* ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಆಗಸ್ಟ್ 30ರಿಂದ ಆರಂಭ
* ಇಂದಿನಿಂದ ಲಂಕಾ ಚರಣದ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆರಂಭ
* ಟಿಕೆಟ್ ಎಲ್ಲಿ ಖರೀದಿಸಬೇಕು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ
ಬೆಂಗಳೂರು(ಆ.17): ಇದೇ ಆಗಸ್ಟ್ 30ರಿಂದ ಆರಂಭವಾಗಲಿರುವ ಬಹುನಿರೀಕ್ಷಿತ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇಂದಿನಿಂದ ಶ್ರೀಲಂಕಾ ಅವತರಣಿಕೆಯ ಏಷ್ಯಾಕಪ್ ಟೂರ್ನಿಯ ಟಿಕೆಟ್‌ಗಳ ಮಾರಾಟವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆರಂಭಿಸಿದೆ. ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, " 2023ರ ಎಸಿಸಿ ಪುರುಷರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಆತಿಥ್ಯ ವಹಿಸಿದೆ. ಇದೀಗ ಶ್ರೀಲಂಕಾ ಅವತರಣಿಕೆಯ ಟಿಕೆಟ್ ಮಾರಾಟವನ್ನು ಇಂದು ಆರಂಭಿಸಿದ್ದೇವೆ ಎಂದು ತಿಳಿಸಲು ಸಂತೋಷ ಪಡುತ್ತಿದ್ದೇವೆ. ಶ್ರೀಲಂಕಾ ಲೆಗ್‌ನ ಮೊದಲ ಹಂತದ ಟಿಕೆಟ್‌ಗಳನ್ನು ಆಗಸ್ಟ್ 17 ಮಧ್ಯಾಹ್ನ ಪಾಕಿಸ್ತಾನ ಕಾಲಮಾನ 12 ಗಂಟೆಯಿಂದ ಪ್ರಾರಂಭವಾಗಲಿದೆ" ಎಂದು ತಿಳಿಸಿದೆ.
ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಟಿಕೆಟ್‌ಗಳು pcb.bookme.pk ವೆಬ್‌ಸೈಟ್‌ನಲ್ಲಿ ಲಭ್ಯವಿರಲಿವೆ. ಈ ಕುರಿತಂತೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ತನ್ನ ಅಧಿಕೃತ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದೆ.
"ರಜೆ ಇದೆ, ಆದ್ರೂ...?": ವಿರಾಟ್ ಕೊಹ್ಲಿ ವರ್ಕೌಟ್ ಬಗ್ಗೆ ಹೇಳಿದ್ದೇನು? ವಿಡಿಯೋ ವೈರಲ್
ಇನ್ನು ಶ್ರೀಲಂಕಾದಲ್ಲಿ ನಡೆಯಲಿರುವ ಎರಡನೇ ಚರಣದ ಟಿಕೆಟ್ ಮಾರಾಟವು ಆಗಸ್ಟ್ 17ರಂದು ಪಾಕಿಸ್ತಾನ ಕಾಲಮಾನ ಸಂಜೆ 6.30ಕ್ಕೆ ಆರಂಭವಾಗಲಿವೆ. ಇನ್ನು ಎರಡನೇ ಚರಣದ ಟಿಕೆಟ್ ಮಾರಾಟದ ವೇಳೆ ಬಹುನಿರೀಕ್ಷಿತ ಸೆಪ್ಟೆಂಬರ್ 02ರಂದು ನಡೆಯಲಿರುವ ಭಾರತ-ಪಾಕಿಸ್ತಾನ ನಡುವಿನ ಪಂದ್ಯಾಟವೂ ಸೇರಿದೆ.
ಫೈನಲ್ ಸೇರಿದಂತೆ ಶ್ರೀಲಂಕಾದಲ್ಲಿ ಒಟ್ಟು 9 ಪಂದ್ಯಗಳು ನಡೆಯಲಿವೆ. ಇನ್ನು ಶ್ರೀಲಂಕಾ ತಂಡವು ಆಗಸ್ಟ್ 31ರಂದು ಪಲ್ಲೆಕೆಲೆ ಅಂತಾರಾಷ್ಟ್ರೀಯ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.
