18 ತಿಂಗಳೊಳಗಾಗಿ ಟೀಂ ಇಂಡಿಯಾ ಪರ ಆಡುವುದು ನನ್ನ ಗುರಿ ಎಂದ ಯಶ್ ಧುಳ್‌

By Suvarna NewsFirst Published Feb 11, 2022, 4:36 PM IST
Highlights

* ಭಾರತದ ಸೀನಿಯರ್ಸ್ ತಂಡದಲ್ಲಿ ಆಡುವ ಕನಸು ಕಾಣುತ್ತಿರುವ ಯಶ್ ಧುಳ್

*  ಮುಂದಿನ 18 ತಿಂಗಳಲ್ಲಿ ಭಾರತ ಹಿರಿಯರ ತಂಡದಲ್ಲಿ ಸ್ಥಾನ ಪಡೆಯುವ ಗುರಿ

* ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಯಶ್ ಧುಳ್

ನವದೆಹಲಿ: ಅಂಡರ್‌-19 ವಿಶ್ವಕಪ್‌ (ICC U-19 World Cup) ವಿಜೇತ ಭಾರತ ತಂಡದ ನಾಯಕ ಯಶ್‌ ಧುಳ್‌(Yash Dhull), ಮುಂದಿನ 18 ತಿಂಗಳಲ್ಲಿ ಭಾರತ ಹಿರಿಯರ ತಂಡದಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ದೆಹಲಿ ರಣಜಿ ತಂಡದಲ್ಲಿ (Delhi Ranji Team) ಸ್ಥಾನ ಪಡೆದಿರುವ ಯಶ್‌, ಗುರುವಾರ ಗುವಾಹಟಿಗೆ ಪ್ರಯಾಣಿಸಿದರು. 

‘ಇಲ್ಲಿಯವರೆಗೂ ಸಾಧಿಸಿದ್ದು ಏನೇನು ಅಲ್ಲ. ಇಲ್ಲಿಂದ ಮುಂದಕ್ಕೆ ಎಷ್ಟುದೂರ ಸಾಗುತ್ತೇನೆ ಎನ್ನುವುದು ಮುಖ್ಯ. ಮುಂದಿನ 18 ತಿಂಗಳಲ್ಲಿ ಭಾರತ ಹಿರಿಯರ ತಂಡಕ್ಕೆ ಆಯ್ಕೆಯಾಗುವುದು ನನ್ನ ಗುರಿ. ಅದು ಸಾಧ್ಯವಾಗದೆ ಇದ್ದರೆ, ಆಯ್ಕೆಯಾಗುವ ವರೆಗೂ ಪ್ರಯತ್ನ ನಿಲ್ಲಿಸುವುದಿಲ್ಲ’ ಎಂದು ಧುಳ್‌ ಹೇಳಿದ್ದಾರೆ.

ವೆಸ್ಟ್ ಇಂಡೀಸ್‌ನಲ್ಲಿ ನಡೆದ ಐಸಿಸಿ ಅಂಡರ್ 19 ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಯಶ್ ಧುಳ್ ನೇತೃತ್ವದ ಭಾರತ ತಂಡವು, ಇಂಗ್ಲೆಂಡ್ ತಂಡವನ್ನು ಬಗ್ಗುಬಡಿದು 5ನೇ ಬಾರಿಗೆ ಅಂಡರ್ 19 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ನಾಯಕನ ಆಟವಾಡಿದ್ದ ಯಶ್ ಧುಳ್ ಆಕರ್ಷಕ 110 ರನ್ ಬಾರಿಸಿದ್ದರು. ಇದರೊಂದಿಗೆ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಶತಕ ಬಾರಿಸಿದ ಭಾರತದ ಮೂರನೇ ಕ್ಯಾಪ್ಟನ್ ಎನ್ನುವ ದಾಖಲೆಯನ್ನು ಬರೆದಿದ್ದರು. ಇದಕ್ಕೂ ಮೊದಲು ನಾಯಕನಾಗಿ ವಿರಾಟ್ ಕೊಹ್ಲಿ (Virat Kohli) ಹಾಗೂ ಉನ್ಮುಕ್ತ್‌ ಚಾಂದ್ ಆಕರ್ಷಕ ಶತಕ ಚಚ್ಚಿದ್ದರು.

ಸ್ಟುವರ್ಟ್‌ ಬ್ರಾಡ್‌, ಜೇಮ್ಸ್ ಆ್ಯಂಡರ್‌ಸನ್‌ ಕ್ರಿಕೆಟ್‌ ಬದುಕು ಅಂತ್ಯ?

