ನೆಹ್ರಾ, ಕೋಚ್ ಆಗಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಆದರೆ ಸದ್ಯಕ್ಕೆ ಕುಟುಂಬವೇ ಮೊದಲ ಆದ್ಯತೆ ಎನ್ನುವ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.