
ನ್ಯೂಯಾರ್ಕ್: ಟೀಂ ಇಂಡಿಯಾ ವೇಗಿ ಆರ್ಶದೀಪ್ ಸಿಂಗ್ ಕುರಿತಾಗಿ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಅವರ ಜನಾಂಗೀಯ ನಿಂದನೆಯ ಕುರಿತಂತೆ ಮತ್ತೊಮ್ಮೆ ಹರ್ಭಜನ್ ಸಿಂಗ್ ಗುಡುಗಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಆರ್ಶದೀಪ್ ಸಿಂಗ್ ಬೌಲಿಂಗ್ ಮಾಡುವ ಸಂದರ್ಭದಲ್ಲಿ ಸಿಖ್ ಜನಾಂಗದ ಕುರಿತಂತೆ ಲೇವಡಿ ಮಾಡಿದ್ದಾರು. ಇದು ವಿವಾದಕ್ಕೆ ಈಡಾಗುತ್ತಿದ್ದಂತೆಯೇ ಕಮ್ರಾನ್ ಅಕ್ಮಲ್ ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದರು.
ಅಷ್ಟಕ್ಕೂ ಆಗಿದ್ದೇನು?
ಕಳೆದ ಭಾನುವಾರ ಕ್ರಿಕೆಟ್ ಜಗತ್ತಿನ ಬದ್ದ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ನ್ಯೂಯಾರ್ಕ್‌ನ ನಾಸೌ ಕೌಂಟಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿದ್ದವು. ಪಂದ್ಯಕ್ಕೆ ಮಳೆ ಅಡ್ಡಿಯನ್ನುಂಟು ಮಾಡಿದ್ದರಿಂದ ಈ ಪಂದ್ಯವು ತಡರಾತ್ರಿಯವರೆಗೂ ಸಾಗಿತು. ಭಾರತ ನೀಡಿದ್ದ 120 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ್ದ ಪಾಕಿಸ್ತಾನ ತಂಡವು ಗೆಲುವಿನತ್ತ ದಾಪುಗಾಲು ಹಾಕಿತಾದರೂ, ಕೊನೆಯಲ್ಲಿ ಭಾರತ ಮಿಂಚಿನ ದಾಳಿ ನಡೆಸಿ 6 ರನ್ ಅಂತರದಲ್ಲಿ ಗೆಲುವು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಯುಎಸ್‌ಎ ಎದುರಿನ ಪಂದ್ಯಕ್ಕೆ ಭಾರತ ಕ್ರಿಕೆಟ್ ತಂಡ ಪ್ರಕಟ; ಕೊನೆಗೂ ಒಂದು ಬದಲಾವಣೆಗೆ ಮುಂದಾದ ರೋಹಿತ್ ಪಡೆ
ಈ ಪಂದ್ಯದ ಕೊನೆಯಲ್ಲಿ ARY ನ್ಯೂಸ್‌ನಲ್ಲಿ ಕ್ರಿಕೆಟ್ ವಿಶ್ಲೇಷಕರಾಗಿ ಪಾಲ್ಗೊಂಡಿದ್ದ ಅಕ್ಮಲ್, ಕೊನೆಯ ಓವರ್‌ನಲ್ಲಿ ಪಾಕಿಸ್ತಾನ ತಂಡವು ಗೆಲ್ಲಲು 18 ರನ್ ಅಗತ್ಯವಿತ್ತು. ಈ ಸಂದರ್ಭದಲ್ಲಿ ಮಾತನಾಡಿದ್ದ ಅಕ್ಮಲ್, "ನೋಡಿ ಏನು ಬೇಕಾದರೂ ಆಗಬಹುದು. ಕೊನೆಯ ಓವರ್ ಆರ್ಶದೀಪ್ ಬೌಲಿಂಗ್ ಮಾಡಬೇಕಾಗುತ್ತದೆ. ಅವರೇನು ಉತ್ತಮ ಲಯದಲ್ಲಿ ಇದ್ದಂತೆ ಕಾಣುತ್ತಿಲ್ಲ. ಅದರಲ್ಲೂ ಬೇರೆ ಈಗ ಸಮಯ 12ರ ಗಡಿ ದಾಟಿದೆ ಎಂದು ಹೇಳಿ ನಗೆಯಾಡಿದ್ದಾರೆ". ಅಂದರೆ 12 ಗಂಟೆಯ ನಂತರ ಸಿಖ್‌ರೇನು ಮಾಡುತ್ತಾರೆ ಎಂಬರ್ಥದಲ್ಲಿ ಕಮ್ರಾನ್ ಅಕ್ಮಲ್ ವ್ಯಂಗ್ಯವಾಡಿದ್ದರು.