ಲಂಡನ್‌: ವೆಸ್ಟ್‌ಇಂಡೀಸ್‌ ವಿರುದ್ಧದ 3 ಪಂದ್ಯಗಳ ಟೆಸ್ಟ್‌ ಸರಣಿಗೆ ಇಂಗ್ಲೆಂಡ್‌ ತಂಡದಿಂದ ಹಿರಿಯ ವೇಗಿಗಳಾದ ಜೇಮ್ಸ್‌ ಆ್ಯಂಡರ್‌ಸನ್‌(James Anderson), ಸ್ಟುವರ್ಟ್‌ ಬ್ರಾಡ್‌ ಹೊರಬಿದ್ದಿದ್ದಾರೆ. ಆ್ಯಷಸ್‌ ಸರಣಿಯ ಹೀನಾಯ ಸೋಲಿನ ಬಳಿಕ ತಂಡದ ಕ್ರಿಕೆಟ್‌ ಮಂಡಳಿ ಹಿರಿಯರನ್ನು ಕೈಬಿಟ್ಟಿದ್ದು, ಯುವ ಪ್ರತಿಭೆಗಳಿಗೆ ಅವಕಾಶ ನೀಡಿದೆ. 

ಜೇಮ್ಸ್ ಆ್ಯಂಡರ್‌ಸನ್‌, ಸ್ಟುವರ್ಟ್ ಬ್ರಾಡ್‌ ಕ್ರಮವಾಗಿ 640 ಹಾಗೂ 537 ಟೆಸ್ಟ್‌ ವಿಕೆಟ್‌ ಪಡೆದಿದ್ದು, ಇಂಗ್ಲೆಂಡ್‌ ಪರ ವಿಕೆಟ್‌ ಗಳಿಕೆಯಲ್ಲಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಈ ಇಬ್ಬರ ಕ್ರಿಕೆಟ್‌ ಬದುಕು ಬಹುತೇಕ ಮುಕ್ತಾಯಗೊಂಡಿದೆ ಎಂದೇ ಹೇಳಲಾಗುತ್ತಿದೆ. ಮೊದಲ ಪಂದ್ಯ ಆ್ಯಂಟಿಗಾದಲ್ಲಿ ಮಾರ್ಚ್‌ 8ರಿಂದ ಆರಂಭವಾಗಲಿದೆ.

ಪುತ್ರಿಗೆ ‘ಈಡನ್‌ ರೋಸ್‌’ಎಂದು ಹೆಸರಿಟ್ಟ ಕಾರ್ಲೋಸ್‌

ಬಾರ್ಬಡೊಸ್‌: ವೆಸ್ಟ್‌ಇಂಡೀಸ್‌ ಸ್ಫೋಟಕ ಬ್ಯಾಟರ್‌ ಕಾರ್ಲೊಸ್‌ ಬ್ರಾಥ್‌ವೇಟ್‌ ತಮ್ಮ ಪುತ್ರಿಗೆ ‘ಈಡನ್‌ ರೋಸ್‌’ ಎಂದು ಹೆಸರಿಟ್ಟಿದ್ದಾರೆ. ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ನಡೆದಿದ್ದ 2016ರ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಕೊನೆ ಓವರಲ್ಲಿ 4 ಸಿಕ್ಸರ್‌ ಸಿಡಿಸಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದ ಬ್ರಾಥ್‌ವೇಟ್‌, ಆ ಕ್ಷಣವನ್ನು ಸ್ಮರಣೀಯಗೊಳಿಸಲು ಮೈದಾನದ ಹೆಸರನ್ನೇ ತಮ್ಮ ಪುತ್ರಿಗೆ ಇಟ್ಟಿದ್ದಾರೆ.

ತಂಡದ ಮಾಜಿ ನಾಯಕರಾಗಿರುವ 33 ವರ್ಷದ ಬ್ರಾಥ್‌ವೇಟ್‌ 2019ರಲ್ಲಿ ಕೊನೆ ಬಾರಿ ತಂಡದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಅವರು ವಿವಿಧ ಟಿ20 ಲೀಗ್‌ಗಳಲ್ಲಿ ಆಡುತ್ತಿದ್ದು, ಐಪಿಎಲ್‌ ಹರಾಜು ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ.

8 ವರ್ಷ ಬಳಿಕ ರಣಜಿ ಟ್ರೋಫಿಗೆ ಶ್ರೀಶಾಂತ್‌!

