
ಬೆಂಗಳೂರು: 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 15 ವರ್ಷದ ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಅಕ್ಷರಶಃ ಅಬ್ಬರಿಸುತ್ತಿದ್ದಾರೆ. ವಿಶ್ವ ದರ್ಜೆಯ ಎದುರಾಳಿ ಬೌಲರ್‌ಗಳನ್ನು ವೈಭವ್ ಸೂರ್ಯವಂಶಿ ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಸದ್ಯ ಕ್ವಾಲಿಫೈಯರ್-2 ಪಂದ್ಯಕ್ಕೂ ಮುನ್ನ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದರ ಜತೆಗೆ ಆರೆಂಜ್ ಕ್ಯಾಪ್ ಕೂಡಾ ತಮ್ಮದಾಗಿಸಿಕೊಂಡಿದ್ದಾರೆ.
ಐಪಿಎಲ್ ಎಲಿಮಿನೇಟರ್ ಸನ್‌ರೈಸರ್ಸ್ ಹೈದರಾಬಾದ್ ಎದುರು ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳನ್ನು ಎದುರಿಸಿ 97 ರನ್ ಚಚ್ಚುವ ಮೂಲಕ ರಾಜಸ್ಥಾನ ರಾಯಲ್ಸ್ ತಂಡವು ಕ್ವಾಲಿಫೈಯರ್-2 ಗೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು 30 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ವೈಭವ್ ಅವರನ್ನು 1.10 ಕೋಟಿ ನೀಡಿ ಖರೀದಿಸಿತ್ತು. ವೈಭವ್ ಸೂರ್ಯವಂಶಿ ಅವರ ಈ ಟ್ಯಾಲೆಂಟ್ ಗಮನಿಸಿದ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಅವರನ್ನು ತನ್ನಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸಲಿದೆ. ಆದರೆ ಇನ್ನುಳಿದ ಫ್ರಾಂಚೈಸಿಗಳು ಒಂದು ವೇಳೆ ವೈಭವ್ ಹರಾಜಿಗೆ ಹೆಸರು ರಿಜಿಸ್ಟರ್ ಮಾಡಿದರೆ ಕೋಟ್ಯಾಂತರ ರುಪಾಯಿ ಸುರಿಯಲು ರೆಡಿಯಾಗಿವೆ. ಹೀಗಿರುವಾಗಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಆಡಿದ ಸ್ಪೋಟಕ ಇನ್ನಿಂಗ್ಸ್ ನೋಡಿ ಆಕಾಶ್ ಅಚ್ಚರಿ ಭವಿಷ್ಯ ನುಡಿದಿದ್ದಾರೆ. 'ವೈಭವ್ ಸೂರ್ಯವಂಶಿ ಒಂದು ವೇಳೆ ಐಪಿಎಲ್ ಹರಾಜಿಗೆ ಬಂದರೆ ಐಪಿಎಲ್ ಹರಾಜಿನ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಹರಾಜಾಗಲಿದ್ದಾರೆ. ಆದರೆ ರಾಜಸ್ಥಾನ ರಾಯಲ್ಸ್, ವೈಭವ್ ಸೂರ್ಯವಂಶಿ ಅವರನ್ನು ಅಷ್ಟು ಸುಲಭಕ್ಕೆ ತಂಡದಿಂದ ರಿಲೀಜ್ ಮಾಡುವುದಿಲ್ಲ' ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಇನ್ನು ಮುಂದುವರೆದು, 'ಐಪಿಎಲ್ ಹರಾಜಿನಲ್ಲಿ ರಿಷಭ್ ಪಂತ್ 27 ಕೋಟಿ ರುಪಾಯಿಗೆ ಹರಾಜಾಗುವ ಮೂಲಕ ದುಬಾರಿ ಮೊತ್ತಕ್ಕೆ ಹರಜಾದ ಆಟಗಾರ ಎನಿಸಿಕೊಂಡಿದ್ದಾರೆ. ಇದುವರೆಗೂ ಯಾವ ಆಟಗಾರರು 30 ಕೋಟಿಗಿಂತ ಹೆಚ್ಚಿಗೆ ಮೊತ್ತಕ್ಕೆ ಹರಾಜಾಗಿಲ್ಲ. ಆದರೆ ಒಂದು ವೇಳೆ ವೈಭವ್ ಸೂರ್ಯವಂಶಿ ಹರಾಜಿಗೆ ಬಂದರೆ 30 ಕೋಟಿ ಇರಲಿ, ಕನಿಷ್ಠ 30, 32, 33 ಕೋಟಿ ರುಪಾಯಿ ಸಿಗಬಹುದು. ಒಂದು ವೇಳೆ ಫ್ರಾಂಚೈಸಿಯ ಪರ್ಸ್ ಅನ್ನು 200 ಕೋಟಿ ರುಪಾಯಿಗೆ ಹೆಚ್ಚಿಸಿದರೆ, ವೈಭವ್ ಸೂರ್ಯವಂಶಿಗೆ ಕನಿಷ್ಠ 50 ಕೋಟಿ ರುಪಾಯಿ ಹರಾಜಾಗಬಹುದು' ಎಂದು ಹೇಳಿದ್ದಾರೆ.
ವೈಭವ್ ಸೂರ್ಯವಂಶಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅಕ್ಷರಶಃ ಅಬ್ಬರಿಸುತ್ತಿದ್ದಾರೆ. ಇದುವರೆಗೂ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 15 ಪಂದ್ಯಗಳನ್ನಾಡಿ 45ರ ಸರಾಸರಿಯಲ್ಲಿ ಒಂದು ಶತಕ ಹಾಗೂ ನಾಲ್ಕು ಅರ್ಧಶತಕ ಸಹಿತ 680 ರನ್ ಸಿಡಿಸಿದ್ದಾರೆ. ಇದಷ್ಟೇ ಅಲ್ಲದೇ ಐಪಿಎಲ್ ಸೀಸನ್‌ವೊಂದರಲ್ಲಿ 65 ಸಿಕ್ಸರ್ ಸಿಡಿಸುವ ಮೂಲಕ, ಅತಿಹೆಚ್ಚು ಸಿಕ್ಸರ್ ಸಿಡಿಸಿದ ಅಪರೂಪದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.