ಕಮ್ರಾನ್ ಅಕ್ಮಲ್ ಅವರ ಈ ಲೇವಡಿ ಬೆಳಗಾಗುತ್ತಿದ್ದಂತೆಯೇ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ದೇಶ ವಿಭಜನೆಯ ಸಂದರ್ಭದಲ್ಲಿ ನಿಮ್ಮ ತಾಯಿ, ಸಹೋದರಿಯರನ್ನು ಉಳಿಸಿದ್ದು ಇದೇ ಸಿಖ್ಖರು ಎಂದು ಹೇಳಿದ್ದರು.
ವಿವಾದ ದೊಡ್ಡದಾಗುತ್ತಿದ್ದಂತೆಯೇ ಕಮ್ರಾನ್ ಅಕ್ಮಲ್, ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. "ನನ್ನ ಇತ್ತೀಚಿನ ಹೇಳಿಕೆ ಕುರಿತಂತೆ ಸಿಖ್ ಸಮುದಾಯ ಹಾಗೂ ಹರ್ಭಜನ್ ಸಿಂಗ್ ಅವರಲ್ಲಿ ಕ್ಷಮೆಯಾಚಿಸುತ್ತಿದ್ದೇನೆ. ನಾನು ಹೇಳಿದ ಮಾತು ಸರಿಯಾಗಿಲ್ಲ ಹಾಗೂ ಅವಮಾನಕಾರಿಯಾಗಿತ್ತು. ನನಗೆ ಸಿಖ್ ಸಮುದಾಯದ ಮೇಲೆ ತುಂಬಾ ಗೌರವವಿದೆ, ನನಗೆ ಯಾರನ್ನು ನೋಯಿಸುವ ಉದ್ದೇಶವಿರಲಿಲ್ಲ, ನಿಜಕ್ಕೂ ನಾನು ನಿಮ್ಮೆಲ್ಲರ ಕ್ಷಮೆ ಕೋರುತ್ತೇನೆ ಎಂದು ಕಮ್ರಾನ್ ಅಕ್ಮಲ್ ಹೇಳಿದ್ದರು.
ಈ ಬಗ್ಗೆ ಮತ್ತೆ ತಿರುಗೇಟು ನೀಡಿರುವ ಹರ್ಭಜನ್ ಸಿಂಗ್, ಕಮ್ರಾನ್ ಅಕ್ಮಲ್ ಅವರ ಮಾತುಗಳು ಕೇಳುವುದಕ್ಕೆ ಬಾಲಿಷವಾಗಿವೆ. ನಾಲಾಯಕ್‌ಗಳು ಮಾತ್ರ ಹೀಗೆ ಹೇಳಲು ಸಾಧ್ಯ ಎಂದು ಭಜ್ಜಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಾಷೆಗೂ ಯಾರೂ ಯಾವ ಧರ್ಮದ ಬಗ್ಗೆ ಲೇವಡಿ ಮಾಡಬಾರದು ಎನ್ನುವ ಅರಿವು ಅಕ್ಮಲ್‌ಗೆ ಇರಬೇಕು ಎಂದು ಭಜ್ಜಿ ಗುಡುಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.