ತಿರುವನಂತಪುರಂ: ವೇಗದ ಬೌಲರ್‌ ಶ್ರೀಶಾಂತ್‌ 8 ವರ್ಷಗಳ ಬಳಿಕ ರಣಜಿ ಟ್ರೋಫಿಯಲ್ಲಿ ಆಡುವ ಸಾಧ್ಯತೆ ಇದೆ. ಬುಧವಾರ ಪ್ರಕಟಗೊಂಡ 20 ಆಟಗಾರರ ಕೇರಳ ರಣಜಿ ತಂಡದಲ್ಲಿ 39 ವರ್ಷದ ಶ್ರೀಶಾಂತ್‌ ಸ್ಥಾನ ಪಡೆದಿದ್ದಾರೆ. 2013ರಲ್ಲಿ ಕೊನೆ ಬಾರಿಗೆ ಅವರು ಪ್ರಥಮ ದರ್ಜೆ ಪಂದ್ಯವನ್ನಾಡಿದ್ದರು.

2013ರ ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಸಿಲುಕಿ 7 ವರ್ಷ ಕ್ರಿಕೆಟ್‌ನಿಂದ ದೂರವಿದ್ದ ಶ್ರೀಶಾಂತ್‌, ಕೋರ್ಟ್‌ ಕ್ಲೀನ್‌ಚಿಟ್‌ ನೀಡಿದ ಬಳಿಕ ಕಳೆದ ವರ್ಷ ಕೇರಳ ಪರ ಮುಷ್ತಾಕ್‌ ಅಲಿ ಟಿ20, ವಿಜಯ್‌ ಹಜಾರೆ ಏಕದಿನ ಪಂದ್ಯಗಳನ್ನಾಡಿದ್ದರು. 2022ರ ಐಪಿಎಲ್‌ ಹರಾಜಿನಲ್ಲೂ ಶ್ರೀಶಾಂತ್‌ ಪಾಲ್ಗೊಳ್ಳಲಿದ್ದು, ಮತ್ತೊಮ್ಮೆ ಟೂರ್ನಿಯಲ್ಲಿ ಆಡಲು ಉತ್ಸುಕರಾಗಿದ್ದಾರೆ.

ಭಾರತ ತಂಡದ ಬಾಗಿಲು ಬಂದ್‌: ರಣಜಿಗೆ ಇಶಾಂತ್‌, ವೃದ್ಧಿ ಗೈರು!

ನವದೆಹಲಿ: ಶ್ರೀಲಂಕಾ ವಿರುದ್ಧ ಟೆಸ್ಟ್‌ ಸರಣಿಗೆ ತಮ್ಮನ್ನು ಭಾರತ ತಂಡಕ್ಕೆ ಆಯ್ಕೆ ಮಾಡುವುದಿಲ್ಲ ಎಂದು ಖಚಿತವಾದ ಬಳಿಕ ವಿಕೆಟ್‌ ಕೀಪರ್‌ ಬ್ಯಾಟರ್‌ ವೃದ್ಧಿಮಾನ್‌ ಸಾಹ ಹಾಗೂ ವೇಗಿ ಇಶಾಂತ್‌ ಶರ್ಮಾ (Ishant Sharma) ರಣಜಿ ಟ್ರೋಫಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. 

ರಿಷಭ್‌ ಪಂತ್‌ (Rishabh Pant) ಮೊದಲ ಆಯ್ಕೆಯಾಗಿದ್ದು, ಕೋನಾ ಭರತ್‌ರನ್ನು ಬೆಳೆಸಲು ಆಯ್ಕೆಗಾರರು ನಿರ್ಧರಿಸಿದ್ದಾರೆ. ಹೀಗಾಗಿ ತಮ್ಮನ್ನು ಆಯ್ಕೆ ಮಾಡುವುದಿಲ್ಲ ಎಂದು ಬಿಸಿಸಿಐ ಆಯ್ಕೆ ಸಮಿತಿ 37 ವರ್ಷದ ಸಾಹಗೆ ಮನವರಿಕೆ ಮಾಡಿದೆ ಎನ್ನಲಾಗಿದ್ದು, ಇದೇ ಕಾರಣಕ್ಕೆ ಅವರು ರಣಜಿಯಲ್ಲೂ ಆಡದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇನ್ನು ಬುಮ್ರಾ, ಶಮಿ, ಸಿರಾಜ್‌ ಅಗ್ರ 3 ಬೌಲರ್‌ಗಳೆನಿಸಿದ್ದು ಶಾರ್ದೂಲ್‌, ಉಮೇಶ್‌, ಪ್ರಸಿದ್ಧ್‌ಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯುತ್ತಿದೆ. ಹೀಗಾಗಿ 33 ವರ್ಷದ ಇಶಾಂತ್‌ಗೂ ಭಾರತ ತಂಡದ ಬಾಗಿಲು ಮುಚಿದಂತೆನಿಸಿದೆ. ಈ ಇಬ್ಬರ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಬದುಕು ಬಹುತೇಕ ಮಕ್ತಾಯಗೊಂಡಂತೆಯೇ ಲೆಕ್ಕ ಎಂದು ವಿಶ್ಲೇಷಿಸಲಾಗುತ್ತಿದೆ.

click me!