ಇನ್ನು ಕಳೆದ ವಾರವಷ್ಟೇ ಏಷ್ಯಾಕಪ್ ಟೂರ್ನಿಯ ಪಾಕಿಸ್ತಾನ ಚರಣದ ಪಂದ್ಯಗಳ ಟಿಕೆಟ್ ಮಾರಾಟಕ್ಕೆ ಇಡಲಾಗಿತ್ತು. ಆತಿಥೇಯ ಪಾಕಿಸ್ತಾನ ಕ್ರಿಕೆಟ್ ತಂಡವು ಆಗಸ್ಟ್ 30ರಂದು ನೇಪಾಳ ವಿರುದ್ದ ಕಣಕ್ಕಿಳಿಯುವ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ.
6 ತಂಡಗಳನ್ನು ತಲಾ 3 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಭಾರತ, ಪಾಕಿಸ್ತಾನ, ನೇಪಾಳ ‘ಎ’ ಗುಂಪಿನಲ್ಲಿದ್ದು, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ‘ಬಿ’ ಗುಂಪಿನಲ್ಲಿವೆ. ಗುಂಪು ಹಂತದಲ್ಲಿ ಪ್ರತಿ ತಂಡ ಇನ್ನುಳಿದ 2 ತಂಡದ ವಿರುದ್ಧ ಒಮ್ಮೆ ಸೆಣಸಲಿದೆ. ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆವ ತಂಡಗಳು ಸೂಪರ್-4 ಹಂತಕ್ಕೇರಲಿವೆ. ಸೂಪರ್-4ನಲ್ಲಿ ಪ್ರತಿ ತಂಡ ಇನ್ನುಳಿದ 3 ತಂಡದ ವಿರುದ್ಧ ಒಮ್ಮೆ ಆಡಲಿದ್ದು, ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನ ಪಡೆಯುವ ತಂಡಗಳು ಫೈನಲ್‌ಗೇರಲಿವೆ.
ಟೀಂ ಇಂಡಿಯಾಗೆ ಗುಡ್ ನ್ಯೂಸ್: ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ರಿಷಭ್ ಪಂತ್..! ವಿಡಿಯೋ ವೈರಲ್
6 ತಂಡಗಳ ಟೂರ್ನಿ ಆಗಸ್ಟ್ 30ರಿಂದ ಸೆಪ್ಟೆಂಬರ್ 17ರ ವರೆಗೆ ನಡೆಯಲಿದ್ದು, ಪಾಕಿಸ್ತಾನದ ಮುಲ್ತಾನ್, ಲಾಹೋರ್ ಒಟ್ಟು 4, ಶ್ರೀಲಂಕಾದ ಕ್ಯಾಂಡಿ ಹಾಗೂ ಕೊಲಂಬೊ ಫೈನಲ್ ಸೇರಿ 9 ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಟೂರ್ನಿಯ ಉದ್ಘಾಟನಾ ಪಂದ್ಯ ಮುಲ್ತಾನ್‌ನಲ್ಲಿ ನಡೆಯಲಿದ್ದು, ಪಾಕ್-ನೇಪಾಳ ಮುಖಾಮುಖಿಯಾಗಲಿವೆ. ಒಂದು ವೇಳೆ ಭಾರತ-ಪಾಕ್ ಸೂಪರ್-4 ಹಂತಕ್ಕೇರಿದರೆ ಉಭಯ ತಂಡಗಳ ಪಂದ್ಯ ಸೆಪ್ಟೆಂಬರ್ 10ರಂದು ಕೊಲಂಬೊದಲ್ಲಿ ನಡೆಯಲಿದೆ.
ಇನ್ನು ಇದಾದ ಬಳಿಕ ಒಂದು ವೇಳೆ ಸೂಪರ್-4 ಹಂತದಲ್ಲಿ ಅದ್ಬುತ ಪ್ರದರ್ಶನ ತೋರುವ ಮೂಲಕ ಭಾರತ ಹಾಗೂ ಪಾಕಿಸ್ತಾನ ತಂಡಗಳು ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದರೆ, ಸೆಪ್ಟೆಂಬರ್ 17ರಂದು ಏಷ್ಯಾಕಪ್ ಫೈನಲ್‌ನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆಯಿದೆ. ಏಷ್ಯಾಕಪ್ ಫೈನಲ್ ಪಂದ್ಯಕ್ಕೆ ಕೊಲಂಬೊದ ಪ್ರೇಮದಾಸ ಸ್ಟೇಡಿಯಂ ಸಾಕ್ಷಿಯಾಗಲಿದೆ.