* ಗುಜರಾತ್ ಟೈಟಾನ್ಸ್ ಎದುರು ಭರ್ಜರಿ ಗೆಲುವು ಸಾಧಿಸಿದ ಆರ್‌ಸಿಬಿ
* ಆಕರ್ಷಕ ಅರ್ಧಶತಕ ಸಿಡಿಸಿ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ವಿರಾಟ್ ಕೊಹ್ಲಿ
* ಈ ಗೆಲುವಿನೊಂದಿಗೆ ಆರ್‌ಸಿಬಿ ಪ್ಲೇ ಆಫ್ ಕನಸು ಜೀವಂತ
ಮುಂಬೈ(ಮೇ.20): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಮಹತ್ವದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಗುಜರಾತ್ ಟೈಟಾನ್ಸ್ ಎದುರು 54 ಎಸೆತಗಳಲ್ಲಿ 73 ರನ್ ಸಿಡಿಸುವ ಮೂಲಕ ಆರ್‌ಸಿಬಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿರುವ ಬಗ್ಗೆ ತುಟಿಬಿಚ್ಚಿದ್ದು, ಗುಜರಾತ್ ಟೈಟಾನ್ಸ್ ಎದುರಿನ ಪಂದ್ಯಕ್ಕೂ ಮುನ್ನ ದಿನ ಸತತ 90 ನಿಮಿಷಗಳ ಕಾಲ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿರುವುದಾಗಿ ವಿರಾಟ್ ಕೊಹ್ಲಿ ಹೇಳಿದ್ದಾರೆ. ಈ ಆವೃತ್ತಿಯಲ್ಲಿ ತಾವು ತಂಡಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ ಎನ್ನುವುದರ ಬಗ್ಗೆ ಬೇಸರವಾಗಿತ್ತು ಎಂದು ಹೇಳಿದ್ದಾರೆ. ಗುಜರಾತ್ ಟೈಟಾನ್ಸ್ ನೀಡಿದ್ದ 169 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ ಶತಕದ ಜತೆಯಾಟವಾಡಿದರು. ನಾಯಕ ಫಾಫ್ ಕೇವಲ 38 ಎಸೆತಗಳಲ್ಲಿ 44 ರನ್ ಸಿಡಿಸಿದರು. ಇನ್ನು ಕೊನೆಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 18 ಎಸೆತಗಳಲ್ಲಿ ಅಜೇಯ 40 ರನ್ ಸಿಡಿಸುವ ಮೂಲಕ ಇನ್ನೂ 10 ಎಸೆತಗಳು ಭಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ನಾನು ಇದೇ ರೀತಿ ಆಡಲು ಬಯಸುತ್ತೇನೆ. ಇದು ನಮ್ಮ ಪಾಲಿಗೆ ಸಾಕಷ್ಟು ಮಹತ್ವದ ಪಂದ್ಯವಾಗಿತ್ತು. ನಾನು ತಂಡಕ್ಕೆ ಏನೂ ಒಳ್ಳೆಯ ಕೊಡುಗೆ ನೀಡಲು ಸಾಧ್ಯವಾಗಲಿಲ್ಲವಲ್ಲ ಎನ್ನುವುದರ ಬಗ್ಗೆ ಬೇಸರವಿತ್ತೇ ಹೊರತು, ನಂಬರ್‌ಗಳ ಬಗ್ಗೆ ಹೆಚ್ಚು ಯೋಚಿಸಿಲ್ಲ. ಇಂದಿನ ಪಂದ್ಯದಲ್ಲಿ ನಾನು ತಂಡಕ್ಕೆ ಒಳ್ಳೆಯ ಕೊಡುಗೆ ನೀಡಲು ಸಾಧ್ಯವಾಯಿತು. ನಮ್ಮ ಮೇಲಿರುವ ನಿರೀಕ್ಷೆಯ ಬಾರವನ್ನು ಬದಿಗಿಟ್ಟು ಆಡಬೇಕು. ನಾನು ಇಂದಿನ ಪಂದ್ಯಕ್ಕೂ ಮುನ್ನ ಸಾಕಷ್ಟು ಕಠಿಣ ಪರಿಶ್ರಮಪಟ್ಟಿದ್ದೇನೆ. ಗುಜರಾತ್ ಟೈಟಾನ್ಸ್ ಎದುರಿನ ಪಂದ್ಯಕ್ಕೂ ಮುನ್ನ ದಿನ ನೆಟ್ಸ್‌ನಲ್ಲಿ ನಾನು 90 ನಿಮಿಷಗಳ ಕಾಲ ಅಭ್ಯಾಸ ನಡೆಸಿದ್ದೆ. ನಾನು ಮೈದಾನಕ್ಕಿಳಿಯುವ ಮುನ್ನ ಯಾವುದೇ ಒತ್ತಡವಿಲ್ಲದೇ ರೆಡಿಯಾಗಿ ಮೈದಾನ ಪ್ರವೇಶಿಸಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
Virat Kohli ಐಪಿಎಲ್ ಟಿ20 ಕ್ರಿಕೆಟ್‌ನಲ್ಲಿ ಹೊಸ ಮೈಲುಗಲ್ಲು ನೆಟ್ಟ ಕಿಂಗ್ ಕೊಹ್ಲಿ..!
33 ವರ್ಷದ ವಿರಾಟ್ ಕೊಹ್ಲಿ, ತಮ್ಮ ಏರಿಳಿತದಲ್ಲೂ ಜತೆಯಾಗಿ ನಿಂತ ಎಲ್ಲಾ ಅಭಿಮಾನಿಗಳಿಗೆ ತಾವು ಚಿರಋಣಿಗಳಾಗಿರುವುದಾಗಿ ಆರ್‌ಸಿಬಿ ಮಾಜಿ ನಾಯಕ ತಿಳಿಸಿದ್ದಾರೆ. ತಾವು ಈ ಬಾರಿಯ ಒಳ್ಳೆಯ ರೀತಿಯಲ್ಲಿ ರನ್ ಗಳಿಸದಿದ್ದರೂ ಸಹಾ ಅಭಿಮಾನಿಗಳು ನನ್ನ ಬೆಂಬಲಕ್ಕೆ ಹಿಂದೆಂದಿಗಿಂತಲೂ ಹೆಚ್ಚಾಗಿಯೇ ನೆರವಿಗೆ ಬಂದಿದ್ದಾರೆ. ಇಷ್ಟು ಪ್ರೀತಿಯನ್ನು ನಾನು ಹಿಂದೆಂದಿಗೂ ಕಂಡಿರಲಿಲ್ಲ ಎಂದು ಕಿಂಗ್ ಕೊಹ್ಲಿ ಹೇಳಿದ್ದಾರೆ.
ಸದ್ಯ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 14 ಪಂದ್ಯಗಳನ್ನಾಡಿ 8 ಗೆಲುವು ಹಾಗೂ 7 ಸೋಲುಗಳೊಂದಿಗೆ 16 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ 16 ಅಂಕಗಳನ್ನು ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ಸೋಲು ಕಂಡರೆ ಅನಾಯಾಸವಾಗಿ ಪ್ಲೇ ಆಫ್‌ಗೆ ಲಗ್ಗೆಯಿಡಲಿದೆ.